ನವದೆಹಲಿ: ದಕ್ಷಿಣ ಕೊರಿಯಾದ ಹುಂಡೈ ಕಂಪನಿಯು ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೂಲಕ ₹25 ಸಾವಿರ ಕೋಟಿ ಬಂಡವಾಳ ಸಂಗ್ರಹಿಸಲು ನಿರ್ಧರಿಸಿದೆ. ಈ ಸಂಬಂಧ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಗೆ (ಸೆಬಿ) ಕರಡು ದಾಖಲೆ ಪತ್ರಗಳನ್ನು ಸಲ್ಲಿಸಿದೆ.
ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ) ಸಂಗ್ರಹಿಸಿದ್ದ ₹21 ಸಾವಿರ ಕೋಟಿಯು ಇಲ್ಲಿಯವರೆಗೆ ಭಾರತದಲ್ಲಿನ ಅತಿದೊಡ್ಡ ಐಪಿಒ ಮೊತ್ತವಾಗಿದೆ. ಸೆಬಿ ಅನುಮತಿ ನೀಡಿದರೆ, ಹುಂಡೈ ಐಪಿಒ ಅತಿದೊಡ್ಡದಾಗಿದೆ.
ಒಟ್ಟು 14.12 ಕೋಟಿ ಷೇರುಗಳನ್ನು ಮಾರಾಟ ಮಾಡುವ ಮೂಲಕ ಈ ಮೊತ್ತ ಸಂಗ್ರಹಿಸಲು ನಿರ್ಧರಿಸಲಾಗಿದೆ ಎಂದು ದಾಖಲೆ ಪತ್ರದಲ್ಲಿ ತಿಳಿಸಲಾಗಿದೆ.
ಹುಂಡೈ ದೇಶದ ಎರಡನೇ ಅತಿದೊಡ್ಡ ಕಾರು ತಯಾರಿಕಾ ಕಂಪನಿಯಾಗಿದೆ. ಶೇ 15ರಿಂದ 20ರಷ್ಟು ಷೇರುಗಳ ಮಾರಾಟದಿಂದ ಬಂಡವಾಳ ಸಂಗ್ರಹಿಸಲು ಪ್ರಸಕ್ತ ವರ್ಷದ ಆರಂಭದಲ್ಲಿಯೇ ಕಂಪನಿಯು ನಿರ್ಧರಿಸಿತ್ತು.
2003ರಲ್ಲಿ ಮಾರುತಿ ಸುಜುಕಿ ಕಂಪನಿಯು ಷೇರುಗಳನ್ನು ಮಾರಾಟ ಮಾಡಿ ಬಂಡವಾಳ ಕ್ರೋಡೀಕರಿಸಿತ್ತು. ಎರಡು ದಶಕದ ಬಳಿಕ ಹುಂಡೈ ಕಂಪನಿಯು ಇಂತಹದ್ದೇ ನಿರ್ಧಾರಕ್ಕೆ ಮುಂದಾಗಿರುವುದು ಭಾರತದ ಆಟೊಮೊಬೈಲ್ ವಲಯದ ಬೆಳವಣಿಗೆ ದೃಷ್ಟಿಯಿಂದ ಮಹತ್ವದ ಮೈಲುಗಲ್ಲು ಆಗಲಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.
ಕಳೆದ ವಾರದ ಓಲಾ ಎಲೆಕ್ಟ್ರಾನಿಕ್ ಕಂಪನಿಯ ಐಪಿಒಗೆ ಸೆಬಿ ಅನುಮತಿ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.