ADVERTISEMENT

ಷೇರು ಪೇಟೆಯಲ್ಲಿ ಹ್ಯುಂಡೇ ಮೋಟರ್ಸ್‌ನ ಮೊದಲ ದಿನ: ಶೇ 7ರಷ್ಟು ಕುಸಿತ ದಾಖಲು

ಪಿಟಿಐ
Published 22 ಅಕ್ಟೋಬರ್ 2024, 13:17 IST
Last Updated 22 ಅಕ್ಟೋಬರ್ 2024, 13:17 IST
<div class="paragraphs"><p>ಹ್ಯುಂಡೇ ಕಾರುಗಳು</p></div>

ಹ್ಯುಂಡೇ ಕಾರುಗಳು

   

ರಾಯಿಟರ್ಸ್ ಚಿತ್ರ

ಮುಂಬೈ: ಹೂಡಿಕೆದಾರರಿಂದ ಬಂಡವಾಳ ನಿರೀಕ್ಷಿಸಿ ಷೇರು ಪೇಟೆ ಪ್ರವೇಶಿಸಿದ ದಕ್ಷಿಣ ಕೊರಿಯಾದ ಹ್ಯುಂಡೇ ಮೋಟರ್ಸ್ ಕಂಪನಿಯು ಮೊದಲ ದಿನ ಶೇ 7.12ರಷ್ಟು ಕುಸಿತ ದಾಖಲಿಸಿತು.

ADVERTISEMENT

₹30 ಸಾವಿರ ಕೋಟಿ ಬಂಡವಾಳ ನಿರೀಕ್ಷಿಸಿ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೂಲಕ ಷೇರು ಪೇಟೆಯನ್ನು ಹ್ಯುಂಡೇ ಪ್ರವೇಶಿಸಿತ್ತು. ಕೊನೆಯದಿನ ಕಂಪನಿಯು ₹27,870 ಕೋಟಿ ಬಂಡವಾಳ ಪಡೆದಿತ್ತು. ಒಟ್ಟು 9.97 ಕೋಟಿ ಷೇರುಗಳಿಗೆ ಬಿಡ್ ಕರೆಯಲಾಗಿತ್ತು. ಷೇರುಪೇಟೆಯ ಮಾಹಿತಿ ಪ್ರಕಾರ 14 ಕೋಟಿ ಷೇರುಗಳಿಗೆ ಬಿಡ್‌ ಸಲ್ಲಿಕೆಯಾಗಿವೆ. ಕಂಪನಿಯ ಷೇರುಗಳಿಗೆ ಒಟ್ಟಾರೆ 1.41 ಪಟ್ಟು ಬೇಡಿಕೆ ವ್ಯಕ್ತವಾಗಿತ್ತು.

₹1,960ರ ದರದಲ್ಲಿ ಬಿಎಸ್‌ಇನಲ್ಲಿ ಲಿಸ್ಟಿಂಗ್ ಆದ ನಂತರ ತನ್ನ ಷೇರುಪೇಟೆಯಲ್ಲಿ ಮೊದಲ ದಿನದ ವಹಿವಾಟು ನಡೆಸಿದ ಹ್ಯುಂಡೇ ಮೋಟರ್ಸ್‌, ಶೇ 1.47ರ ಆರಂಭಿಕ ಕುಸಿತ ಕಂಡಿತು. ನಂತರ ಶೇ 7.80ರ ದರದಲ್ಲಿ ಮತ್ತೆ ಕುಸಿತ ಕಂಡು ಒಂದು ಷೇರಿನ ಬೆಲೆಯು ₹1,807.05ಕ್ಕೆ ಮಾರಾಟವಾಯಿತು. ದಿನದ ಕೊನೆಯಲ್ಲಿ ಶೇ 7.12ರಷ್ಟು ಕುಸಿತದೊಂದಿಗೆ ಕಂಪನಿಯ ಷೇರು ಮೌಲ್ಯವು ₹1,820.40ಕ್ಕೆ ನಿಂತಿತು. ಬಿಎಸ್‌ಇನಲ್ಲಿ ಹ್ಯುಂಡೇ ಕಂಪನಿಯ ಮಾರುಕಟ್ಟೆ ಮೌಲ್ಯವು ₹1,47,914.98 ಕೋಟಿಯಷ್ಟಿದೆ. 

ಎನ್‌ಎಸ್‌ಇಯಲ್ಲಿ ಶೇ 7.16ರಷ್ಟು ಕುಸಿತದೊಂದಿಗೆ ಕಂಪನಿಯ ಒಂದು ಷೇರಿನ ಮೌಲ್ಯ ₹1,819.60ಕ್ಕೆ ದಿನದ ಅಂತ್ಯ ಕಂಡಿತು. ಆ ಮೂಲಕ ಉತ್ತಮ ಮಾರುಕಟ್ಟೆ ಬಂಡವಾಳ (ಎಂಕ್ಯಾಪ್) ಹೊಂದಿರುವ 5ನೇ ಮೌಲ್ಯಯುತ ಆಟೊ ಕಂಪನಿ ಎಂದೆನಿಸಿಕೊಂಡಿದೆ.

ಸದ್ಯ ಮಾರುತಿ ಸುಜುಕಿ ಕಂಪನಿಯು ₹3.75 ಲಕ್ಷ ಕೋಟಿ ಮೌಲ್ಯದೊಂದಿಗೆ ದೇಶೀಯ ವಾಹನ ತಯಾರಿಕಾ ಕ್ಷೇತ್ರದಲ್ಲಿ ಮೊದಲ ಸ್ಥಾನದಲ್ಲಿದೆ. ಮಹೀಂದ್ರಾ ಆ್ಯಂಡ್ ಮಹೀಂದ್ರಾ ಕಂಪನಿಯು ₹3,58 ಲಕ್ಷ ಕೋಟಿಯೊಂದಿಗೆ 2ನೇ ಸ್ಥಾನದಲ್ಲಿ, ಟಾಟ ಮೋಟರ್ಸ್‌ ₹3.23 ಲಕ್ಷ ಕೋಟಿಯೊಂದಿಗೆ 3ನೇ ಸ್ಥಾನದಲ್ಲಿ ಹಾಗೂ ಬಜಾಜ್ ಆಟೊ ಕಂಪನಿಯು ₹2.89 ಲಕ್ಷ ಕೋಟಿಯೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಐಷರ್‌, ಟಿವಿಎಸ್‌ ಮೋಟರ್ಸ್ ಕಂಪನಿಗಳಿವೆ.

ಹ್ಯುಂಡೇ ಕಂಪನಿಯು 1996ರಲ್ಲಿ ಭಾರತದಲ್ಲಿ ತನ್ನ ಕಾರ್ಯಾಚರಣೆ ಆರಂಭಿಸಿತು. ಸದ್ಯ 13 ಮಾದರಿಯ ಕಾರುಗಳನ್ನು ಅದು ಮಾರಾಟ ಮಾಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.