ADVERTISEMENT

ಐಸಿಎಐ: ಜೂನ್‌ 27ರಿಂದ ಸ್ಟಾರ್ಟ್‌ಅಪ್‌ ಸ್ಪೇರ್‌

​ಪ್ರಜಾವಾಣಿ ವಾರ್ತೆ
Published 24 ಮೇ 2024, 10:21 IST
Last Updated 24 ಮೇ 2024, 10:21 IST
ಐಸಿಎಐ ಅಧ್ಯಕ್ಷ ರಜನೀತ್‌ ಕುಮಾರ್‌ ಅಗರ್ವಾಲ್‌ ಕಾರ್ಯಕ್ರಮವನ್ನು ಉದ್ಘಾಟಿಸಿದರು
ಐಸಿಎಐ ಅಧ್ಯಕ್ಷ ರಜನೀತ್‌ ಕುಮಾರ್‌ ಅಗರ್ವಾಲ್‌ ಕಾರ್ಯಕ್ರಮವನ್ನು ಉದ್ಘಾಟಿಸಿದರು   

ಬೆಂಗಳೂರು: ಜೂನ್‌ 27ರಿಂದ 29ರ ವರೆಗೆ ಮೂರು ದಿನಗಳ ಕಾಲ ನಗರದ ಕರ್ನಾಟಕ ವ್ಯಾಪಾರ ಉತ್ತೇಜನ ಸಂಸ್ಥೆಯ (ಕೆಟಿಪಿಒ) ಆವರಣದಲ್ಲಿ ಸ್ಟಾರ್ಟ್‌ಅಪ್‌ ಸ್ಪೇರ್‌– 2024 ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಭಾರತೀಯ ಲೆಕ್ಕ ಪರಿಶೋಧಕ ಸಂಸ್ಥೆಯ (ಐಸಿಎಐ) ಅಧ್ಯಕ್ಷ ರಜನೀತ್‌ ಕುಮಾರ್‌ ಅಗರ್ವಾಲ್‌ ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ 100ಕ್ಕೂ ಹೆಚ್ಚು ಪ್ರದರ್ಶನಗಳು, 200ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು, 10 ಸಾವಿರಕ್ಕೂ ಹೆಚ್ಚು ಸಂದರ್ಶಕರು, ಹೂಡಿಕೆದಾರರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಕೃತಕ ಬುದ್ಧಿಮತ್ತೆ (ಎ.ಐ) ಇಂದು ಎಲ್ಲ ಕ್ಷೇತ್ರಗಳಲ್ಲೂ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಅದೇ ರೀತಿ ಚಾರ್ಟಡ್‌ ಅಕೌಂಟೆಂಟ್‌ಗಳಿಗೆ ಎ.ಐ ಕೌಶಲ ಅಗತ್ಯವಿದ್ದು, ಅದನ್ನು ವೃತ್ತಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ. ಇದಕ್ಕಾಗಿ ಸಂಸ್ಥೆಯು ಸ್ಟಾರ್ಟ್‌ಅಪ್‌ ಸ್ಪೇರ್ ಕಾರ್ಯಕ್ರಮವನ್ನು ಆಯೋಜಿಸಿದೆ. ಈ ಕಾರ್ಯಕ್ರಮದಲ್ಲಿ ಮೂರು ದಿನವೂ ವಿಚಾರ ಸಂಕಿರಣಗಳು, ಪ್ರದರ್ಶನಗಳು ನಡೆಯಲಿವೆ ಎಂದರು.

ADVERTISEMENT

ದೇಶದಲ್ಲಿ ಪ್ರಸ್ತುತ 9 ಲಕ್ಷ ಸಿ.ಎ ವಿದ್ಯಾರ್ಥಿಗಳಿದ್ದರೆ, ಇದರಲ್ಲಿ ಶೇ 44ರಷ್ಟು ವಿದ್ಯಾರ್ಥಿನಿಯರಿದ್ದಾರೆ. ಬೆಂಗಳೂರಿನಲ್ಲಿಯೇ 60 ಸಾವಿರ ವಿದ್ಯಾರ್ಥಿಗಳಿದ್ದಾರೆ. ಸಂಸ್ಥೆಯಲ್ಲಿ 4 ಲಕ್ಷ ಸದಸ್ಯರಿದ್ದು, ದೇಶದ ಪ್ರತಿ ಮೂವರು ಚಾರ್ಟಡ್‌ ಅಕೌಂಟೆಂಟ್‌ಗಳಲ್ಲಿ ಒಬ್ಬರು ಮಹಿಳೆಯರಿದ್ದಾರೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಈ ಹಿಂದಿನ ವರ್ಷಗಳ ಪ್ರಶ್ನೆಪತ್ರಿಕೆ ಮಾದರಿಗಳನ್ನು ಚಾಟ್‌ ಜಿಪಿಟಿ ಮೂಲಕ ಒದಗಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದರು.

ಕಳೆದ ವರ್ಷ ಮುಂಬೈನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ, ಈ ಬಾರಿ ಬೆಂಗಳೂರಲ್ಲಿ ಆಯೋಜನೆ ಮಾಡಲಾಗಿದೆ. ಎಲ್ಲ ರೀತಿಯ ಸ್ಟಾರ್ಟ್‌ಅಪ್‌ಗಳು ಭಾಗವಹಿಸಬಹುದಾಗಿದ್ದು, ವಿದ್ಯಾರ್ಥಿಗಳಿಗೆ ಮತ್ತು ಸಂದರ್ಶಕರಿಗೆ ಉಚಿತ ಪ್ರವೇಶ ಇರುತ್ತದೆ. ಕಾರ್ಯಕ್ರಮಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಚಿವರು, ಅಧಿಕಾರಿಗಳು, ಉದ್ಯಮಿಗಳು ಭಾಗವಹಿಸಲಿದ್ದಾರೆ ಎಂದು ಎಂಎಸ್‌ಎಂಇ ಸಮಿತಿಯ ಅಧ್ಯಕ್ಷ ಧೀರಜ್‌ ಕುಮಾರ್‌ ಖಂಡ್ರೇವಾಲ್‌ ತಿಳಿಸಿದರು. 

ಐಸಿಎಐನ ಬೆಂಗಳೂರು ಶಾಖೆಯ ಮ್ಯಾನೇಜಿಂಗ್‌ ಕಮಿಟಿಯ ಪ್ರಮೋದ್‌ ರಾಮಮೋಹನ್‌ ಹೆಗ್ಡೆ, ಕವಿತಾ ಪರಮೇಶ್‌, ಗೀತಾ ಎ.ಬಿ, ಕೋಟ ಶ್ರೀನಿವಾಸ್‌, ಅಭಯ್‌ ಕುಮಾರ್‌ ಹಾಜರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.