ನವದೆಹಲಿ: ದೇಶದಲ್ಲಿ ಅಲಂಕಾರಿಕ ಮೀನುಗಾರಿಕೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನ ಅಧೀನದಲ್ಲಿ ಬರುವ ಕೇಂದ್ರೀಯ ಸಿಹಿನೀರು ಜಲಕೃಷಿ ಸಂಸ್ಥೆಯು ‘ರಂಗೀನ್ ಮಚ್ಲಿ’ ಹೆಸರಿನ ಮೊಬೈಲ್ ಆ್ಯಪ್ ಅನ್ನು ಬಿಡುಗಡೆಗೊಳಿಸಿದೆ.
ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ (ಪಿಎಂಎಂಎಸ್‌ವೈ) ಈ ಆ್ಯಪ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಈ ಆ್ಯಪ್‌ನಲ್ಲಿ ಎಂಟು ಭಾಷೆಗಳಲ್ಲಿ ಮಾಹಿತಿ ದೊರೆಯಲಿದೆ.
ಅಲಂಕಾರಿಕ ಮೀನು ಕೃಷಿಕರು ಮತ್ತು ಅಕ್ವೇರಿಯಂ ಮಾಲೀಕರಿಗೆ ಮೀನು ಸಾಕಾಣಿಕೆ ಬಗ್ಗೆ ಮಾಹಿತಿ ಒದಗಿಸಲಿದೆ. ಗೂಗಲ್ ಪ್ಲೇ ಸ್ಟೋರ್ ಮೂಲಕ ಇದನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.
ಅಲಂಕಾರಿಕ ಮೀನುಗಳ ಸಂರಕ್ಷಣೆ, ತಳಿ ವೈವಿಧ್ಯತೆ, ಅಭಿವೃದ್ಧಿ, ನಿರ್ವಹಣೆ, ಮೀನುಗಳ ಆಹಾರ ಸೇರಿದಂತೆ ಸಮಗ್ರ ಮಾಹಿತಿ ದೊರೆಯಲಿದೆ. ಅಲ್ಲದೆ, ಹತ್ತಿರದಲ್ಲಿರುವ ಅಕ್ವೇರಿಯಂ ಅಂಗಡಿಗಳ ಬಗ್ಗೆ ಮಾಹಿತಿ ಇದೆ. ಇದರಿಂದ ಸ್ಥಳೀಯ ವ್ಯಾಪಾರಕ್ಕೆ ಉತ್ತೇಜನ ಸಿಗಲಿದೆ ಎಂದು ಕೇಂದ್ರ ಮೀನುಗಾರಿಕೆ, ಪಶು ಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.