ನವದೆಹಲಿ: ಐಡಿಬಿಐ ಬ್ಯಾಂಕ್‌ನ ಷೇರುಗಳ ಮಾರಾಟ ಪ್ರಕ್ರಿಯೆಯು ಯೋಜನೆಯಂತೆಯೇ ನಡೆಯುತ್ತಿದೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ತಿಳಿಸಿದೆ.
ಐಡಿಬಿಐ ಬ್ಯಾಂಕ್‌ನ ಷೇರು ಮಾರಾಟವನ್ನು ಮುಂದೂಡುವ ಸಾಧ್ಯತೆ ಇದೆ ಎನ್ನುವ ಮಾಧ್ಯಮಗಳ ವರದಿಯನ್ನು ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆಯು (ಡಿಐಪಿಎಎಂ) ತಳ್ಳಿಹಾಕಿದೆ. ಖರೀದಿ ಆಸಕ್ತಿ ಸೂಚಿಸಿ ಹೂಡಿಕೆದಾರರು ಅರ್ಜಿ ಸಲ್ಲಿಸಿದ್ದು, ಮುಂದಿನ ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದೆ.
ಕೇಂದ್ರ ಸರ್ಕಾರ ಮತ್ತು ಎಲ್‌ಐಸಿಯು ಐಡಿಬಿಐ ಬ್ಯಾಂಕ್‌ನಲ್ಲಿ ಹೊಂದಿರುವ ಷೇರುಪಾಲಿನಲ್ಲಿ ಶೇ 61ರಷ್ಟು ಷೇರುಗಳನ್ನು ಮಾರಾಟ ಮಾಡಲಿವೆ. ಇದಕ್ಕಾಗಿ ಜನವರಿಯಲ್ಲಿ ಖರೀದಿ ಆಸಕ್ತಿ ಸೂಚಿಸಿ ಹಲವು ಹೂಡಿಕೆದಾರರು ಬಿಡ್ ಸಲ್ಲಿಸಿದ್ದಾರೆ.
ಸದ್ಯ ಕೇಂದ್ರ ಸರ್ಕಾರ ಮತ್ತು ಎಲ್‌ಐಸಿ ಒಟ್ಟಾರೆ ಶೇ 94.72ರಷ್ಟು ಷೇರುಪಾಲನ್ನು ಬ್ಯಾಂಕ್‌ನಲ್ಲಿ ಹೊಂದಿವೆ. ಇದರಲ್ಲಿ ಕೇಂದ್ರ ಸರ್ಕಾರವು ಶೆ 30.48ರಷ್ಟು ಮತ್ತು ಎಲ್‌ಐಸಿ ಶೇ 30.24ರಷ್ಟು ಷೇರುಗಳನ್ನು ಮಾರಾಟ ಮಾಡಲಿವೆ. ಈ ಮಾರಾಟದ ಬಳಿಕ ಕೇಂದ್ರ ಮತ್ತು ಎಲ್‌ಐಸಿಯ ಪಾಲು ಶೇ 34ಕ್ಕೆ ಇಳಿಕೆ ಕಾಣಲಿದೆ.
ಅಧಿಕಾರಿಗಳ ನಿರೀಕ್ಷೆಯ ಪ್ರಕಾರ, ಏಪ್ರಿಲ್ 1ರಿಂದ ಆರಂಭ ಆಗಲಿರುವ ಮುಂದಿನ ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ಮಾರಾಟ ಪ್ರಕ್ರಿಯೆಯು ಪೂರ್ಣಗೊಳ್ಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.