ನವದೆಹಲಿ: ದ್ರವರೂಪದ ನ್ಯಾನೊ ಸತು ಮತ್ತು ದ್ರವರೂಪದ ನ್ಯಾನೊ ತಾಮ್ರ ಲಘು ಪೋಷಕಾಂಶಗಳನ್ನು ತಯಾರಿಸಲು ಇಫ್ಕೊಗೆ, ಕೇಂದ್ರ ಸರ್ಕಾರವು ಅನುಮತಿ ನೀಡಿದೆ.
ಕೃಷಿಯಲ್ಲಿ ಉತ್ಪಾದಕತೆ ಹೆಚ್ಚಿಸುವಲ್ಲಿ ಈ ಪೋಷಕಾಂಶಗಳು ಪರಿಣಾಮಕಾರಿಯಾಗಿವೆ.
‘ದೇಶದ ಕೃಷಿ ವಲಯದಲ್ಲಿ ಸಂಸ್ಥೆಯ ನ್ಯಾನೊ ತಂತ್ರಜ್ಞಾನವು ಹೆಗ್ಗುರುತು ಮೂಡಿಸಿದೆ. ಮುಂದಿನ ಮೂರು ವರ್ಷದವರೆಗೆ ಸಂಸ್ಥೆಯಿಂದ ಈ ಉತ್ಪನ್ನಗಳ ತಯಾರಿಕೆಗೆ ಕೇಂದ್ರದಿಂದ ಒಪ್ಪಿಗೆ ಸಿಕ್ಕಿದೆ’ ಎಂದು ಇಫ್ಕೊದ ವ್ಯವಸ್ಥಾಪಕ ನಿರ್ದೇಶಕ ಯು.ಎಸ್. ಅವಸ್ಥಿ ಅವರು, ‘ಎಕ್ಸ್’ನಲ್ಲಿ ತಿಳಿಸಿದ್ದಾರೆ.
ಸಸ್ಯಗಳ ಬೆಳವಣಿಗೆಗೆ ಸತು ಪ್ರಮುಖ ಲಘು ಪೋಷಕಾಂಶವಾಗಿದೆ. ಸಸ್ಯಗಳ ಎಲೆಗಳಲ್ಲಿ ಪತ್ರ ಹರಿತ್ತು ಉತ್ಪತ್ತಿ ಹಾಗೂ ಬೀಜಗಳ ಉತ್ಪಾದನೆಗೆ ತಾಮ್ರ ಪೋಷಕಾಂಶದ ಅಗತ್ಯವಿದೆ ಎಂದು ಹೇಳಿದ್ದಾರೆ.
ಈ ಎರಡು ಉತ್ಪನ್ನಗಳು ಬೆಳೆಯಲ್ಲಿ ತಲೆದೋರುವ ಸತು ಮತ್ತು ತಾಮ್ರದ ಕೊರತೆಯನ್ನು ನೀಗಿಸುತ್ತವೆ. ಸುಸ್ಥಿರ ಕೃಷಿಗೆ ಸಹಕಾರಿಯಾಗಲಿವೆ ಎಂದು ತಿಳಿಸಿದ್ದಾರೆ.
ಈಗಾಗಲೇ, ಇಫ್ಕೊದಿಂದ ದ್ರವರೂಪದ ನ್ಯಾನೊ ಯೂರಿಯಾ ಹಾಗೂ ದ್ರವರೂಪದ ನ್ಯಾನೊ ಡಿಎಪಿ ತಯಾರಿಸಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.