ವಾಷಿಂಗ್ಟನ್: ‘ಕೊರೊನಾ ವೈರಸ್‌ನಿಂದಾಗಿ ಅನಿರೀಕ್ಷಿತವಾದ ಇಳಿಕೆ ಕಂಡಿದ್ದ ಜಾಗತಿಕ ಆರ್ಥಿಕತೆ ಚಟುವಟಿಕೆಯು ಇದೀಗ ಚೇತರಿಸಿಕೊಳ್ಳುತ್ತಿದೆ. ಆದರೆ, ವೈರಸ್‌ನ ಎರಡನೇ ಹಂತ ಆರಂಭವಾದರೆ ಅದರಿಂದ ಇನ್ನೂ ಹೆಚ್ಚಿನ ಹಾನಿಯಾಗುವ ಸಾಧ್ಯತೆ ಇದೆ’ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜೋರ್ಜಿವಾ ಎಚ್ಚರಿಕೆ ನೀಡಿದ್ದಾರೆ.
‘ಕೊರೊನಾ ಹರಡುವಿಕೆ ನಿಯಂತ್ರಿಸಲು ಮತ್ತು ಆರ್ಥಿಕತೆಯನ್ನು ಕುಸಿಯದಂತೆ ತಡೆಯಲು ತೆಗೆದುಕೊಳ್ಳುತ್ತಿರುವ ವಿತ್ತೀಯ ಕ್ರಮಗಳಿಂದಾಗಿ ಈಗಾಗಲೇ ಸಾಲದ ಪ್ರಮಾಣ ಗರಿಷ್ಠ ಮಟ್ಟದಲ್ಲಿದೆ. ಹಾಗಂತ, ಸುರಕ್ಷತಾ ಕ್ರಮಗಳನ್ನೂ ಈಗಲೇ ಹಿಂಪಡೆಯಲು ಆರಂಭಿಸುವುದು ಅಷ್ಟೋಂದು ಸಮಂಜಸವಲ್ಲ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
‘ನಾವಿನ್ನೂ ಕೊರೊನಾ ಸಂಕಷ್ಟದಿಂದ ಹೊರಬಂದಿಲ್ಲ. ಸೋಂಕಿನ ಹೊಸ ಅಲೆ, ಸ್ವತ್ತಿನ ಮೌಲ್ಯ ಹಿಗ್ಗಿರುವುದು, ಸರಕುಗಳ ದರದಲ್ಲಿ ಏರಿಳಿತ, ಸ್ವ ಹಿತರಕ್ಷಣಾ ನೀತಿ ಹಾಗೂ ರಾಜಕೀಯ ಅಸ್ಥಿರತೆಯಂತಹ ಅಪಾಯಗಳು ದೃಷ್ಟಿಗೆ ಬೀಳುತ್ತಿಲ್ಲ’ ಎಂದು ಬ್ಲಾಗ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಕೆಲವು ದೇಶಗಳಲ್ಲಿ ಹೆಚ್ಚಿನ ಉದ್ಯೋಗ ನಷ್ಟವಾಗಿದೆ. ಈ ಪ್ರಮಾಣವು 2008ರ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಬಳಿಕ ಸೃಷ್ಟಿಯಾಗಿರುವ ಉದ್ಯೋಗಕ್ಕಿಂತಲೂ ಹೆಚ್ಚಿಗೆ ಇದೆ. ಬಹಳಷ್ಟು ಜನರಿಗೆ ಮತ್ತೆ ಉದ್ಯೋಗ ಸಿಗುವುದಿಲ್ಲ.
‘ವ್ಯವಸ್ಥೆಯಲ್ಲಿ ಸ್ಥಿರತೆ ಮೂಡಲು ಕೇಂದೀಯ ಬ್ಯಾಂಕ್‌ಗಳ ಮಧ್ಯೆ ಹೊಂದಾಣಿಕೆ ಮುಂದುವರಿಯಬೇಕು. ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳು ಬೆಂಬಲ ಅತ್ಯಗತ್ಯ. ಉದ್ದಿಮೆಗಳಿಗೆ ಸುಲಭವಾಗಿ ಬಂಡವಾಳ ಸಿಗುವಂತೆ ಮಾಡಲು ನಿಯಂತ್ರಣ ವ್ಯವಸ್ಥೆಗಳು ನೆರವಾಗಬೇಕಿದೆ.
ಬಿಕ್ಕಟ್ಟಿನಿ ಸಂದರ್ಭದಲ್ಲಿ ಹೊಂದಾಣಿಕೆಯ ಹಣಕಾಸು ನೀತಿ ಇರಬೇಕು.
ಹಣಕಾಸು ವಲಯಕ್ಕೆ ಸವಾಲುಗಳು
* ಉದ್ಯೋಗ ನಷ್ಟ
* ಕಂಪನಿಗಳು ದಿವಾಳಿಯಾಗುವ ಸಂಭವ
* ಉದ್ದಿಮೆಗಳ ಪುನರ್ ರಚನೆ
* ಹೂಡಿಕೆದಾರರು, ಹಣಕಾಸು ಸಂಸ್ಥೆಗಳ ನಷ್ಟ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.