ADVERTISEMENT

ಈರುಳ್ಳಿ ದರ ನಿಯಂತ್ರಣಕ್ಕೆ ಕ್ರಮ

ರಿಯಾಯಿತಿ ದರದಡಿ ಮಾರಾಟಕ್ಕೆ ಒತ್ತು– ಕೇಂದ್ರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2024, 16:07 IST
Last Updated 17 ಅಕ್ಟೋಬರ್ 2024, 16:07 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಪ್ರಸ್ತುತ ದೇಶದ ವಿವಿಧೆಡೆ ಕೆ.ಜಿ ಈರುಳ್ಳಿ ಧಾರಣೆಯು ₹75ಕ್ಕೆ ತಲುಪಿದೆ. ದೀಪಾವಳಿ ಹಬ್ಬದ ಅಂಗವಾಗಿ ಚಿಲ್ಲರೆ ಮಾರುಕಟ್ಟೆಯಲ್ಲಿ ಬೆಲೆ ನಿಯಂತ್ರಣಕ್ಕೆ ಕ್ರಮವಹಿಸಲಾಗಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯವು ಗುರುವಾರ ತಿಳಿಸಿದೆ.

ಸೆಪ್ಟೆಂಬರ್‌ 5ರಂದು ರಿಯಾಯಿತಿ ದರದಡಿ ಕೆ.ಜಿಗೆ ₹35 ದರದಲ್ಲಿ ಈರುಳ್ಳಿ ಮಾರಾಟಕ್ಕೆ ಕೇಂದ್ರ ಸರ್ಕಾರ ಚಾಲನೆ ನೀಡಿತ್ತು. ರಾಷ್ಟ್ರೀಯ ಸಹಕಾರ ಗ್ರಾಹಕರ ಮಹಾಮಂಡಳ (ಎನ್‌ಸಿಸಿಎಫ್‌), ನಾಫೆಡ್‌ ಮಳಿಗೆ, ಇ–ಕಾಮರ್ಸ್‌ ವೇದಿಕೆ, ಮದರ್‌ ಡೇರಿ ಮಳಿಗೆ ಮತ್ತು ಕೇಂದ್ರೀಯ ಭಂಡಾರದ ಮೂಲಕ ಮಾರಾಟ ಆರಂಭಿಸಿತ್ತು.

‘ರಿಯಾಯಿತಿ ದರದಡಿ ಈರುಳ್ಳಿ ಮಾರಾಟಕ್ಕೆ ಸಂಚಾರ ವಾಹನಗಳ ಸಂಖ್ಯೆಯನ್ನು 600ರಿಂದ ಒಂದು ಸಾವಿರಕ್ಕೆ ಹೆಚ್ಚಿಸಲಾಗುವುದು’ ಎಂದು ಸಚಿವಾಲಯದ ಕಾರ್ಯದರ್ಶಿ ನಿಧಿ ಖರೆ ತಿಳಿಸಿದ್ದಾರೆ. 

ADVERTISEMENT

‘ಸದ್ಯ 4.7 ಲಕ್ಷ ಟನ್‌ ಕಾಪು ದಾಸ್ತಾನು ಇದೆ. ಈ ಪೈಕಿ ರಿಯಾಯಿತಿ ದರದಡಿ ಮಾರಾಟಕ್ಕೆ ಎನ್‌ಸಿಸಿಎಫ್‌ಗೆ 91,960 ಟನ್‌ ಮತ್ತು ನಾಫೆಡ್‌ಗೆ 86,000 ಟನ್‌ ಹಂಚಿಕೆ ಮಾಡಲಾಗಿದೆ. ಗುಜರಾತ್‌, ಮಹಾರಾಷ್ಟ್ರ, ಕರ್ನಾಟಕ, ಗೋವಾ, ರಾಜಸ್ಥಾನ, ಬಿಹಾರ, ಉತ್ತರ ಪ್ರದೇಶ ಮತ್ತು ಮಣಿಪುರದಲ್ಲಿ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ’ ಎಂದು ತಿಳಿಸಿದ್ದಾರೆ. 

‘ಮಹಾರಾಷ್ಟ್ರದಿಂದ ಹೊಸ ಫಸಲು ಮಾರುಕಟ್ಟೆಗೆ ಬಂದ ಬಳಿಕ ಈರುಳ್ಳಿ ಬೆಲೆಯು ನಿಯಂತ್ರಣಕ್ಕೆ ಬರಲಿದೆ. ಸರ್ಕಾರವು ಕಾಪು ದಾಸ್ತಾನಿಗಾಗಿ ಕೆ.ಜಿ ₹28 ದರದಲ್ಲಿ ಈರುಳ್ಳಿ ಖರೀದಿಸಲಿದೆ’ ಎಂದು ಹೇಳಿದ್ದಾರೆ.

ಈರುಳ್ಳಿ ಮೇಲಿನ ಕನಿಷ್ಠ ರಫ್ತು ದರವನ್ನು ಶೇ 40ರಿಂದ ಶೇ 20ಕ್ಕೆ ಇಳಿಕೆ ಮಾಡಿದ್ದರಿಂದ ಅಲ್ಪ ಪ್ರಮಾಣದಲ್ಲಿ ಬೆಲೆ ಏರಿಕೆಯಾಗಿತ್ತು ಎಂದು ತಿಳಿಸಿದ್ದಾರೆ.

ಸಾಗಣೆಗೆ ರೈಲು ಬಳಕೆ

ಮಹಾರಾಷ್ಟ್ರದಿಂದ ದೆಹಲಿಗೆ ಇದೇ ಮೊದಲ ಬಾರಿಗೆ ರೈಲಿನ ಮೂಲಕ 1600 ಟನ್‌ ಈರುಳ್ಳಿ ಸಾಗಣೆಗೆ ಕೇಂದ್ರ ಸರ್ಕಾರವು ಕ್ರಮಕೈಗೊಂಡಿದೆ. ಇದಕ್ಕಾಗಿ ಕಂದಾ ಎಕ್ಸ್‌ಪ್ರೆಸ್‌ಗೆ ವಿಶೇಷ ಬೋಗಿಗಳನ್ನು ಅಳವಡಿಸಲಾಗಿದೆ. ಮಹಾರಾಷ್ಟ್ರದ ಲಾಸನ್‌ಗಾಂವ್‌ನಿಂದ ಹೊರಟಿರುವ ಈ ರೈಲು ಅಕ್ಟೋಬರ್‌ 20ರಂದು ದೆಹಲಿಯ ಕಿಶನ್‌ಗಂಜ್‌ ನಿಲ್ದಾಣವನ್ನು ತಲುಪಲಿದೆ ಎಂದು ನಿಧಿ ಖರೆ ತಿಳಿಸಿದ್ದಾರೆ.

ಇದರಿಂದ ಸಾಗಣೆ ವೆಚ್ಚ ತಗ್ಗಲಿದೆ. ನಾಸಿಕ್‌ನಿಂದ ದೆಹಲಿಗೆ ಒಂದು ಬೋಗಿ (56 ಟ್ರಕ್‌ಗಳಿಗೆ ಸಮ) ಈರುಳ್ಳಿ ಸಾಗಣೆಗೆ ₹70.20 ಲಕ್ಷ ವೆಚ್ಚವಾಗಲಿದೆ. ರಸ್ತೆ ಮೂಲಕ ಇಷ್ಟೇ ಪ್ರಮಾಣದ ಈರುಳ್ಳಿ ಸಾಗಣೆಗೆ ₹84 ಲಕ್ಷ ವೆಚ್ಚವಾಗಲಿದೆ. ಒಟ್ಟಾರೆ ಸಾಗಣೆ ವೆಚ್ಚದಲ್ಲಿ ₹13.80 ಲಕ್ಷ ಉಳಿತಾಯವಾಗಲಿದೆ ಎಂದು ವಿವರಿಸಿದ್ದಾರೆ. 

ದೆಹಲಿ: ₹100 ದಾಟಿದ ಟೊಮೆಟೊ ದರ

ನವದೆಹಲಿ: ದೆಹಲಿಯಲ್ಲಿ ಟೊಮೆಟೊ ಧಾರಣೆಯು ಕೆ.ಜಿಗೆ ₹100 ದಾಟಿದೆ. ಸದ್ಯ ಮಹಾರಾಷ್ಟ್ರದಲ್ಲಿ ಕಟಾವು ಆರಂಭಗೊಂಡಿದೆ. ಅಲ್ಲಿಂದ ಪೂರೈಕೆ ಹೆಚ್ಚಳವಾಗಲಿದ್ದು ಮುಂದಿನ ದಿನಗಳಲ್ಲಿ ಬೆಲೆ ಇಳಿಕೆಯಾಗಲಿದೆ’ ಎಂದು ನಿಧಿ ಖರೆ ತಿಳಿಸಿದ್ದಾರೆ.

‌‘ಬೆಲೆ ನಿಯಂತ್ರಣಕ್ಕೆ ಸರ್ಕಾರ ಕ್ರಮವಹಿಸಿದೆ. ದೆಹಲಿ ಮತ್ತು ಮುಂಬೈನಲ್ಲಿ ಎನ್‌ಸಿಸಿಎಫ್‌ ಮೂಲಕ ರಿಯಾಯಿತಿ ದರದಲ್ಲಿ ಕೆ.ಜಿಗೆ ₹65ರಂತೆ ಮಾರಾಟವನ್ನು ಮುಂದುವರಿಸಲಾಗುವುದು’ ಎಂದು ಹೇಳಿದ್ದಾರೆ.

ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಮುಂಗಾರು ಅವಧಿಯಲ್ಲಿ ಸುರಿದ ಭಾರಿ ಮಳೆಗೆ ಟೊಮೆಟೊ ಬೆಳೆ ಹಾನಿಗೀಡಾಗಿತ್ತು. ಜೊತೆಗೆ ರೋಗ ಬಾಧೆ ಕಾಣಿಸಿಕೊಂಡಿತ್ತು. ಹಾಗಾಗಿ ಈ ಎರಡು ರಾಜ್ಯದಿಂದ ಪೂರೈಕೆ ಕಡಿಮೆಯಾಗಿತ್ತು. ಇದರಿಂದ ಚಿಲ್ಲರೆ ಮಾರುಕಟ್ಟೆಯಲ್ಲಿ ಟೊಮೆಟೊ ಧಾರಣೆ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ. ಅಕ್ಟೋಬರ್‌ ಮೊದಲ ವಾರದಲ್ಲಿ ದೆಹಲಿ ಮತ್ತು ಮುಂಬೈನಲ್ಲಿ ರಿಯಾಯಿತಿ ದರದಲ್ಲಿ ₹10 ಸಾವಿರ ಕೆ.ಜಿ ಟೊಮೆಟೊ ಮಾರಾಟ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.