ನವದೆಹಲಿ: ಆದಾಯ ತೆರಿಗೆ ಪಾವತಿ ಮಾಡುವವರು ಕೇಂದ್ರ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆ ‘ಅಟಲ್ ಪಿಂಚಣಿ ಯೋಜನೆ’ಯ (ಎಪಿವೈ) ಅಡಿ ಹೆಸರು ನೋಂದಾಯಿಸಿಕೊಳ್ಳಲು ಅಕ್ಟೋಬರ್ 1ರಿಂದ ಅವಕಾಶ ಇಲ್ಲ.
ಕೇಂದ್ರ ಸರ್ಕಾರವು 2015ರ ಜೂನ್ 1ರಂದು ಅಟಲ್ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದೆ. ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವ ಉದ್ದೇಶವು ಈ ಯೋಜನೆಗೆ ಇದೆ. ಈ ಯೋಜನೆಯ ಅಡಿ ನೋಂದಾಯಿತ ಆದವರು 60 ವರ್ಷ ವಯಸ್ಸಾದ ನಂತರದಲ್ಲಿ ತಿಂಗಳಿಗೆ ಕನಿಷ್ಠ ₹ 1 ಸಾವಿರದಿಂದ ಗರಿಷ್ಠ ₹ 5 ಸಾವಿರದವರೆಗೆ ಪಿಂಚಣಿ ಪಡೆಯುತ್ತಾರೆ.
ಹೆಸರು ನೋಂದಾಯಿಸಿಕೊಂಡವರು ಕಟ್ಟುವ ಮೊತ್ತಕ್ಕೆ ಅನುಗುಣವಾಗಿ ಪಿಂಚಣಿ ಸಿಗುತ್ತದೆ.
‘ಆದಾಯ ತೆರಿಗೆ ಪಾವತಿ ಮಾಡುತ್ತಿರುವವರು ಅಥವಾ ಹಿಂದೆ ಪಾವತಿ ಮಾಡಿದ್ದವರು ಈ ಯೋಜನೆಗೆ ಸೇರ್ಪಡೆಗೊಳ್ಳಲು
ಅಕ್ಟೋಬರ್ 1ರಿಂದ ಅವಕಾಶ ಇಲ್ಲ’ ಎಂದು ಕೇಂದ್ರ ಹಣಕಾಸು ಸಚಿವಾಲಯದ ಅಧಿಸೂಚನೆ ತಿಳಿಸಿದೆ.
ಈಗಾಗಲೇ ಯೋಜನೆಯ ಅಡಿ ನೋಂದಾಯಿಸಿಕೊಂಡವರಿಗೆ ಅಥವಾ ಅಕ್ಟೋಬರ್ 1ಕ್ಕೆ ಮೊದಲು ನೋಂದಣಿ ಮಾಡಿಸಿಕೊಳ್ಳುವವರಿಗೆ ಈ ನಿರ್ಬಂಧ ಅನ್ವಯವಾಗುವುದಿಲ್ಲ.
ಅಕ್ಟೋಬರ್ 1 ಅಥವಾ ಅದರ ನಂತರ ಯೋಜನೆಯ ಅಡಿ ಹೆಸರು ನೋಂದಾಯಿಸಿಕೊಂಡ ವ್ಯಕ್ತಿಯು ಈ ಹಿಂದೆ ಆದಾಯ ತೆರಿಗೆ ಪಾವತಿ ಮಾಡಿದ್ದು ಕಂಡುಬಂದಲ್ಲಿ ಆ ವ್ಯಕ್ತಿಯ ಎಪಿವೈ ಖಾತೆಯನ್ನು ಸ್ಥಗಿತಗೊಳಿಸಲಾಗುತ್ತದೆ. ಅದುವರೆಗೆ ಆ ವ್ಯಕ್ತಿ ಎಪಿವೈ ಅಡಿ ಜಮಾ ಮಾಡಿದ್ದ ಮೊತ್ತವನ್ನು ಹಿಂದಿರುಗಿಸಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.
ಈಗಿರುವ ನಿಯಮಗಳ ಪ್ರಕಾರ 18 ವರ್ಷ ಮೇಲ್ಪಟ್ಟ ಹಾಗೂ 40 ವರ್ಷ ವಯಸ್ಸಿನ ಒಳಗಿನ ಭಾರತೀಯ ಪ್ರಜೆ ಬ್ಯಾಂಕ್ ಶಾಖೆ ಅಥವಾ ಅಂಚೆ ಕಚೇರಿ ಮೂಲಕ ಎಪಿವೈ ಅಡಿ ಹೆಸರು ನೋಂದಾಯಿಸಿಕೊಳ್ಳಬಹುದು. ಅದಕ್ಕೂ ಮೊದಲು ಆ ವ್ಯಕ್ತಿ ಆ ಶಾಖೆಯಲ್ಲಿ ಉಳಿತಾಯ ಖಾತೆ ತೆರೆಯಬೇಕು.
ಮಾರ್ಚ್ 31ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ 99 ಲಕ್ಷಕ್ಕೂ ಹೆಚ್ಚು ಮಂದಿ ಎಪಿವೈ ಅಡಿ ಹೆಸರು ನೋಂದಾಯಿಸಿಕೊಂಡಿದ್ದಾರೆ ಯೋಜನೆಯ ಅಡಿ ನೋಂದಾಯಿಸಿಕೊಂಡವರ ಒಟ್ಟು ಸಂಖ್ಯೆ 4.01 ಕೋಟಿ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.