ತೆರಿಗೆದಾರರು ಆದಾಯ ತೆರಿಗೆ ಇಲಾಖೆಗೆ ಪ್ರತಿ ವರ್ಷ ನಿಗದಿತ ದಿನಾಂಕದೊಳಗೆ ರಿಟರ್ನ್ಸ್ ಸಲ್ಲಿಸುವುದು ಆದಾಯ ತೆರಿಗೆ ನಿಯಮಗಳ ಪ್ರಕಾರ ಅನಿವಾರ್ಯ. ಆದರೆ, ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸದಿದ್ದರೆ ಆಗುವ ಪರಿಣಾಮಗಳೇನು? ರಿಟರ್ನ್ಸ್ ಸಲ್ಲಿಸದವರಿಗೆ ಕಾನೂನು ಸಮಸ್ಯೆಗಳು ಎದುರಾಗಬಹುದೇ? ಇಂತಹ ವಿಚಾರಗಳನ್ನು ತಿಳಿದಿರುವುದು ಆದಾಯ ತೆರಿಗೆ ಪಾವತಿಸುವ ಪ್ರತಿ ವ್ಯಕ್ತಿಯ ಜವಾಬ್ದಾರಿ.
ನಮ್ಮ ದೇಶದಲ್ಲಿ ಸುಮಾರು 5.53 ಕೋಟಿ ತೆರಿಗೆದಾರರು ವೈಯಕ್ತಿಕ ತೆರಿಗೆ ರಿಟರ್ನ್ಸ್ ಸಲ್ಲಿಸುವವರ ವರ್ಗದಲ್ಲಿದ್ದಾರೆ ಎಂಬುದು ಆದಾಯ ತೆರಿಗೆ ಇಲಾಖೆಯ ಇತ್ತೀಚಿನ ಅಂಕಿ–ಅಂಶದಿಂದ ಕಂಡುಬಂದ ಸಂಗತಿ. ಇವರಲ್ಲಿ ಅರ್ಧದಷ್ಟು ಮಂದಿ ತೆರಿಗೆ ರಿಟರ್ನ್ಸ್ ಸಲ್ಲಿಸಬೇಕಾಗಿದ್ದರೂ ಅವರ ಆದಾಯವು ತೆರಿಗೆ ವಿನಾಯ್ತಿ ಮಟ್ಟವನ್ನು ಮೀರಿಲ್ಲದ ಕಾರಣ ಸರ್ಕಾರಕ್ಕೆ ಅವರಿಂದ ಪಾವತಿಯಾಗುವ ಆದಾಯ ತೆರಿಗೆ ಶೂನ್ಯ.
ರಿಟರ್ನ್ಸ್ ಸಲ್ಲಿಸಲು ಗಡುವು ಏನು?
ಈ ಬಾರಿ ಕೋವಿಡ್–19 ಪಿಡುಗಿನ ಕಾರಣದಿಂದಾಗಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯ ಕೊನೆಯ ದಿನಾಂಕವನ್ನು ಸರ್ಕಾರ ಅನೇಕ ಬಾರಿ ಮುಂದೂಡಿದೆ. ಆರ್ಥಿಕ ವರ್ಷ 2018-19ನೇ ಸಾಲಿಗೆ ಸಂಬಂಧಿಸಿದಂತೆ ನಿಗದಿಪಡಿಸಲಾಗಿದ್ದ ಮುಂದೂಡಿದ ತೆರಿಗೆ ರಿಟರ್ನ್ಸ್ ಗಡುವನ್ನು ಸೆಪ್ಟೆಂಬರ್ 30ರಿಂದ ನವೆಂಬರ್ 30ರತನಕ ವಿಸ್ತರಿಸಲಾಗಿದೆ.
ಆರ್ಥಿಕ ವರ್ಷ 2019-20ಕ್ಕೆ ಸಂಬಂಧಿಸಿದ ತೆರಿಗೆ ರಿಟರ್ನ್ಸ್ ಸಲ್ಲಿಸುವವರಿಗೂ ಡಿಸೆಂಬರ್ 31ರ ಗಡುವು ನಿಗದಿಪಡಿಸಲಾಗಿದೆ. ಈ ದಿನಾಂಕದೊಳಗೆ ರಿಟರ್ನ್ಸ್ ಸಲ್ಲಿಸಿದರೆ ಯಾವುದೇ ದಂಡ ಅನ್ವಯಿಸುವುದಿಲ್ಲ. ಇಷ್ಟೇ ಅಲ್ಲದೆ, ಸೆಕ್ಷನ್ 80ಸಿ (ಎಲ್‌ಐಸಿ, ಪಿಪಿಎಫ್, ಎನ್‌ಎಸ್‌ಸಿ ಇತ್ಯಾದಿ), 80ಡಿ (ಮೆಡಿಕ್ಲೈಮ್), 80ಜಿ (ದೇಣಿಗೆ) ಒಳಗೊಂಡಿರುವ ಐಟಿ ಕಾಯ್ದೆಯ ಅಧ್ಯಾಯ-VIಬಿ ಅಡಿಯಲ್ಲಿ ತೆರಿಗೆ ವಿನಾಯಿತಿ ಪಡೆಯಲು ವಿವಿಧ ಹೂಡಿಕೆಗಳನ್ನು ಮಾಡುವ ದಿನಾಂಕವನ್ನು ಸರ್ಕಾರ ಜುಲೈ 31ರತನಕ ವಿಸ್ತರಿಸಿತ್ತು. ಇದು ಸಾಮಾನ್ಯವಾಗಿ ಆಯಾ ವರ್ಷದ ಮಾರ್ಚ್ 31ಕ್ಕೆ ಅಂತ್ಯವಾಗುತ್ತದೆ. ಆದರೆ ಈ ಬಾರಿ 2019-20ನೇ ಸಾಲಿಗೆ ಸಂಬಂಧಿಸಿದ ತೆರಿಗೆ ರಿಯಾಯ್ತಿ ಸಿಗುವ ಹೂಡಿಕೆಗಳಿಗೆ ಜುಲೈ 31ರ ತನಕ ವಿಸ್ತರಿಸಿರುವುದು ಜನರ ಆರ್ಥಿಕ ಅಡಚಣೆಗೆ ಸರ್ಕಾರ ಸ್ಪಂದಿಸಿದಂತಾಗಿದೆ.
ರಿಟರ್ನ್ಸ್ ಸಲ್ಲಿಸದಿದ್ದರೆ ಏನಾಗುತ್ತದೆ?
1. ಶುಲ್ಕ ಹೇರಲಾಗುತ್ತದೆ
2017ರ ಏಪ್ರಿಲ್ 1ರಿಂದ ಜಾರಿಗೆ ಬಂದ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 234ಎಫ್ ಅಡಿಯಲ್ಲಿ ಹೇಳಿರುವ ಬದಲಾದ ನಿಯಮಗಳ ಪ್ರಕಾರ, ನೀವು ಐಟಿಆರ್‌ಅನ್ನು ನಿಗದಿತ ದಿನದೊಳಗೆ ಸಲ್ಲಿಸದಿದ್ದರೆ ಗರಿಷ್ಠ
₹ 10 ಸಾವಿರದವರೆಗೆ ಶುಲ್ಕ ಪಾವತಿಸಬೇಕಾ
ಗುತ್ತದೆ.
2. ಅವಧಿ ಮೀರಿದ ರಿಟರ್ನ್ಸ್ ಸಲ್ಲಿಕೆ
ನಿಮ್ಮ ಐಟಿಆರ್‌ಅನ್ನು ಸರಿಯಾದ ಸಮಯದೊಳಗೆ ನೀವು ಸಲ್ಲಿಸಿದ್ದೀರಿ ಎಂದಿಟ್ಟುಕೊಳ್ಳಿ. ಆದರೆ, ಅದರಲ್ಲಿ ಯಾವುದಾದರೂ ತಪ್ಪುಗಳಿದ್ದರೆ ಅಥವಾ ಬದಲಾವಣೆಗಳನ್ನು ಮಾಡಬೇಕೆಂದಾದರೆ, ಈ ಹಿಂದೆ ಆರ್ಥಿಕ ವರ್ಷದ ಅಂತ್ಯದಿಂದ ಎರಡು ವರ್ಷಗಳವರೆಗೆ ಅವಕಾಶವಿತ್ತು. ಆದರೆ ಬದಲಾದ ನಿಯಮಗಳ ಅಡಿಯಲ್ಲಿ, ಇಂತಹ ಪರಿಷ್ಕರಣೆಯನ್ನು ಮಾಡಲು ನಿಮಗೆ ಒಂದು ವರ್ಷದ ಅವಕಾಶವಷ್ಟೇ ಸಿಗಲಿದೆ.
ಉದಾಹರಣೆಗೆ, ಆರ್ಥಿಕ ವರ್ಷ 2019-20ನೇ ಸಾಲಿನ ಪರಿಷ್ಕೃತ ರಿಟರ್ನ್ಸ್ ಸಲ್ಲಿಸಲು ಅಥವಾ ದಂಡ ಸಹಿತ ರಿಟರ್ನ್ಸ್ ಸಲ್ಲಿಸಲು ಮಾರ್ಚ್ 31, 2021ರ ತನಕ ಅವಕಾಶ ಇದೆ. ಆದರೆ, ಮೊದಲು ನಿಗದಿಪಡಿಸಿದ ಕಾಲಮಿತಿಯೊಳಗೆ ಸಲ್ಲಿಸಿದ ತೆರಿಗೆ ರಿಟರ್ನ್ಸ್ ಗಳನ್ನಷ್ಟೇ ಪರಿಷ್ಕರಿಸಲು ಅವಕಾಶವಿದೆ. ಹೀಗಾಗಿ, ತೆರಿಗೆ ರಿಟರ್ನ್ಸ್‌ಗಳನ್ನು ತಡವಾಗಿ ಸಲ್ಲಿಸಿದ್ದರೆ, ಪರಿಷ್ಕೃತ ರಿಟರ್ನ್ಸ್ ಸಲ್ಲಿಸುವ ಅವಕಾಶ ಇರುವುದಿಲ್ಲ. ಈ ಎಲ್ಲ ಅವಧಿ ಮೀರಿದ ಮೇಲೂ ರಿಟರ್ನ್ಸ್ ಸಲ್ಲಿಸದಿದ್ದರೆ, ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಬಂದ ಮೇಲಷ್ಟೇ ಅದಕ್ಕೆ ಉತ್ತರವಾಗಿಯಷ್ಟೇ ರಿಟರ್ನ್ಸ್ ಸಲ್ಲಿಸಬಹುದಾಗಿದೆ.
3. ಬಡ್ಡಿ ಹೇರಲಾಗುತ್ತದೆ
ನೀವು ನಿಗದಿತ ದಿನಾಂಕದ ಮೊದಲು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸದಿದ್ದರೆ, ಸೆಕ್ಷನ್ 234ಎ ಪ್ರಕಾರ ಪಾವತಿಸದ ತೆರಿಗೆಯ ಮೊತ್ತದ ಮೇಲೆ ಪ್ರತಿ ತಿಂಗಳು ಅಥವಾ ಒಂದು ತಿಂಗಳ ಭಾಗಕ್ಕೆ ಶೇಕಡ 1ರ ದರದಲ್ಲಿ ಬಡ್ಡಿ ಪಾವತಿಸಬೇಕಾಗುತ್ತದೆ.
4. ನಷ್ಟ ಮುಂದೂಡುವ ಅವಕಾಶ ಸಿಗುವುದಿಲ್ಲ
ನೀವು ವ್ಯಾಪಾರ ವ್ಯವಹಾರದಿಂದಲೂ ಆದಾಯ ಹೊಂದಿದವರಾಗಿದ್ದು, ಹಿಂದಿನ ವರ್ಷದಲ್ಲಿ ನಷ್ಟ ಹೊಂದಿದ್ದರೆ ಅದನ್ನು ಎಂಟು ವರ್ಷಗಳ ಅವಧಿಯ ತನಕ ಮುಂದಿನ ವರ್ಷಗಳಲ್ಲಿ ವಜಾ ಮಾಡುವ ಅವಕಾಶವಿದೆ. ನಿಮ್ಮ ರಿಟರ್ನ್ಸ್‌ಅನ್ನು ನಿಗದಿತ ದಿನಾಂಕದೊಳಗೆ ಸಲ್ಲಿಸದಿದ್ದರೆ ಈ ಅವಕಾಶದಿಂದ ವಂಚಿತರಾಗುತ್ತೀರಿ.
5. ಮರುಪಾವತಿ ತಡವಾಗುತ್ತದೆ
ನೀವು ಪಾವತಿಸಿದ ಹೆಚ್ಚುವರಿ ತೆರಿಗೆಯನ್ನು ಸರ್ಕಾರದಿಂದ ಮರುಪಾವತಿಯ ರೂಪದಲ್ಲಿ ಹಿಂಪಡೆಯಲು ರಿಟರ್ನ್ಸ್ ಸಲ್ಲಿಸಿದ ನಂತರವಷ್ಟೇ ಸಾಧ್ಯ. ಆದಾಯ ತೆರಿಗೆ ಇಲಾಖೆಗೆ ರಿಟರ್ನ್ಸ್ ಸಲ್ಲಿಸದ ಹೊರತು ಹೆಚ್ಚುವರಿ ತೆರಿಗೆ ಹಣವನ್ನು ಮರಳಿಸುವ ಅವಕಾಶ ಇರುವುದಿಲ್ಲ.
6. ಜೈಲು ಶಿಕ್ಷೆ ಇದೆಯೆ?
ಉದ್ದೇಶಪೂರ್ವಕವಾಗಿ ತೆರಿಗೆ ವಂಚಿಸುವ ಕಾರಣಕ್ಕಾಗಿ ರಿಟರ್ನ್ಸ್ ಸಲ್ಲಿಸದಿರುವುದು ಕಂಡುಬಂದರೆ, ಕನಿಷ್ಠ ಮೂರು ತಿಂಗಳು, ಗರಿಷ್ಠ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ಆಗಬಹುದು ಹಾಗೂ ಇಲಾಖೆ ವಿಧಿಸುವ ದಂಡ ಪಾವತಿಸಬೇಕಾಗಬಹುದು.
ಯಾರೆಲ್ಲ ರಿಟರ್ನ್ಸ್ ಸಲ್ಲಿಸಬೇಕು?
60 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮತ್ತು ವಾರ್ಷಿಕ ಆದಾಯವನ್ನು ₹ 2.5 ಲಕ್ಷಕ್ಕಿಂತ ಹೆಚ್ಚು ಹೊಂದಿರುವ ಯಾರಾದರೂ ಆದಾಯ ತೆರಿಗೆ ಕಾಯ್ದೆಯ ಪ್ರಕಾರ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಬೇಕಾಗುತ್ತದೆ. 60 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಇದರ ಮಿತಿ
₹ 3 ಲಕ್ಷ ಮತ್ತು 80 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಅತಿ ಹಿರಿಯ ನಾಗರಿಕರಿಗೆ ಇದರ ಮಿತಿ ₹ 5 ಲಕ್ಷ.
ಒಂದು ವೇಳೆ ನೀವು ವೇತನ ಪಡೆಯುವವರಾಗಿದ್ದು ನಿಮ್ಮ ತೆರಿಗೆಯನ್ನು ನಿಮ್ಮ ಕಂಪನಿಯವರು ಕಟಾಯಿಸಿದ್ದರೂ, ಈ ಮೇಲೆ ಉಲ್ಲೇಖಿಸಿರುವ ಮಿತಿಯ ಮೇಲ್ಪಟ್ಟು ನಿಮ್ಮ ಆದಾಯ ಇದ್ದರೆ, ನೀವು ತೆರಿಗೆ ಕಟ್ಟುವ ಅಗತ್ಯವಿಲ್ಲದಿದ್ದರೂ ರಿಟರ್ನ್ಸ್ ಸಲ್ಲಿಸುವುದು ಅನಿವಾರ್ಯ.
ಆದಾಯ ತೆರಿಗೆ ಇಲಾಖೆ ಹೇಗೆ ನಿಯಂತ್ರಿಸುತ್ತದೆ ?
ಆದಾಯ ತೆರಿಗೆ ಇಲಾಖೆ ರಿಟರ್ನ್ಸ್ ಸಲ್ಲಿಸದಿರುವವರ ಬಗ್ಗೆ ‘ನಾನ್ ಫೈಲ್ ಮಾನಿಟರಿಂಗ್ ಸಿಸ್ಟಮ್’ ಮೂಲಕ ಹೆಚ್ಚಿನ ಮೌಲ್ಯದ ವಹಿವಾಟುಗಳಿಗೆ ಪ್ರವೇಶಿಸಿರುವ ಮತ್ತು ಸಂಭಾವ್ಯ ತೆರಿಗೆ ಬಾಧ್ಯತೆಗಳನ್ನು ಹೊಂದಿರುವ ಆದರೆ ಇನ್ನೂ ತಮ್ಮ ತೆರಿಗೆ ರಿಟರ್ನ್ಸ್ ಸಲ್ಲಿಸದ ವ್ಯಕ್ತಿಗಳನ್ನು ಗುರುತಿಸಲು ಮತ್ತು ಮೇಲ್ವಿಚಾರಣೆ ಮಾಡಲು ವ್ಯವಸ್ಥೆಯನ್ನು ಇಟ್ಟುಕೊಂಡಿದೆ. ಆದಾಯ ತೆರಿಗೆ ಇಲಾಖೆಯ ದತ್ತಸಂಚಯದಲ್ಲಿ ನಿರ್ದಿಷ್ಟ ಮಾಹಿತಿಯನ್ನು ವಿಶ್ಲೇಷಣೆ ಮಾಡಲಾಗುತ್ತದೆ. ಈ ಮಾಹಿತಿಯನ್ನು ಅನೇಕ ಸಂಸ್ಥೆಗಳು, ಸರ್ಕಾರಿ ಇಲಾಖೆಗಳು ಸಲ್ಲಿಸುವ ಹಣಕಾಸು ವ್ಯವಹಾರಗಳ ಹೇಳಿಕೆ (ಎಸ್‌ಎಫ್‌ಟಿ), ಮೂಲದಲ್ಲಿ ತೆರಿಗೆ ಕಡಿತ (ಟಿಡಿಎಸ್), ಮೂಲದಲ್ಲಿ ತೆರಿಗೆ ಸಂಗ್ರಹ (ಟಿಸಿಎಸ್), ವಿದೇಶಿ ವಿನಿಮಯ, ಬ್ಯಾಂಕ್ ವ್ಯವಹಾರ ಇತ್ಯಾದಿ ಮಾಹಿತಿ ಇರುವ ದತ್ತಾಂಶಗಳ ವಿಶ್ಲೇಷಣೆಯ ಮೂಲಕ ಮಾಹಿತಿ ಕಲೆ ಹಾಕಲಾಗುತ್ತದೆ. ಮಾತ್ರವಲ್ಲದೆ ರಿಟರ್ನ್ಸ್ ಸಲ್ಲಿಸದ ತೆರಿಗೆದಾರರಿಗೆ ಎಸ್‌ಎಂಎಸ್, ಇ-ಮೇಲ್ ಮತ್ತು ಪತ್ರಗಳ ಮೂಲಕವೂ ಮಾಹಿತಿ ರವಾನಿಸಲಾಗುತ್ತದೆ.
ತೆರಿಗೆ ರಿಟರ್ನ್ಸ್ ಸಲ್ಲಿಸುವುದು ಅನಿವಾರ್ಯ. ಇದು ಮುಂದಿನ ದಿನಗಳಲ್ಲಿ ಬ್ಯಾಂಕ್ ಸಾಲ, ಹೊಸ ವ್ಯವಹಾರ ಆರಂಭಿಸುವುದಾದಾದರೆ ದಾಖಲೆ ಒದಗಿಸುವಲ್ಲೂ ನೆರವಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.