ADVERTISEMENT

ಈರುಳ್ಳಿ ಧಾರಣೆ ಏರುಮುಖ: ಶ್ರಾವಣದ ಬಳಿಕ ಹೆಚ್ಚಿದ ಬೇಡಿಕೆ

ಸಂತೋಷ ಈ.ಚಿನಗುಡಿ
Published 14 ಸೆಪ್ಟೆಂಬರ್ 2024, 19:30 IST
Last Updated 14 ಸೆಪ್ಟೆಂಬರ್ 2024, 19:30 IST
ಬೆಳಗಾವಿಯ ಎಪಿಎಂಸಿಯಲ್ಲಿ ಶನಿವಾರ ಈರುಳ್ಳಿ ಲೋಡ್‌ ಮಾಡಿದ ಕಾರ್ಮಿಕ
ಬೆಳಗಾವಿಯ ಎಪಿಎಂಸಿಯಲ್ಲಿ ಶನಿವಾರ ಈರುಳ್ಳಿ ಲೋಡ್‌ ಮಾಡಿದ ಕಾರ್ಮಿಕ   

ಬೆಳಗಾವಿ: ಕಳೆದ ಒಂದು ವಾರದಿಂದ ಈರುಳ್ಳಿ ದರ ಏರಿಕೆಯಾಗುತ್ತಿದೆ.

ಕಳೆದ ಶನಿವಾರ (ಸೆಪ್ಟೆಂಬರ್ 7) ಕೆ.ಜಿಗೆ ₹40 ಇದ್ದ ದರ, ಈಗ ₹60ಕ್ಕೆ ಜಿಗಿದಿದೆ. ಬೆಳಗಾವಿ ಎಪಿಎಂಸಿಯಲ್ಲಿ ಕ್ವಿಂಟಲ್‌ಗೆ ಗರಿಷ್ಠ ₹3,000ದಿಂದ ₹4,000 ಇದ್ದ ಬೆಲೆಯು ಪ್ರಸ್ತುತ ₹5,200ಕ್ಕೆ ಮುಟ್ಟಿದೆ.

ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಪ್ರತಿ ಬುಧವಾರ ಮತ್ತು ಶನಿವಾರ ಹರಾಜು ಪ್ರಕ್ರಿಯೆ ನಡೆಯುತ್ತದೆ. ಕಳೆದ ಬುಧವಾರ (ಸೆಪ್ಟೆಂಬರ್ 11) ಕನಿಷ್ಠ ₹3,000, ಗರಿಷ್ಠ ₹5,000 ದರ ಇತ್ತು. ಒಂದೇ ದಿನದಲ್ಲಿ 90 ಲೋಡ್‌ ಲಾರಿಗಳಷ್ಟು ಈರುಳ್ಳಿ ಮಾರಾಟವಾಗಿದೆ. ಮೂರು ದಿನದಲ್ಲಿ ಮತ್ತೆ ₹200 ಏರಿಕೆ ಕಂಡಿದೆ.

ADVERTISEMENT

ಹಾವೇರಿ ನಗರದ ಚಿಲ್ಲರೆ ಮಾರುಕಟ್ಟೆಯಲ್ಲಿ ರಾಜ್ಯದಲ್ಲೇ ಅತಿಹೆಚ್ಚು ಎಂದರೆ ಕೆ.ಜಿಗೆ ಕನಿಷ್ಠ ₹60ರಿಂದ ಗರಿಷ್ಠ ₹70ರವರೆಗೆ ಮಾರಾಟವಾಗುತ್ತಿದೆ. ವಾರದ ಹಿಂದೆ ಇಲ್ಲಿ ಕನಿಷ್ಠ ₹50ರಿಂದ ಗರಿಷ್ಠ ₹55 ದರ ಇತ್ತು.

ಬಾಗಲಕೋಟೆಯಲ್ಲಿ ಕೂಡ ‘ಎ’ ಗ್ರೇಡ್‌ ಈರುಳ್ಳಿ ಪ್ರತಿ ಕೆ.ಜಿಗೆ ₹ 50ರಿಂದ ₹56, ಉತ್ತರ ಕನ್ನಡದಲ್ಲಿ ₹60 ಮತ್ತು ವಿಜಯನಗರದಲ್ಲಿ ₹50ರಿಂದ ₹60ರಂತೆ ಬಿಕರಿಯಾಗುತ್ತಿದೆ.

ರಾಜ್ಯದಲ್ಲಿ ಈರುಳ್ಳಿಯ ಮಾದರಿ ದರವೇ ಕ್ವಿಂಟಲ್‌ಗೆ ₹4,200ರಿಂದ ₹5,000 ಇದೆ. 

ದರ ಏರಿಕೆಗೆ ಕಾರಣ ಏನು?:

ಶ್ರಾವಣ ಮಾಸ ಮುಗಿದ ಬಳಿಕ ಮಾಂಸಾಹಾರದ ಹೋಟೆಲ್‌, ರೆಸ್ಟೊರೆಂಟ್‌, ಖಾನಾವಳಿ, ಬಾರ್‌ಗಳಿಂದ ಈರುಳ್ಳಿಗೆ ಹೆಚ್ಚಿನ ಬೇಡಿಕೆ ಬರುತ್ತದೆ. ಇದು ಪ್ರತಿ ವರ್ಷದ ಬೆಳವಣಿಗೆಯಾಗಿದೆ.

‘ಈ ಬಾರಿ ಉತ್ತರ ಭಾರತದಲ್ಲಿ ಅತಿವೃಷ್ಟಿಯಿಂದ ಈರುಳ್ಳಿ ಫಸಲು ಹಾಳಾಗಿದೆ. ಗುಜರಾತ್‌, ಪಶ್ಚಿಮ ಬಂಗಾಳ, ಹಿಮಾಚಲ ಪ್ರದೇಶಕ್ಕೆ ಹೆಚ್ಚು ರವಾನೆ ಆಗುತ್ತಿದೆ. ಮುಂಬೈ, ಪುಣೆ, ಸೂರತ್‌, ದೆಹಲಿ ಮುಂತಾದ ನಗರಗಳಲ್ಲೂ ಬೇಡಿಕೆ ಹೆಚ್ಚಿದ್ದರಿಂದ ಇಲ್ಲಿ ಮಾರಾಟವಾಗಬೇಕಾದ ಈರುಳ್ಳಿ ಆ ಪ್ರದೇಶದತ್ತ ಪೂರೈಕೆಯಾಗುತ್ತಿದೆ. ಇನ್ನೊಂದೆಡೆ, ಈ ಬಾರಿಯ ಮುಂಗಾರು ಫಸಲು ಇನ್ನೂ ಮಾರುಕಟ್ಟೆಗೆ ಬಂದಿಲ್ಲ. ಹಾಗಾಗಿ, ದರ ಏರಿಕೆ ಕಂಡಿದೆ’ ಎನ್ನುತ್ತಾರೆ ಎಪಿಎಂಸಿ ಅಧಿಕಾರಿಗಳು.

ಬೆಳಗಾವಿಯ ಎಪಿಎಂಸಿಯಲ್ಲಿ ಶನಿವಾರ ಈರುಳ್ಳಿ ಸಗಟು ವ್ಯಾಪಾರ ನಡೆಯಿತು
ಅಕ್ಟೋಬರ್‌ ನಂತರ ಹೊಸ ಈರುಳ್ಳಿ ಮಾರುಕಟ್ಟೆ ಬರಲಿದೆ. ಜನವರಿವರೆಗೆ ದರ ಹೀಗೆ ಇದ್ದರೆ ಮಾತ್ರ ರೈತರಿಗೆ ಪ್ರಯೋಜನ ಸಿಗಲಿದೆ.
–ಮಲ್ಲಪ್ಪ ಶೇಡಬಾಳ, ರೈತ ಕಲ್ಲೋಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.