ನವದೆಹಲಿ: ಡಿಸ್ನಿ+ಹಾಟ್‌ಸ್ಟಾರ್ ಮತ್ತು ರಿಲಯನ್ಸ್ ಒಗ್ಗೂಡುವುದರಿಂದ ಆಗುವ ಪರಿಣಾಮಗಳ ಕುರಿತು ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ) ರಿಲಯನ್ಸ್ ಮತ್ತು ಸ್ಟಾರ್ ಇಂಡಿಯಾಕ್ಕೆ ಎಚ್ಚರಿಕೆ ನೀಡಿದೆ.
ಖಾಸಗಿಯಾಗಿ ರಿಲಯನ್ಸ್, ಸ್ಟಾರ್ ಇಂಡಿಯಾ ಕಂಪನಿಯ ವಕ್ತಾರರಿಗೆ ಸಿಸಿಐ ಎಚ್ಚರಿಕೆ ನೀಡಿ ಈ ಪ್ರಕರಣವನ್ನು ತನಿಖೆಗೆ ಏಕೆ ಆದೇಶಿಸಬಾರದು? ಎಂದು ಕೇಳಿದೆ.
ಕ್ರಿಕೆಟ್ ಬ್ರಾಡಕಾಸ್ಟ್ ಸೇರಿದಂತೆ ಪ್ರಮುಖ ಇವೆಂಟ್‌ಗಳು ಸ್ಟಾರ್ ಹಾಗೂ ರಿಲಯನ್ಸ್‌ನ ಜಿಯೋ ಸಿನಿಮಾ ತೆಕ್ಕೆಗೆ ಹೋದರೆ ಜಾಹೀರಾತು ಮಾರುಕಟ್ಟೆಯಲ್ಲಿ ಅನಾರೋಗ್ಯಕರ ಸ್ಪರ್ಧೆ ಏರ್ಪಡಬಹುದು. ಇದರಿಂದ ಬೇರೆ ಕಂಪನಿಗಳಿಗೆ ಹಾನಿ ಮಾಡುತ್ತದೆ ಎಂಬ ಆತಂಕವನ್ನು ಸಿಸಿಐ ಹೊರಹಾಕಿದೆ.
ಜನಪ್ರಿಯ ಒಟಿಟಿ ಡಿಸ್ನಿ+ಹಾಟ್‌ಸ್ಟಾರ್, ರಿಲಯನ್ಸ್ ಒಡೆತನದ ‘ಜಿಯೊ ಸಿನಿಮಾ’ದಲ್ಲಿ ವಿಲೀನ ಆಗಲಿದೆ ಎಂಬ ಮಾತುಗಳು ಕೇಳಿ ಬಂದಿರುವ ಬೆನ್ನಲ್ಲೇ ಸಿಸಿಐ ಈ ಎಚ್ಚರಿಕೆ ನೀಡಿದೆ.
ಡಿಸ್ನಿ+ಹಾಟ್‌ಸ್ಟಾರ್ ಮತ್ತು ರಿಲಯನ್ಸ್ ನಡುವೆ ಸುಮಾರು 63 ಸಾವಿರ ಕೋಟಿಯ ರೂಪಾಯಿ ವ್ಯಾಪಾರ ಒಪ್ಪಂದವಾಗಿದೆ.
ಇತ್ತೀಚೆಗೆ ಸ್ಟಾರ್ ಇಂಡಿಯಾ, ರಿಲಯನ್ಸ್‌ನ ವಯೋಕಾಂ18 ಸಂಸ್ಥೆಯಲ್ಲಿ ವಿಲೀನವಾಗಿದೆ. ಈ ಹಿನ್ನೆಲೆಯಲ್ಲಿ ಸ್ಟಾರ್ ಇಂಡಿಯಾ ಮುನ್ನಡೆಸುವ ಡಿಸ್ನಿ+ಹಾಟ್‌ಸ್ಟಾರ್ ಒಟಿಟಿ ಹಾಗೂ ವಯೋಕಾಂ18 ಮುನ್ನಡೆಸುವ ಜಿಯೊ ಸಿನಿಮಾ ಒಟಿಟಿ ವಿಲೀನ ಆಗಿ ಒಂದೇ ವೇದಿಕೆಯಡಿ ಗ್ರಾಹಕರಿಗೆ ಸಿಗಲಿವೆ ಎಂದು ವರದಿಯಾಗಿದೆ.
ಜಾಗತಿಕವಾಗಿ ಸ್ಟಾರ್ ಎಂಟರ್‌ಟೈನ್‌ಮೆಂಟ್ ಕಂಪನಿ ವಾಲ್ಟ್ ಡಿಸ್ನಿ ಜೊತೆಯಾಗಿ ಡಿಸ್ನಿ+ಹಾಟ್‌ಸ್ಟಾರ್ ಮುನ್ನಡೆಸುತ್ತದೆ. ಇದೀಗ ಈ ಕಂಪನಿ ಭಾರತದಲ್ಲಿ ರಿಲಯನ್ಸ್ ಜೊತೆ ಕೈಜೋಡಿಸಿದೆ. ಇದಕ್ಕೆ ಮುಖ್ಯ ಕಾರಣ ಭಾರತದಲ್ಲಿ ಅಮೆಜಾನ್ ಫ್ರೈಂ, ಯೂಟ್ಯೂಬ್, ನೆಟ್‌ಫ್ಲಿಕ್ಸ್ ಗೆ ಸಡ್ಡು ಹೊಡೆಯುವುದೇ ಆಗಿದೆ ಎನ್ನಲಾಗಿದೆ.
ವಯೋಕಾಂ18 ಮೂಲಗಳ ಹೇಳಿಕೆ ಆಧರಿಸಿ ಈ ಕುರಿತು ದಿ ಎಕನಾಮಿಕ್ಸ್ ಟೈಮ್ಸ್ ವರದಿ ಮಾಡಿದೆ.
ಭಾರತದಲ್ಲಿ ಡಿಸ್ನಿ+ಹಾಟ್‌ಸ್ಟಾರ್ ಒಟಿಟಿಗೆ 3.8 ಕೋಟಿ ಚಂದಾದಾರರಿದ್ದಾರೆ. ಜಿಯೊ ಸಿನಿಮಾ ಒಟಿಟಿಗೆ 12.5 ಕೋಟಿ ಚಂದಾದಾರರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.