ಹೈದರಾಬಾದ್: ಕೋವಿಡ್‌ನ ಸದ್ಯದ ಸ್ಥಿತಿಯಲ್ಲಿ ಭಾರತವು 2025ರೊಳಗೆ 5 ಲಕ್ಷ ಕೋಟಿ ಡಾಲರ್ (5 ಟ್ರಿಲಿಯನ್ ಡಾಲರ್) ಆರ್ಥಿಕತೆಯ ರಾಷ್ಟ್ರವಾಗಲು ಸಾಧ್ಯವೇ ಇಲ್ಲ, ಇದನ್ನು ಸಾಧಿಸಬೇಕಿದ್ದರೆ ಮುಂದಿನ ಐದು ವರ್ಷಗಳ ಕಾಲ ಶೇ 9ರಷ್ಟು ಆರ್ಥಿಕ ಬೆಳವಣಿಗೆ ಸಾಧಿಸಬೇಕಾಗುತ್ತದೆ ಎಂದು ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಮಾಜಿ ಗವರ್ನರ್ ಸಿ.ರಂಗರಾಜನ್ ಹೇಳಿದ್ದಾರೆ.
ಇಲ್ಲಿನ ಐಸಿಎಫ್‌ಅಐ ಉನ್ನತ ಶಿಕ್ಷಣ ಫೌಂಡೇಶನ್‌ನಲ್ಲಿ ಶುಕ್ರವಾರ 11ನೇ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ಕೋವಿಡ್‌ನ ಮೂರನೇ ಅಲೆಯಿಂದ ದುಷ್ಪರಿಣಾಮ ಎದುರಾಗದಂತೆ ನೋಡಿಕೊಳ್ಳಲು ಪ್ರಯತ್ನಗಳನ್ನು ನಡೆಸಲೇಬೇಕು, ವ್ಯಾಪಕವಾಗಿ ಲಸಿಕೆ ಹಾಕಿಸುವುದು ಮತ್ತು ಆರೋಗ್ಯ ಕ್ಷೇತ್ರ ಸಹಿತ ಒಟ್ಟಾರೆ ಮೂಲಸೌಲಭ್ಯಗಳಲ್ಲಿ ಹೂಡಿಕೆಯಾಗುವಂತೆ ನೋಡಿಕೊಳ್ಳುವುದು ಇದರಲ್ಲಿ ಸೇರಿದೆ ಎಂದರು.
‘ಕೆಲವು ವರ್ಷಗಳ ಹಿಂದೆ ಭಾರತವು 2025ರೊಳಗೆ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಬಹುದು ಎಂಬ ಆಶಯ ಇತ್ತು. ಆದರೆ ಈಗಿನ ಸ್ಥಿತಿಯಲ್ಲಿ ಅದು ಅಸಾಧ್ಯ. 2019ರಲ್ಲಿ ಭಾರತವು 2.7 ಟ್ರಿಲಯನ್ ಡಾಲರ್ ಆರ್ಥಿಕತೆಯಾಗಿತ್ತು. 2022ರ ಮಾರ್ಚ್ ಅಂತ್ಯದ ವೇಳೆಯಲ್ಲಿಯೂ ಅದು 2.7 ಟ್ರಿಲಿಯನ್ ಡಾಲರ್ ಮಟ್ಟದಲ್ಲೇ ಇರಲಿದೆ. ಈ ಹಂತದಿಂದ 5 ಟ್ರಿಲಿಯನ್ ಡಾಲರ್‌ಗೆ ಹೋಗಬೇಕಿದ್ದರೆ ಸತತ 5 ವರ್ಷಗಳ ಕಾಲ ಶೇ 9ರಷ್ಟು ಆರ್ಥಿಕ ಅಭಿವೃದ್ಧಿ ಸಾಧಿಸಬೇಕಾಗುತ್ತದೆ’ ಎಂದು ಅವರು ವಿವರಿಸಿದರು.
ಕೋವಿಡ್ ಲಾಕ್‌ಡೌನ್‌ನಿಂದಾಗಿ ಆರ್ಥಿಕ ಚಟುವಟಿಕೆ ಸಂಪೂರ್ಣ ಸ್ಥಗಿತಗೊಂಡಿತ್ತು. 2021ರಲ್ಲಿ ಭಾರತದ ಜಿಡಿಪಿ ಶೇ 7.3ರಷ್ಟು ಕುಸಿದರೆ, ಅಮೆರಿಕದ ಜಿಡಿಪಿ ಶೇ 3.5ರಷ್ಟು, ಫ್ರಾನ್ಸ್ ಶೇ 8.1ರಷ್ಟು, ಬ್ರಿಟನ್‌ನಲ್ಲಿ ಶೇ 9.8ರಷ್ಟು ಕುಸಿದಿತ್ತು. ಲಾಕ್‌ಡೌನ್ ನಿರ್ಬಂಧ ಸಡಿಲಿಸಿದ ಬಳಿಕವಷ್ಟೇ ಆರ್ಥಿಕತೆ ಮತ್ತೆ ಚೇತರಿಕೆ ಹಾದಿ ಕಂಡಿದೆ. ಕೋವಿಡ್ ಮೊದಲ ಅಲೆಯ ಆರ್ಥಿಕ ದುಷ್ಪರಿಣಾಮ ತೀವ್ರವಾಗಿದ್ದರೆ, ಎರಡನೇ ಅಲೆಯ ಆರೋಗ್ಯ ಪರಿಣಾಮ ತೀವ್ರವಾಗಿತ್ತು. ಒಟ್ಟಾರೆ ಕೋವಿಡ್‌ನಿಂದ ದಿನಗೂಲಿ ಕಾರ್ಮಿಕರು ಮತ್ತು ವಲಸೆ ಕಾರ್ಮಿಕರಿಗೆ ಬಹಳ ತೊಂದರೆ ಉಂಟಾಯಿತು ಎಂದು ಅವರು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.