ADVERTISEMENT

2020–21ರಲ್ಲಿ ₹ 2.6 ಲಕ್ಷ ಕೋಟಿ ಎಫ್‌ಪಿಐ ಒಳಹರಿವು

ಪಿಟಿಐ
Published 31 ಮಾರ್ಚ್ 2021, 15:20 IST
Last Updated 31 ಮಾರ್ಚ್ 2021, 15:20 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಪ್ರವರ್ಧಮಾನಕ್ಕೆ ಬರುತ್ತಿರುವ ದೇಶಗಳಿಗೆ ಹೋಲಿಸಿದರೆ, 2020–21ನೇ ಹಣಕಾಸು ವರ್ಷದಲ್ಲಿ ಭಾರತಕ್ಕೆ ಅತಿ ಹೆಚ್ಚಿನ ವಿದೇಶಿ ಬಂಡವಾಳ (ಎಫ್‌ಪಿಐ) ಹರಿದು ಬಂದಿದೆ. ದೇಶದ ಮಾರುಕಟ್ಟೆಗಳಲ್ಲಿ ₹ 2.6 ಲಕ್ಷ ಕೋಟಿಯಷ್ಟು ಎಫ್‌ಪಿಐ ಒಳಹರಿವು ಕಂಡುಬಂದಿದೆ.

ಜಾಗತಿಕ ಮಾರುಕಟ್ಟೆಗಳಲ್ಲಿ ನಗದು ಲಭ್ಯತೆ ಹೆಚ್ಚಿರುವುದು ಹಾಗೂ ಭಾರತದ ಆರ್ಥಿಕತೆಯು ವೇಗವಾಗಿ ಚೇತರಿಸಿಕೊಳ್ಳುತ್ತದೆ ಎಂಬ ಭರವಸೆಯಿಂದಾಗಿ ಈ ಪ್ರಮಾಣದ ಒಳಹರಿವು ಕಂಡುಬಂದಿದೆ ಎಂದು ತಜ್ಞರು ಹೇಳಿದ್ದಾರೆ.

ಷೇರುಪೇಟೆಗಳಲ್ಲಿ ₹ 2.74 ಲಕ್ಷ ಕೋಟಿಗಳಷ್ಟು ಹೂಡಿಕೆ ಆಗಿದೆ. ನ್ಯಾಷನಲ್‌ ಸೆಕ್ಯುರಿಟೀಸ್‌ ಡೆಪಾಸಿಟರಿ ಲಿಮಿಟೆಡ್‌ ಸಂಸ್ಥೆಯು ಎಫ್‌ಪಿಐ ಮಾಹಿತಿಯನ್ನು ಸಾರ್ವಜನಿಕವಾಗಿ ಲಭ್ಯವಾಗುವಂತೆ ಮಾಡಲು ಆರಂಭಿಸಿದ ಬಳಿಕ ಗರಿಷ್ಠ ಹೂಡಿಕೆ ಇದಾಗಿದೆ.

ADVERTISEMENT

ಸಾಲಪತ್ರ ಮಾರುಕಟ್ಟೆಯಿಂದ ₹ 24,070 ಕೋಟಿ ಬಂಡವಾಳ ಹಿಂದಕ್ಕೆ ಪಡೆಯಲಾಗಿದೆ.

ಹಣಕಾಸು ವಲಯ, ಅಡಮಾನ ಕಂಪನಿಗಳು, ಫಿನ್‌ಟೆಕ್‌ ಕಂಪನಿಗಳು ಮತ್ತು ಖಾಸಗಿ ವಿಮಾ ಕಂಪನಿಗಳಲ್ಲಿ ಎಫ್‌ಪಿಐ ಹೂಡಿಕೆ ಆಗಿದೆ ಎಂದು ಜಿಯೋಜಿತ್ ಹಣಕಾಸು ಸೇವೆಗಳ ಮುಖ್ಯ ಹೂಡಿಕೆ ತಜ್ಞ ವಿ.ಕೆ. ವಿಜಯ ಕುಮಾರ್ ತಿಳಿಸಿದ್ದಾರೆ.

ಐ.ಟಿ., ಹಣಕಾಸು, ಸಿಮೆಂಟ್‌ ಮತ್ತು ಔಷಧ ವಲಯಗಳು ಹೆಚ್ಚನ ಗಳಿಕೆ ಕಂಡುಕೊಳ್ಳುವ ಸಾಧ್ಯತೆಗಳಿವೆ. ಹೀಗಾಗಿ ಭಾರತವು 2021–22ರಲ್ಲಿಯೂ ಹೆಚ್ಚಿನ ಎಫ್‌ಪಿಐ ಆಕರ್ಷಿಸುವ ಸಾಧ್ಯತೆ ಇದೆ ಎಂದೂ ಅವರು ಹೇಳಿದ್ದಾರೆ.

2020ರ ಮಾರ್ಚ್‌ನಿಂದ 2021ರ ಮಾರ್ಚ್‌ ಅವಧಿಯಲ್ಲಿ ಮಾರ್ಚ್‌, ಏಪ್ರಿಲ್, ಮೇ ಮತ್ತು ಸೆಪ್ಟೆಂಬರ್‌ ತಿಂಗಳುಗಳನ್ನು ಹೊರತುಪಡಿಸಿ ಉಳಿದೆಲ್ಲಾ ತಿಂಗಳುಗಳಲ್ಲಿ ಹೂಡಿಕೆ ಮಾಡಿದ್ದಾರೆ.

ಸರ್ಕಾರಗಳ ಆರ್ಥಿಕ ಉತ್ತೇಜನಾ ಕ್ರಮಗಳು ಮತ್ತು ಕೇಂದ್ರೀಯ ಬ್ಯಾಂಕುಗಳ ಹಣಕಾಸು ನೀತಿಗಳಿಂದಾಗಿ ಪ್ರವರ್ಧಮಾನಕ್ಕೆ ಬರುತ್ತಿರುವ ಕೆಲವು ದೇಶಗಳಲ್ಲಿ ಎಫ್‌ಪಿಐ ಒಳಹರಿವು ಆಗಿದೆ. ಈ ದೇಶಗಳ ಸಾಲಿನಲ್ಲಿ ಭಾರತವು ಅತಿ ಹೆಚ್ಚಿನ ಬಂಡವಾಳ ಆಕರ್ಷಿಸಿದೆ. ಭಾರತದ ಆರ್ಥಿಕತೆಯು ವೇಗವಾಗಿ ಚೇತರಿಕೆ ಕಾಣುತ್ತಿರುವುದು ಹಾಗೂ ಹೂಡಿಕೆಯ ಮೇಲಿನ ಗಳಿಕೆಯು ಅಚ್ಚರಿ ಮೂಡಿಸುವಂತಿರುವುದೇ ಇದಕ್ಕೆ ಕಾರಣ ಎಂದು ಕೋಟಕ್‌ ಸೆಕ್ಯುರಿಟೀಸ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷ ರುಸ್ಮಿಕ್‌ ಓಜಾ ಹೇಳಿದ್ದಾರೆ.

ಭಾರತದ ವಿದೇಶಿ ವಿನಿಮಯ ಮೀಸಲು ಸಂಗ್ರಹವು ₹ 7.30 ಲಕ್ಷ ಕೋಟಿಗಳಷ್ಟು ಹೆಚ್ಚಾಗಿರುವುದು ಸಹ ಭಾರತದ ರೂಪಾಯಿಯನ್ನು ಅಮೆರಿಕದ ಡಾಲರ್ ಮತ್ತು ಇನ್ನಿತರ ಕರೆನ್ಸಿಗಳ ಎದುರು ಸ್ಥಿರವಾಗಿರುವಂತೆ ಮಾಡಿದೆ ಎಂದೂ ಅವರು ಹೇಳಿದ್ದಾರೆ.

ಆರ್ಥಿಕತೆಯ ಮೇಲೆ ಕೋವಿಡ್‌–19 ಸಾಂಕ್ರಾಮಿಕದ ಪರಿಣಾಮಗಳ ಹೊರತಾಗಿಯೂ ದೇಶಿ ಷೇರುಪೇಟೆಗಳು ಪ್ರಸಕ್ತ ಹಣಕಾಸು ವರ್ಷದಲ್ಲಿ ಸಕಾರಾತ್ಮಕವಾಗಿದ್ದು, ಹೂಡಿಕೆದಾರರಿಗೆ ಉತ್ತಮ ಗಳಿಕೆ ತಂದುಕೊಟ್ಟಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.