ADVERTISEMENT

ಹಣಕಾಸಿನ ಸ್ಥಿರತೆಗೆ ಎ.ಐ ಸವಾಲು: ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌

ರಾಯಿಟರ್ಸ್
ಪಿಟಿಐ
Published 14 ಅಕ್ಟೋಬರ್ 2024, 14:18 IST
Last Updated 14 ಅಕ್ಟೋಬರ್ 2024, 14:18 IST
ಶಕ್ತಿಕಾಂತ ದಾಸ್‌
ಶಕ್ತಿಕಾಂತ ದಾಸ್‌   

ಮುಂಬೈ/ನವದೆಹಲಿ: ಜಾಗತಿಕ ಹಣಕಾಸು ಸೇವೆಗಳಲ್ಲಿ ಹೆಚ್ಚುತ್ತಿರುವ ಕೃತಕ ಬುದ್ಧಿಮತ್ತೆ ಮತ್ತು ಮಷೀನ್‌ ಲರ್ನಿಂಗ್‌ ಬಳಕೆಯು ಹಣಕಾಸಿನ ಸ್ಥಿರತೆಗೆ ಸವಾಲುಗಳನ್ನು ಸೃಷ್ಟಿಸಬಹುದು ಎಂದು ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ಸೋಮವಾರ ಹೇಳಿದ್ದಾರೆ.‌

ಕಡಿಮೆ ಸಂಖ್ಯೆಯ ತಂತ್ರಜ್ಞಾನ ಪೂರೈಕೆದಾರರು ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಿದಾಗ ಕೃತಕ ಬುದ್ಧಿಮತ್ತೆಯ ಮೇಲಿನ ಹೆಚ್ಚಿನ ಅವಲಂಬನೆಯು ಅಪಾಯಕ್ಕೆ ಕಾರಣವಾಗಬಹುದು. ಬ್ಯಾಂಕ್‌ಗಳು ಅಪಾಯ ತಗ್ಗಿಸುವ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ ಎಂದು ಹೇಳಿದ್ದಾರೆ.

ವೆಚ್ಚ ತಗ್ಗಿಸಲು, ರಿಸ್ಕ್‌ಗಳ ನಿರ್ವಹಣೆ ಮಾಡಲು, ಬ್ಯಾಂಕಿಂಗ್‌ ಸೇವೆ, ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಲು ಹಣಕಾಸು ಸೇವೆಗಳ ಪೂರೈಕೆದಾರರು ಕೃತಕ ಬುದ್ಧಿಮತ್ತೆ (ಎ.ಐ) ಬಳಸುತ್ತಿದ್ದಾರೆ. ಹೆಚ್ಚುತ್ತಿರುವ ಎ.ಐ ಬಳಕೆಯಿಂದ ಇವು ಸೈಬರ್‌ ದಾಳಿ ಮತ್ತು ದತ್ತಾಂಶ ಸೋರಿಕೆಗೆ ಒಳಗಾಗುವ ಅಪಾಯ ಇದೆ ಎಂದು ಹೇಳಿದ್ದಾರೆ.

ADVERTISEMENT

ಸಮಯ, ವೆಚ್ಚ ತಗ್ಗಿಸುವ ಅಗತ್ಯ:

ಭಾರತ ಸೇರಿದಂತೆ ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಪ್ರಮುಖವಾದ ಸಾಗರೋತ್ತರ ಪಾವತಿ ವ್ಯವಸ್ಥೆಯ ಸಮಯ ಮತ್ತು ವೆಚ್ಚವನ್ನು ಕಡಿಮೆ ಮಾಡುವ ಅಗತ್ಯವಿದೆ ಎಂದು ದಾಸ್‌ ಹೇಳಿದ್ದಾರೆ.

ವಿದೇಶಗಳಲ್ಲಿ ದುಡಿಯುತ್ತಿರುವ ಭಾರತೀಯರು ತಾಯ್ನಾಡಿಗೆ ಕಳೆದ ವರ್ಷ ರವಾನಿಸಿದ ಹಣದ ಮೊತ್ತವು 111 ಬಿಲಿಯನ್‌ ಡಾಲರ್‌ (₹9.33 ಲಕ್ಷ ಕೋಟಿ) ಇತ್ತು ಎಂದು ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ವಲಸೆ ಸಂಸ್ಥೆಯ 2024ರ ವರದಿ (ಐಒಎಂ) ತಿಳಿಸಿದೆ.

2027ರ ವೇಳೆಗೆ ವಿವಿಧ ದೇಶಗಳ ನಡುವೆ ನಡೆಯುವ ಈ ಪಾವತಿಯ ಮೌಲ್ಯವು 250 ಟ್ರಿಲಿಯನ್‌ ಡಾಲರ್ (ಸುಮಾರು ₹21 ಸಾವಿರ ಲಕ್ಷ ಕೋಟಿ) ದಾಟಲಿದೆ ಎಂದು ಬ್ಯಾಂಕ್‌ ಆಫ್‌ ಇಂಗ್ಲೆಂಡ್‌ ಅಂದಾಜಿಸಿದೆ.

ಭಾರತ ಮತ್ತು ಇತರೆ ಕೆಲವು ದೇಶಗಳು ಸಾಗರೋತ್ತರ ವೇಗದ ಪಾವತಿ ವ್ಯವಸ್ಥೆಗಳ ಸಂಪರ್ಕವನ್ನು ವಿಸ್ತರಿಸಲು ಈಗಾಗಲೇ ಪ್ರಯತ್ನಗಳನ್ನು ಪ್ರಾರಂಭಿಸಿವೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.