ಮುಂಬೈ (ರಾಯಿಟರ್ಸ್): ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ರೆಪೊ ದರದಲ್ಲಿ ಬದಲಾವಣೆ ತರುವ ಸಾಧ್ಯತೆ ಕಡಿಮೆ ಇದೆ. ಆದರೆ, ರಿವರ್ಸ್ ರೆಪೊ ದರವನ್ನು ಆರ್‌ಬಿಐ ತುಸು ಹೆಚ್ಚಳ ಮಾಡುವ ಸಾಧ್ಯತೆ ಇದೆ ಎಂದು ಅರ್ಥಶಾಸ್ತ್ರಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದೇಶದ ಮಾರುಕಟ್ಟೆಯಲ್ಲಿ ನಗದು ಲಭ್ಯತೆ ಹೆಚ್ಚಿರುವುದನ್ನು ಕಡಿಮೆ ಮಾಡುವ ಉದ್ದೇಶದಿಂದ ಆರ್‌ಬಿಐ ರಿವರ್ಸ್ ರೆಪೊ ದರವನ್ನು ಜಾಸ್ತಿ ಮಾಡಬಹುದು ಎಂದು ಅವರು ಹೇಳಿದ್ದಾರೆ.
ಆರ್‌ಬಿಐನ ಹಣಕಾಸು ನೀತಿ ಸಮಿತಿಯ ಸಭೆಯು ಗುರುವಾರ ಕೊನೆಗೊಳ್ಳಲಿದೆ. ರಿವರ್ಸ್ ರೆಪೊ ದರವು ಈಗ ಶೇಕಡ 3.35ರಷ್ಟು ಇದೆ. ಈ ದರವನ್ನು ಆರ್‌ಬಿಐ ಶೇ 3.55ಕ್ಕೆ ಏರಿಕೆ ಮಾಡಬಹುದು ಎಂದು ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ. ರಿವರ್ಸ್ ರೆಪೊ ಅಂದರೆ ಆರ್‌ಬಿಐ, ಬ್ಯಾಂಕ್‌ಗಳಿಗೆ ನೀಡುವ ಬಡ್ಡಿ ದರ.
ರೆಪೊ ದರ ಈಗ ಬದಲಾವಣೆ ಕಾಣಲಿಕ್ಕಿಲ್ಲವಾದರೂ, ಏಪ್ರಿಲ್‌ನಲ್ಲಿ ಇದು ಶೇ 0.25ರಷ್ಟು ಹೆಚ್ಚಳವಾಗಬಹುದು ಎಂದು ಸುದ್ದಿಸಂಸ್ಥೆಗೆ ಪ್ರತಿಕ್ರಿಯೆ ನೀಡಿರುವ ಹಲವು ಅರ್ಥಶಾಸ್ತ್ರಜ್ಞರು ಅಂದಾಜಿಸಿದ್ದಾರೆ. ಆರ್‌ಬಿಐ ರೆಪೊ ದರಗಳನ್ನು 2020ರ ಮೇ ತಿಂಗಳಿನಿಂದಲೂ ಕಡಿಮೆ ಮಟ್ಟದಲ್ಲಿ ಉಳಿಸಿಕೊಂಡಿದೆ. ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ಹೊಂದಾಣಿಕೆಯ ನಿಲುವನ್ನು ಮುಂದುವರಿಸಲಾಗುತ್ತದೆ ಎಂದು ಮತ್ತೆ ಮತ್ತೆ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.