ADVERTISEMENT

ಕಚ್ಚಾ ತೈಲ ದರ ಗಗನಮುಖಿ: ಬ್ಯಾರೆಲ್‌ಗೆ 78.39 ಡಾಲರ್‌

ಇಂಧನ ಬೆಲೆ ಇಳಿಕೆ ಇಲ್ಲ?

ಪಿಟಿಐ
ರಾಯಿಟರ್ಸ್
Published 4 ಅಕ್ಟೋಬರ್ 2024, 22:00 IST
Last Updated 4 ಅಕ್ಟೋಬರ್ 2024, 22:00 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ/ ಲಂಡನ್‌: ಇಸ್ರೇಲ್‌ ಮತ್ತು ಇರಾನ್‌ ನಡುವೆ ಉಲ್ಬಣಗೊಂಡಿರುವ ಸಂಘರ್ಷದಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಪೂರೈಕೆಯಲ್ಲಿ ಅನಿಶ್ಚಿತತೆ ತಲೆದೋರಿದೆ. ಹಾಗಾಗಿ, ತೈಲ ಬೆಲೆ ಏರಿಕೆಯ ಹಾದಿ ಹಿಡಿದಿದೆ.

ಇರಾನ್‌ನ ತೈಲ ನಿಕ್ಷೇಪ ಮತ್ತು ಸಂಗ್ರಹಾಗಾರಗಳ ಮೇಲೆ ಇಸ್ರೇಲ್‌ ವಾಯುದಾಳಿ ನಡೆಸಿತ್ತು. ಇಸ್ರೇಲ್‌ನ ಈ ದಾಳಿಗೆ ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಬೆಂಬಲ ಘೋಷಿಸಿದ ಬೆನ್ನಲ್ಲೇ ಗುರುವಾರ ಬ್ರೆಂಟ್‌ ಕಚ್ಚಾ ತೈಲದ ಬೆಲೆಯಲ್ಲಿ ಶೇ 5ರಷ್ಟು ಏರಿಕೆಯಾಗಿತ್ತು.

ಶುಕ್ರವಾರ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್‌ ಕಚ್ಚಾ ತೈಲದ ಬೆಲೆಯು ಶೇ 0.99ರಷ್ಟು ಏರಿಕೆಯಾಗಿದ್ದು, ಪ್ರತಿ ಬ್ಯಾರೆಲ್‌ಗೆ 78.39 ಡಾಲರ್‌ ತಲುಪಿದೆ. ಇದು ಒಂದು ತಿಂಗಳ ಹಿಂದಿನ ಗರಿಷ್ಠ ಮಟ್ಟವಾಗಿದೆ.

ADVERTISEMENT

ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದಾಗಿ ಒಂದೇ ವಾರದಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಶೇ 9.4ರಷ್ಟು ಏರಿಕೆಯಾಗಿದೆ. 2022ರ ಅಕ್ಟೋಬರ್‌ನಲ್ಲಿ ಶೇ 11.3ರಷ್ಟು ಬೆಲೆ ಏರಿಕೆಯಾಗಿತ್ತು.  

ಕಚ್ಚಾ ತೈಲ ಪೂರೈಕೆಯಲ್ಲಿ ಇರಾನ್‌ ಸಿಂಹಪಾಲು ಹೊಂದಿದ್ದು, ಯುದ್ಧದಲ್ಲಿ ನೇರವಾಗಿ ಭಾಗಿಯಾಗಿದೆ. ಇದರಿಂದ ತೈಲ ಪೂರೈಕೆಯಲ್ಲಿ ಅನಿಶ್ಚಿತತೆ ಉಂಟಾಗಿದೆ. ಹಾಗಾಗಿ, ಬೆಲೆ ಏರಿಕೆಯಾಗುತ್ತಿದೆ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.

ಭಾರತದಿಂದ ನಿಗಾ:

‘ಮಧ್ಯಪ್ರಾಚ್ಯ ಬಿಕ್ಕಟ್ಟಿನ ಪ್ರತಿದಿನದ ಬೆಳವಣಿಗೆಯನ್ನು ಕೇಂದ್ರ ಹಣಕಾಸು ಸಚಿವಾಲಯವು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಕಚ್ಚಾ ತೈಲದ ಬೆಲೆ ಏರಿಕೆ ಬಗ್ಗೆ ಆತಂಕಗೊಂಡಿಲ್ಲ’ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

‘ತೈಲ ಬೆಲೆಯ ಏರಿಳಿತ ನಿಭಾಯಿಸಲು ಭಾರತವು ತನ್ನದ ಆದ ಮಾನದಂಡಗಳನ್ನು ಹೊಂದಿದೆ. ಕಚ್ಚಾ ತೈಲ ದರವು ಅತಿಹೆಚ್ಚು ಏರಿಕೆ ಕಂಡಿದ್ದ ದಿನಗಳನ್ನು ನೋಡಿದೆ. ಸದ್ಯ ಜಾಗತಿಕ ಮಾರುಕಟ್ಟೆಯಲ್ಲಿನ ಬೆಲೆಯು ಆ ಮಟ್ಟಕ್ಕೆ ಇನ್ನೂ ತಲುಪಿಲ್ಲ’ ಎಂದು ಹೇಳಿವೆ.

ಇಂಧನ ಬೆಲೆ ಇಳಿಕೆ ಇಲ್ಲ?: 

ಭಾರತವು ಅತಿಹೆಚ್ಚು ಪ್ರಮಾಣದಲ್ಲಿ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಘೋಷಣೆಗೂ ಮೊದಲು ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಇಳಿಸುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿತ್ತು. ಸದ್ಯದ ಪರಿಸ್ಥಿತಿ ನೋಡಿದರೆ ಇಂಧನ ಬೆಲೆ ಇಳಿಕೆ ಸಾಧ್ಯತೆ ಕಡಿಮೆ ಇದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.