ADVERTISEMENT

Home Loan: ಕೇಂದ್ರದಿಂದ ಬಡ್ಡಿ ಸಹಾಯಧನದ ಗೃಹ ಸಾಲ ಯೋಜನೆ?

ರಾಯಿಟರ್ಸ್
Published 25 ಸೆಪ್ಟೆಂಬರ್ 2023, 16:10 IST
Last Updated 25 ಸೆಪ್ಟೆಂಬರ್ 2023, 16:10 IST
ಗೃಹ ಸಾಲ ಶೇ 1ರಷ್ಟು ಬಡ್ಡಿ ಸಬ್ಸಿಡಿ ವಿಸ್ತರಣೆ
ಗೃಹ ಸಾಲ ಶೇ 1ರಷ್ಟು ಬಡ್ಡಿ ಸಬ್ಸಿಡಿ ವಿಸ್ತರಣೆ   

ನವದೆಹಲಿ/ಮುಂಬೈ: ನಗರ ಪ್ರದೇಶಗಳಲ್ಲಿ ಸಣ್ಣ ಮನೆಗಳ ನಿರ್ಮಾಣಕ್ಕಾಗಿ ಮುಂದಿನ ಐದು ವರ್ಷಗಳಲ್ಲಿ ₹59,760 ಕೋಟಿ ಮೊತ್ತದ ಬಡ್ಡಿ ಸಹಾಯಧನದ ಗೃಹ ಸಾಲ ಯೋಜನೆ ಜಾರಿಗೊಳಿಸಲು ಕೇಂದ್ರ ಸರ್ಕಾರ ಆಲೋಚಿಸಿದೆ ಎಂದು ಸರ್ಕಾರದ ಮೂಲಗಳು ಹೇಳಿವೆ.

ಹಲವು ಪ್ರಮುಖ ರಾಜ್ಯಗಳಲ್ಲಿ ಚುನಾವಣೆ ಹತ್ತಿರವಾಗುತ್ತಿದೆ. 2024ರ ಮಧ್ಯಭಾಗದಲ್ಲಿ ಲೋಕಸಭಾ ಚುನಾವಣೆ ಸಹ ಇರುವುದರಿಂದ ಬ್ಯಾಂಕ್‌ಗಳು ಕೆಲವೇ ತಿಂಗಳುಗಳಲ್ಲಿ ಯೋಜನೆ ಜಾರಿಗೊಳಿಸುವ ಸಾಧ್ಯತೆ ಇದೆ ಎಂದು ತಿಳಿಸಿವೆ.

ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್‌ 15ರಂದು ದೇಶವನ್ನು ಉದ್ದೇಶಿಸಿ ಮಾತನಾಡುವಾಗ ತಮ್ಮ ಭಾಷಣದಲ್ಲಿ ಈ ಯೋಜನೆಯನ್ನು ಘೋಷಿಸಿದ್ದರು. ಆದರೆ, ಈ ವಿವರಗಳು ಪ್ರಕಟವಾಗಿರಲಿಲ್ಲ. 

ADVERTISEMENT

ಒಟ್ಟು ಸಾಲದಲ್ಲಿ ₹9 ಲಕ್ಷದವರೆಗಿನ ಮೊತ್ತಕ್ಕೆ ವಾರ್ಷಿಕ ಶೇ 3ರಿಂದ ಶೇ 6.5ರವರೆಗೆ ಬಡ್ಡಿ ಸಹಾಯಧನ ಸಿಗಲಿದೆ. ₹50 ಲಕ್ಷಕ್ಕಿಂತ ಕಡಿಮೆ ಮೊತ್ತದ ಗೃಹ ಸಾಲವನ್ನು 20 ವರ್ಷಗಳ ಅವಧಿಗೆ ಪಡೆದಿರುವವರು ಪ್ರಸ್ತಾಪಿತ ಯೋಜನೆಗೆ ಅರ್ಹರಾಗಿರುತ್ತಾರೆ ಎಂದು ಮೂಲಗಳು ತಿಳಿಸಿವೆ.

ಬಡ್ಡಿಸಹಾಯಧನದ ಮೊತ್ತವನ್ನು ಫಲಾನುಭವಿಗಳಿಗೆ ಮುಂಗಡವಾಗಿ ನೀಡಲಾಗುವುದು. ಈ ಯೋಜನೆಗೆ ಸಂಸತ್‌ ಒಪ್ಪಿಗೆಯ ಅಗತ್ಯ ಇದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ನಗರ ಪ್ರದೇಶಗಳಲ್ಲಿ ಕಡಿಮೆ ಆದಾಯ ಇರುವ ವರ್ಗದ 25 ಲಕ್ಷ ಜನರಿಗೆ ಇದರಿಂದ ಪ್ರಯೋಜನ ಆಗುವ ಅಂದಾಜು ಮಾಡಲಾಗಿದೆ. ಆದರೆ, ಬಡ್ಡಿ ಸಹಾಯಧನದ ಮೊತ್ತವು  ಮನೆಗಳ ಬೇಡಿಕೆಗೆ ಅನುಗುಣವಾಗಿ ನಿರ್ಧಾರವಾಗಲಿದೆ ಎಂದು ತಿಳಿಸಿದ್ದಾರೆ. ಯೋಜನೆಯು ಅಂತಿಮ ಹಂತದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಾವು ಮುಂಬರುವ ವರ್ಷಗಳಲ್ಲಿ ಹೊಸ ಯೋಜನೆಯೊಂದನ್ನು ತರುತ್ತಿದ್ದೇವೆ. ಅದರಿಂದ ನಗರ ಪ್ರದೇಶಗಳಲ್ಲಿ ಬಾಡಿಗೆ ಮನೆಗಳಲ್ಲಿ ಅಥವಾ ಕೊಳೆಗೇರಿಗಳಲ್ಲಿ ಅಥವಾ ಅನಧಿಕೃತ ಕಾಲೊನಿಗಳಲ್ಲಿ ವಾಸವಾಗಿರುವ ಕುಟುಂಬಗಳಿಗೆ ಇದರಿಂದ ಪ್ರಯೋಜನ ಆಗಲಿದೆ ಎಂದು ಮೋದಿ ಅವರು ಆಗಸ್ಟ್‌ 15ರಂದು ಮಾಡಿದ್ದ ಭಾಷಣದಲ್ಲಿ ಹೇಳಿದ್ದರು.

ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯ ಮತ್ತು ಹಣಕಾಸು ಸಚಿವಾಲಯವು ಈ ಕುರಿತು ಯಾವುದೇ ‍ಪ್ರತಿಕ್ರಿಯೆ ನೀಡಿಲ್ಲ.

ಬ್ಯಾಂಕ್‌ಗಳಿಗೆ ಸಾಲ ನೀಡುವ ಸಂಬಂಧ ಯಾವುದೇ ನಿರ್ದಿಷ್ಟ ಗುರಿ ನೀಡಲಾಗಿಲ್ಲ. ಆದರೆ ಶೀಘ್ರದಲ್ಲೇ ಸರ್ಕಾರದ ಅಧಿಕಾರಿಗಳೊಂದಿಗೆ ಸಭೆ ನಡೆಯಲಿದೆ ಎಂದು ಹೆಸರು ಬಹಿರಂಗಪಡಿಸಬಾರದು ಎನ್ನುವ ಷರತ್ತಿನೊಂದಿಗೆ ಇಬ್ಬರು ಬ್ಯಾಂಕ್‌ ಅಧಿಕಾರಿಗಳು ತಿಳಿಸಿದ್ದಾರೆ.

ಬ್ಯಾಂಕ್‌ಗಳು ಫಲಾನುಭವಿಗಳನ್ನು ಗುರುತಿಸುವ ಪ್ರಕ್ರಿಯೆ ಆರಂಭಿಸಿವೆ. ಈ ಯೋಜನೆಯಿಂದಾಗಿ ಕೈಗೆಟಕುವ ಮನೆಗಳಿಗೆ ಸಾಲ ನೀಡಿಕೆಯು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಕಡಿಮೆ ಆದಾಯ ಹೊಂದಿರುವ ನಗರ ಪ್ರದೇಶದ ಜನರಿಗೆ ಈ ಹಿಂದೆ 2017–22ರ ಅವಧಿಯಲ್ಲಿ ಇದೇ ರೀತಿಯ ಯೋಜನೆ ಜಾರಿಗೊಳಿಸಲಾಗಿತ್ತು. 1.22 ಕೋಟಿ ಮನೆಗಳನ್ನು ಮಂಜೂರು ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.