ADVERTISEMENT

ಹಣದುಬ್ಬರ ಇಳಿಕೆ ನಿರೀಕ್ಷೆ: ಹಣಕಾಸು ಸಚಿವಾಲಯದ ವರದಿ

ಪಿಟಿಐ
Published 22 ಆಗಸ್ಟ್ 2024, 14:19 IST
Last Updated 22 ಆಗಸ್ಟ್ 2024, 14:19 IST
ಹಣದುಬ್ಬರ (ಸಾಂದರ್ಭಿಕ ಚಿತ್ರ)
ಹಣದುಬ್ಬರ (ಸಾಂದರ್ಭಿಕ ಚಿತ್ರ)   

ನವದೆಹಲಿ: ದೇಶದಲ್ಲಿ ಮುಂಗಾರು ಉತ್ತಮವಾಗಿದೆ. ಇದರಿಂದ ಸರಕು ಮತ್ತು ಸೇವೆಗಳ ವೆಚ್ಚದಲ್ಲಿನ ಬದಲಾವಣೆಯ ಸೂಚಕವಾದ ಕೋರ್‌ ಹಣದುಬ್ಬರವು ಮಂದಗತಿಯಲ್ಲಿದೆ. ಹಾಗಾಗಿ, ಚಿಲ್ಲರೆ ಹಣದುಬ್ಬರವು ಇಳಿಕೆಯ ಹಾದಿಯಲ್ಲಿದೆ ಎಂದು ಬುಧವಾರ ಬಿಡುಗಡೆಯಾಗಿರುವ ಕೇಂದ್ರ ಹಣಕಾಸು ಸಚಿವಾಲಯದ ವರದಿ ತಿಳಿಸಿದೆ. 

ಗ್ರಾಹಕ ಬೆಲೆ ಸೂಚ್ಯಂಕ ಆಧಾರಿತ ಚಿಲ್ಲರೆ ಹಣದುಬ್ಬರವು ಜುಲೈ ತಿಂಗಳಿನಲ್ಲಿ ಐದು ವರ್ಷದ ಕನಿಷ್ಠ ಮಟ್ಟವಾದ ಶೇ 3.35ರಷ್ಟು ದಾಖಲಾಗಿದೆ.

ಉತ್ತಮವಾಗಿ ಮಳೆ ಸುರಿದಿರುವುದು ಮುಂಗಾರು ಬಿತ್ತನೆಗೆ ವರದಾನವಾಗಿದೆ. ಜಲಾಶಯಗಳಲ್ಲಿ ನೀರಿನ ಸಂಗ್ರಹ ಮಟ್ಟದಲ್ಲಿ ಏರಿಕೆಯಾಗಿದೆ. ಇದರಿಂದ ಹಿಂಗಾರು ಹಂಗಾಮಿನ ಬಿತ್ತನೆಗೂ ಸಹಕಾರಿಯಾಗಲಿದೆ. ಇದು ಮುಂಬರುವ ತಿಂಗಳುಗಳಲ್ಲಿ ಆಹಾರ ಹಣದುಬ್ಬರವು ಇಳಿಕೆಯ ಪಥದಲ್ಲಿ ಸಾಗಲು ನೆರವಾಗಲಿದೆ ಎಂದು ವರದಿ ತಿಳಿಸಿದೆ.

ADVERTISEMENT

ಮುಂಗಾರು ಹಂಗಾಮು ಸ್ವಲ್ಪ ಅಸ್ಥಿರಗೊಂಡಿದ್ದರೂ ದೇಶದ ಆರ್ಥಿಕತೆ ಬೆಳವಣಿಗೆಯು ಸದೃಢವಾಗಿದೆ. ಹಾಗಾಗಿ, 2024–25ನೇ ಆರ್ಥಿಕ ವರ್ಷದಲ್ಲಿ ಜಿಡಿಪಿಯು ಶೇ 6.5ರಿಂದ ಶೇ 7ರಷ್ಟು ಪ್ರಗತಿ ಸಾಧಿಸಲಿದೆ ಎಂದು ವಿವರಿಸಿದೆ.

ಜುಲೈ ತಿಂಗಳಿನಲ್ಲಿನ ಆರ್ಥಿಕತೆಯ ವೇಗವನ್ನು ಅವಲೋಕಿಸಿದರೆ ಮುಂದಿನ ನಾಲ್ಕು ತಿಂಗಳವರೆಗೆ ಇದೇ ಬೆಳವಣಿಗೆಯನ್ನು ಕಾಯ್ದುಕೊಳ್ಳುವ ನಿರೀಕ್ಷೆಯಿದೆ ಎಂದು ತಿಳಿಸಿದೆ.

ಪ್ರಸಕ್ತ ಆರ್ಥಿಕ ವರ್ಷದ ಮೊದಲ ನಾಲ್ಕು ತಿಂಗಳ ಅವಧಿಯಲ್ಲಿ ಸಂಗ್ರಹವಾಗಿರುವ ಜಿಎಸ್‌ಟಿ ವರಮಾನವನ್ನು ಅವಲೋಕಿಸಿದರೆ ತೆರಿಗೆ ಸಂಗ್ರಹದ ಮೂಲ ವಿಸ್ತರಣೆಯಾಗಿದೆ. ಆರ್ಥಿಕ ಚಟುವಟಿಕೆಗಳು ದೃಢವಾಗಿರುವ ಚಿತ್ರಣಕ್ಕೆ ಕನ್ನಡಿ ಹಿಡಿದಿದೆ ಎಂದು ತಿಳಿಸಿದೆ.

ದೇಶೀಯ ಚಟುವಟಿಕೆ ಚೇತರಿಕೆ
ದೇಶೀಯ ಚಟುವಟಿಕೆ ಚೇತರಿಕೆ ಕಂಡಿದೆ. ಇದು ತಯಾರಿಕಾ ಮತ್ತು ಸೇವಾ ವಲಯದ ಸೂಚ್ಯಂಕಗಳ ಏರಿಕೆಗೆ ನೆರವಾಗಿದೆ. ಬೇಡಿಕೆ ವಿಸ್ತರಣೆ ಹಾಗೂ ಹೊಸ ರಫ್ತು ಪ್ರಮಾಣದಲ್ಲಿ ಏರಿಕೆಯಾಗಿರುವುದರಿಂದ ತಯಾರಿಕಾ ವಲಯದ ಬೆಳವಣಿಗೆ ಸದೃಢವಾಗಿದೆ ಎಂದು ತಿಳಿಸಿದೆ. ವರಮಾನ ಸಂಗ್ರಹದಲ್ಲಿ ಏರಿಕೆಯಾಗಿದೆ. ಸರ್ಕಾರವು ವೆಚ್ಚದಲ್ಲಿ ಶಿಸ್ತು ಕಾಪಾಡಿಕೊಂಡಿದೆ. ಆರ್ಥಿಕತೆಯ ದೃಢವಾಗಿರುವುದರಿಂದ ವಿತ್ತೀಯ ಕೊರತೆಯು ಬಜೆಟ್‌ನಲ್ಲಿ ಅಂದಾಜಿಸಿರುವ ಮಟ್ಟಕ್ಕೆ ಇಳಿಕೆಯಾಗಲಿದೆ ಎಂದು ಹೇಳಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಸರಕು ಮತ್ತು ಸೇವಾ ರಫ್ತು ಉತ್ತಮವಾಗಿದೆ. ಷೇರು ಮಾರುಕಟ್ಟೆಗಳಲ್ಲಿ ಉತ್ತಮ ಮಟ್ಟ ಕಾಯ್ದುಕೊಂಡಿವೆ. ವಿದೇಶಿ ನೇರ ಬಂಡವಾಳ ಹೂಡಿಕೆಯು ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.