ಬೆಂಗಳೂರು: ಆಟೊ ಚಾಲಕರೇ ಒಗ್ಗೂಡಿ ರಚಿಸಿಕೊಂಡಿರುವ ‘ನಮ್ಮ ಯಾತ್ರಿ’ ಆ್ಯಪ್ ಓಪನ್ ನೆಟ್‌ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ (ಒಎನ್‌ಡಿಸಿ) ಸೇರಿದೆ.
ಜಸ್ಪೇ ಟೆಕ್ನಾಲಜಿಸ್ ಕಂಪನಿಯು ಬೆಂಗಳೂರಿನ ಆಟೊ ಚಾಲಕರ ಜೊತೆಗೂಡಿ ನಮ್ಮ ಯಾತ್ರಿ ಆ್ಯಪ್ ಬಿಡುಗಡೆ ಮಾಡಿದೆ. ಈ ಆ್ಯಪ್, 42 ಸಾವಿರಕ್ಕೂ ಹೆಚ್ಚು ಚಾಲಕರು ಮತ್ತು 4.5 ಲಕ್ಷ ಗ್ರಾಹಕರನ್ನು ಒಳಗೊಂಡಿದೆ.
ಇ–ವಾಣಿಜ್ಯ ವಹಿವಾಟುಗಳು ಎಲ್ಲರಿಗೂ ಲಭ್ಯವಾಗುವಂತೆ ಒಎನ್‌ಡಿಸಿ ಮಾಡುತ್ತಿದೆ. ಒಎನ್‌ಡಿಸಿ ಮೂಲಕವೇ ಗ್ರಾಹಕರು ತಮ್ಮಿಷ್ಟದ ಆ್ಯಪ್ ಬಳಸಿ ಕಡಿಮೆ ಬೆಲೆಗೆ, ಯಾವುದೇ ಸಮಸ್ಯೆಗಳಿಲ್ಲದೇ ಪ್ರಯಾಣವನ್ನು ಬುಕ್ ಮಾಡಬಹುದಾಗಿದೆ.
ಒಎನ್‌ಡಿಸಿಯಲ್ಲಿನ ಮುಕ್ತ ಸಾರಿಗೆ ಜಾಲವು ಗ್ರಾಹಕರು ಮತ್ತು ಸೇವಾ ಪೂರೈಕೆದಾರರ ಅತಿದೊಡ್ಡ ಜಾಲವನ್ನು ಕಲ್ಪಿಸುತ್ತದೆ. ಎಲ್ಲ ಬಗೆಯ ಸಂಚಾರ ಸೇವೆಗಳನ್ನು ಡಿಜಿಟಲೀಕರಣಗೊಳಿಸುವ ಮತ್ತು ಪರಸ್ಪರ ಸಂಯೋಜಿಸುವ ಮೂಲಕ ಗ್ರಾಹಕರ ಹೆಚ್ಚಿನ ಅನುಕೂಲ ಒದಗಿಸುತ್ತದೆ ಎಂದು ಒಎನ್‌ಡಿಸಿ ಸಿಇಒ ಟಿ. ಕೋಶಿ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಗರಗಳ ವ್ಯಾಪ್ತಿ ವಿಸ್ತರಿಸುತ್ತಿರುವುದರಿಂದ ಪ್ರಯಾಣವನ್ನು ಹೆಚ್ಚು ಅನುಕೂಲಕರ ಮತ್ತು ಕೈಗೆಟುಕುವಂತೆ ಮಾಡಲು ಗ್ರಾಹಕರಿಗೆ ತಡೆರಹಿತ ಸೇವೆಗಳನ್ನು ನೀಡುವುದು ಮುಖ್ಯವಾಗಲಿದೆ. ಒಎನ್‌ಡಿಸಿಯಂತಹ ಮುಕ್ತ ವ್ಯವಸ್ಥೆಯೊಂದಿಗೆ ಪಾಲುದಾರಿಕೆ ಮಾಡಿಕೊಂಡಿರುವುದರಿಂದ ಅದು ಸಾಧ್ಯವಾಗಲಿದೆ ಎಂದು ಕೈಗಾರಿಕೆ ಉತ್ತೇಜನ ಮತ್ತು ಆಂತರಿಕ ವ್ಯಾಪಾರ ಇಲಾಖೆಯ ಕಾರ್ಯದರ್ಶಿ ಅನುರಾಗ್ ಜೈನ್ ಹೇಳಿದರು.
ಭಾರತದ ಇತರ ನಗರಗಳು ಮತ್ತು ಪಟ್ಟಣಗಳಲ್ಲಿ ‘ನಮ್ಮ ಯಾತ್ರಿ’ ಸ್ವರೂಪದ ಸೇವೆಯನ್ನು ಜಾರಿಗೊಳಿಸಲು
ಉತ್ಸುಕರಾಗಿದ್ದೇವೆ ಎಂದು ಜಸ್ಪೇ ಟೆಕ್ನಾಲಜೀಸ್‌ನ ಸಿಇಒ ವಿಮಲ್ ಕುಮಾರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.