ವಾಷಿಂಗ್ಟನ್: ಚೀನಾದಂತೆಯೇ ಭಾರತವೂ ಗರಿಷ್ಠ ಪ್ರಮಾಣದ ಸಾಲ ಹೊಂದಿದೆ. ಆದರೆ, ಚೀನಾದ ಮೇಲೆ ಬೀರುವಷ್ಟು ಪರಿಣಾಮ ಭಾರತದ ಮೇಲೆ ಆಗುವುದಿಲ್ಲ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಆರ್ಥಿಕ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕ ರುಡ್ ಡೆ. ಮೂಯ್ಜ್ ಹೇಳಿದ್ದಾರೆ.
ಅಲ್ಪಾವಧಿಗೆ ಉತ್ತಮವಾದ ವಿತ್ತೀಯ ಬಲವರ್ಧನೆ ಯೋಜನೆಯನ್ನು ಹಾಕಿಕೊಂಡಲ್ಲಿ ಭಾರತವು ತನ್ನ ಸಾಲದ ಪ್ರಮಾಣವನ್ನು ಕಡಿಮೆ ಮಾಡಬಹುದು ಎಂದು ಅವರು ಸಲಹೆ ನೀಡಿದ್ದಾರೆ.
ಭಾರತದ ಸಾಲವು ಜಿಡಿಪಿಯ ಶೇ 81.9ರಷ್ಟು ಇದೆ. ಚೀನಾದ ಸಾಲವು ಶೇ 83ರಷ್ಟು ಇದೆ. ಎರಡು ದೇಶಗಳ ಸಾಲದ ಪ್ರಮಾಣದಲ್ಲಿ ಭಾರಿ ವ್ಯತ್ಯಾಸವೇನೂ ಇಲ್ಲ. 2019ರಲ್ಲಿ ಭಾರತದ ಸಾಲದ ಪ್ರಮಾಣವು ಶೇ 75ರಷ್ಟು ಇತ್ತು ಎಂದು ಅವರು ತಿಳಿಸಿದ್ದಾರೆ.
2023ಕ್ಕೆ ಭಾರತದ ವಿತ್ತೀಯ ಕೊರತೆ ಶೇ 8.8ರಷ್ಟು ಆಗುವ ಅಂದಾಜು ಮಾಡಲಾಗಿದೆ. ಇದರಲ್ಲಿ ಬಡ್ಡಿ ಮೇಲಿನ ವೆಚ್ಚಕ್ಕೆ ಬಹುಪಾಲು ಇದೆ. ದೇಶದ ಜಿಡಿಪಿಯಲ್ಲಿ ಶೇ 5.4ರಷ್ಟನ್ನು ಸಾಲದ ಮೇಲಿನ ಬಡ್ಡಿದರದ ರೂಪದಲ್ಲಿ ಪಾವತಿಸಬೇಕಾಗುತ್ತದೆ. ಸಾಲದ ಮೇಲಿನ ಬಡ್ಡಿದರಕ್ಕೆ ಮಾಡುವ ವೆಚ್ಚವನ್ನು ಹೊರತುಪಡಿಸಿದರೆ ವಿತ್ತೀಯ ಕೊರತೆಯು ಶೇ 3.4ರಷ್ಟು ಆಗಲಿದೆ ಎಂದು ಅವರು ವಿವರಿಸಿದ್ದಾರೆ.
ಭಾರತದ ಸಾಲವು ಚೀನಾದಷ್ಟು ಏರಿಕೆ ಆಗುವುದಿಲ್ಲ. 2028ರಲ್ಲಿ ಭಾರತದ ಸಾಲವು ಶೇ 1.5ರಷ್ಟು ಇಳಿಕೆ ಕಂಡು ಶೇ 80.4ಕ್ಕೆ ಬರುವ ಅಂದಾಜು ಮಾಡಿರುವುದಾಗಿ ಅವರು ಹೇಳಿದ್ದಾರೆ.
ಭಾರತದ ಆರ್ಥಿಕ ಬೆಳವಣಿಗಯು ಉತ್ತಮವಾಗಿದೆ. ಇದು ಜಿಡಿಪಿ ಮತ್ತು ಸಾಲದ ಅನುಪಾತದ ಮೇಲೆ ಪ್ರಭಾವ ಬೀರುತ್ತದೆ. ದೇಶದೊಳಗೆ ಕೆಲವು ರಾಜ್ಯಗಳಿಂದ ಹೆಚ್ಚಿನ ಅಪಾಯ ಆಗುವ ಸಂಭವ ಇದೆ. ಕೆಲವು ರಾಜ್ಯಗಳು ಹೆಚ್ಚಿನ ಸಾಲ ಪಡೆದಿವೆ. ಇದಕ್ಕಾಗಿ ಹೆಚ್ಚು ಬಡ್ಡಿದರದ ಹೊರೆ ಎದುರಿಸುತ್ತಿವೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.