ADVERTISEMENT

ಬೇಳೆಕಾಳು ಆಮದು ದುಪ್ಪಟ್ಟು; 2023–24ರಲ್ಲಿ 47.39 ಲಕ್ಷ ಟನ್‌ ಪೂರೈಕೆ

ಪಿಟಿಐ
Published 4 ಆಗಸ್ಟ್ 2024, 0:30 IST
Last Updated 4 ಆಗಸ್ಟ್ 2024, 0:30 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಭಾರತವು ಬೇಳೆಕಾಳುಗಳ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದೆ. ಆದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ಆಹಾರ ಪದಾರ್ಥಗಳ ಬೆಲೆಯನ್ನು ನಿಯಂತ್ರಣಕ್ಕೆ ತರಲು ಕೇಂದ್ರ ಸರ್ಕಾರವು, ಪ್ರತಿವರ್ಷ ಬೇಳೆಕಾಳು ಸೇರಿ ಕೆಲವು ಧಾನ್ಯಗಳನ್ನು ಆಮದು ಮಾಡಿಕೊಳ್ಳುತ್ತಿದೆ.

ಕಳೆದ ನಾಲ್ಕು ವರ್ಷಗಳಿಗೆ ಹೋಲಿಸಿದರೆ 2023–24ರಲ್ಲಿ ಬೇಳೆಕಾಳು ಆಮದು ಪ್ರಮಾಣವು ದುಪ್ಪಟ್ಟಾಗಿದೆ. ತೊಗರಿ, ಉದ್ದು ಮತ್ತು ಚೆನ್ನಂಗಿ ಬೇಳೆಯನ್ನು (ಮಸೂರ್‌ ದಾಲ್) ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಂಡಿದೆ. 

‘2023–24ರಲ್ಲಿ ಒಟ್ಟು 47.39 ಲಕ್ಷ ಟನ್‌ನಷ್ಟು ಬೇಳೆಕಾಳುಗಳನ್ನು ಆಮದು ಮಾಡಿಕೊಳ್ಳಲಾಗಿದೆ’ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಖಾತೆಯ ರಾಜ್ಯ ಸಚಿವೆ ನಿಮುಬೇನ್ ಜಯಂತಿಭಾಯ್ ಬಮ್ಭಾನಿಯಾ ಅವರು, ಲೋಕಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ADVERTISEMENT

ದೇಶೀಯ ಬೇಡಿಕೆಯನ್ನು ಪೂರೈಸಲು ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ 11.32 ಲಕ್ಷ ಟನ್‌ ಆಮದು ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದ್ದಾರೆ.

‘ದೇಶದಲ್ಲಿ ಸ್ಥಳೀಯ ಅಗತ್ಯತೆ ಪೂರೈಸಲು ಅನುಗುಣವಾಗಿ ಬೇಳೆಕಾಳು ಉತ್ಪಾದನೆಯಾಗುತ್ತಿದೆ. ಆದರೆ, ಸ್ಥಳೀಯ ಬೇಡಿಕೆಗೆ ಅನುಗುಣವಾಗಿ ತೊಗರಿ, ಉದ್ದು ಮತ್ತು ಚೆನ್ನಂಗಿ ಬೇಳೆಯನ್ನು ಆಮದು ಮಾಡಿಕೊಳ್ಳಲಾಗಿದೆ’ ಎಂದು ಹೇಳಿದ್ದಾರೆ.

ಮಾರುಕಟ್ಟೆಯಲ್ಲಿ ಆಹಾರ ಪದಾರ್ಥಗಳ ಬೆಲೆ ನಿಯಂತ್ರಣಕ್ಕೆ ಸರ್ಕಾರವು ಕ್ರಮವಹಿಸಿದೆ. ಈ ನಿಟ್ಟಿನಲ್ಲಿ ಬೆಲೆ ಸ್ಥಿರತೆ ನಿಧಿಯಡಿ (ಪಿಎಸ್ಎಫ್‌) ಬೇಳೆಕಾಳು ಮತ್ತು ಈರುಳ್ಳಿ ಕಾಪು ದಾಸ್ತಾನು ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ತೊಗರಿ, ಉದ್ದು, ಚೆನ್ನಂಗಿ ಬೇಳೆ ಮತ್ತು ಕಡಲೆ ಬೇಳೆ ದಾಸ್ತಾನು ಸಾಕಷ್ಟಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಇವುಗಳ ಬೆಲೆ ಏರಿಕೆಯಾದರೆ ನಿಯಂತ್ರಿಸುವಷ್ಟು ದಾಸ್ತಾನು ಇದೆ ಎಂದು ತಿಳಿಸಿದ್ದಾರೆ.

ಕಡಲೆ ಬೇಳೆ ಕೆ.ಜಿಗೆ ₹60

‘ಭಾರತ್‌ ಬ್ರ್ಯಾಂಡ್‌’ನಡಿ 2023ರ ಜುಲೈನಲ್ಲಿ ಕಡಲೆ ಬೇಳೆ ಮಾರಾಟವನ್ನು ಆರಂಭಿಸಲಾಯಿತು. ಚಿಲ್ಲರೆ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಕೇಂದ್ರ ತಿಳಿಸಿದೆ. ಸಬ್ಸಿಡಿ ದರದಲ್ಲಿ ಪ್ರತಿ ಕೆ.ಜಿ ಪ್ಯಾಕೆಟ್‌ಗೆ ₹60 ದರ ನಿಗದಿಪಡಿಸಲಾಗಿದೆ. ಕೆ.ಜಿಗೆ ₹55ರಂತೆ 30 ಕೆ.ಜಿ ತೂಕದ ಪ್ಯಾಕೆಟ್ ದೊರೆಯಲಿದೆ. ಜುಲೈ 22ರ ವರೆಗೆ 11.37 ಲಕ್ಷ ಟನ್‌ನಷ್ಟು ಭಾರತ್‌ ಕಡಲೆ ಬೇಳೆ ಮಾರಾಟವಾಗಿದೆ ಎಂದು ವಿವರಿಸಿದೆ.  ಭಾರತ್‌ ಬ್ರ್ಯಾಂಡ್‌ನಡಿ ಹೆಸರು ಕಾಳು ಕೂಡ ಮಾರಾಟ ಮಾಡುತ್ತಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿಗೆ ₹107 ದರ ನಿಗದಿಪಡಿಸಿದೆ. ಅಲ್ಲದೆ ಚೆನ್ನಂಗಿ ಬೇಳೆಯನ್ನೂ ಮಾರಾಟ ಮಾಡಲಾಗುತ್ತಿದ್ದು ಪ್ರತಿ ಕೆ.ಜಿಗೆ ₹89 ಬೆಲೆ ನಿಗದಿಪಡಿಸಿದೆ.

ಉತ್ಪಾದನೆ ಏರಿಕೆ

ದೇಶದಲ್ಲಿ 2014–15ರಿಂದ 2023–24ರ ವರೆಗೆ ಬೇಳೆಕಾಳು ಉತ್ಪಾದನೆಯಲ್ಲಿ ಶೇ 43ರಷ್ಟು ಹಾಗೂ ಎಣ್ಣೆಕಾಳುಗಳ ಉತ್ಪಾದನೆಯಲ್ಲಿ ಶೇ 44ರಷ್ಟು ಹೆಚ್ಚಳವಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.  2015–16ರಲ್ಲಿ ಒಟ್ಟು 163.23 ಲಕ್ಷ ಟನ್‌ ಬೇಳೆಕಾಳು ಉತ್ಪಾದನೆಯಾಗಿತ್ತು. 2023–24ರಲ್ಲಿ 244.93 ಲಕ್ಷ ಟನ್‌ ಉತ್ಪಾದನೆಯಾಗಿದೆ ಎಂದು ವಿವರಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.