ನವದೆಹಲಿ: ಭಾರತವು ತನ್ನ ಪ್ರಮುಖ 10 ವ್ಯಾಪಾರ ಪಾಲುದಾರ ರಾಷ್ಟ್ರಗಳ ಪೈಕಿ ಒಂಬತ್ತು ದೇಶಗಳ ಜೊತೆಗೆ 2023–24ನೇ ಆರ್ಥಿಕ ವರ್ಷದಲ್ಲಿ ವ್ಯಾಪಾರ ಕೊರತೆ ಎದುರಿಸಿದೆ ಎಂದು ಕೇಂದ್ರ ಸರ್ಕಾರದ ಅಂಕಿ–ಅಂಶಗಳು ತಿಳಿಸಿವೆ.
ಆಮದು ಮತ್ತು ರಫ್ತು ವಹಿವಾಟಿನ ನಡುವಣ ವ್ಯತ್ಯಾಸವನ್ನು ವ್ಯಾಪಾರ ಕೊರತೆ ಎಂದು ಕರೆಯಲಾಗುತ್ತದೆ. ರಫ್ತಿಗಿಂತಲೂ ಆಮದು ಪ್ರಮಾಣವು ಹೆಚ್ಚಾಗಿರುವುದರಿಂದ ಈ ಅವಧಿಯಲ್ಲಿ ದೇಶದ ವ್ಯಾಪಾರ ಕೊರತೆಯು ದಾಖಲೆ ಬರೆದಿದೆ.
2022–23ನೇ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಚೀನಾ, ರಷ್ಯಾ, ಸಿಂಗಪುರ, ಕೊರಿಯಾ ಹಾಗೂ ಹಾಂಗ್‌ಕಾಂಗ್ ನಡುವೆ ವ್ಯಾಪಾರ ಕೊರತೆಯು ಹಿಗ್ಗಿದೆ. ಯುಎಇ, ಸೌದಿ ಅರೇಬಿಯಾ, ಇಂಡೊನೇಷ್ಯಾ ಹಾಗೂ ಇರಾಕ್ ನಡುವಿನ ಕೊರತೆಯ ಅಂತರ ಅಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದೆ.
2023–24ರಲ್ಲಿ ಭಾರತದೊಂದಿಗೆ ಅತಿಹೆಚ್ಚು ವ್ಯಾಪಾರ ನಡೆಸಿದ ರಾಷ್ಟ್ರಗಳ ಪಟ್ಟಿಯಲ್ಲಿ ಅಮೆರಿಕವನ್ನು ಹಿಂದಿಕ್ಕಿ ಚೀನಾವು ಅಗ್ರಸ್ಥಾನದಲ್ಲಿದೆ. ಭಾರತ ಮತ್ತು ಚೀನಾ ನಡುವೆ ₹9.83 ಲಕ್ಷ ಕೋಟಿ ಮೌಲ್ಯದ ದ್ವಿಪಕ್ಷೀಯ ವ್ಯಾಪಾರ ನಡೆದಿದೆ.
2021–22 ಮತ್ತು 2022–23ರಲ್ಲಿ ಅಮೆರಿಕವು ಮೊದಲ ಸ್ಥಾನದಲ್ಲಿತ್ತು. 2023–24ರಲ್ಲಿ ಭಾರತ ಮತ್ತು ಅಮೆರಿಕದ ಮಧ್ಯೆ ₹9.81 ಲಕ್ಷ ಕೋಟಿ ಮೌಲ್ಯದ ದ್ವಿಪಕ್ಷೀಯ ವ್ಯಾಪಾರ ನಡೆದಿದೆ.
ಭಾರತವು ಸಿಂಗಪುರ, ಯುಎಇ, ಕೊರಿಯಾ ಹಾಗೂ ಇಂಡೊನೇಷ್ಯಾದ ನಡುವೆ ಮುಕ್ತ ವ್ಯಾಪಾರ ಒಪ್ಪಂದ ಹೊಂದಿದೆ.
2022–23ರಲ್ಲಿ ಭಾರತದ ವ್ಯಾಪಾರ ಕೊರತೆಯ ಅಂತರವು ₹21.99 ಲಕ್ಷ ಕೋಟಿ ಇತ್ತು. 2023–24ನೇ ಆರ್ಥಿಕ ವರ್ಷದಲ್ಲಿ ₹19.79 ಲಕ್ಷ ಕೋಟಿ ಆಗಿದೆ.
‘ವ್ಯಾಪಾರ ಕೊರತೆಯು ಪ್ರತಿ ಬಾರಿಯೂ ಆರ್ಥಿಕತೆ ಮೇಲೆ ಕೆಟ್ಟ ಪರಿಣಾಮ ಬೀರುವುದಿಲ್ಲ. ಕಚ್ಚಾ ಸರಕುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುವುದರಿಂದ ದೇಶದ ತಯಾರಿಕಾ ಚಟುವಟಿಕೆಗಳಿಗೆ ಉತ್ತೇಜನ ಸಿಗಲಿದೆ. ಇದರಿಂದ ರಫ್ತು ಪ್ರಮಾಣವು ಏರಿಕೆಯಾಗಲಿದೆ. ಆದರೂ, ಈ ಬೆಳವಣಿಗೆಯು ದೇಶೀಯ ಕರೆನ್ಸಿ ಮೇಲೆ ಒತ್ತಡ ಹೆಚ್ಚಿಸಲಿದೆ’ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ.
‘ದ್ವಿಪಕ್ಷೀಯ ವ್ಯಾಪಾರ ಕೊರತೆಯು ದೇಶದ ನಿರ್ಣಾಯಕ ಸರಕುಗಳ ಪೂರೈಕೆ ಮೇಲೆ ಅವಲಂಬಿತವಾಗಿದೆ. ಆದರೆ, ವ್ಯಾಪಾರ ಕೊರತೆಯ ಹೆಚ್ಚಳವು ದೇಶದ ಆರ್ಥಿಕತೆಗೆ ಅಪಾಯ ತರಲಿದೆ’ ಎಂದು ಗ್ಲೋಬಲ್ ಟ್ರೇಡ್ ರಿಸರ್ಚ್ ಇನಿಷಿಯೇಟಿವ್ (ಜಿಟಿಆರ್‌ಐ) ಸಂಸ್ಥಾಪಕ ಅಜಯ್ ಶ್ರೀವಾಸ್ತವ ಹೇಳಿದ್ದಾರೆ.
ಅತಿ ಹೆಚ್ಚು ಕೊರತೆ ಯಾರೊಂದಿಗೆ?
₹6.81 ಲಕ್ಷ ಕೋಟಿ ಚೀನಾ
₹4.75 ಲಕ್ಷ ಕೋಟಿ ರಷ್ಯಾ
₹1.22 ಲಕ್ಷ ಕೋಟಿ ಕೊರಿಯಾ
₹1.01 ಲಕ್ಷ ಕೋಟಿ ಹಾಂಗ್‌ಕಾಂಗ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.