ಮುಂಬೈ: ಗ್ರಾಹಕರು ಮಾಡುವ ವೆಚ್ಚದ ಪ್ರಮಾಣ ಕಡಿಮೆಯಾಗಿರುವುದು ಮತ್ತು ಸರಕುಗಳ ಬೆಲೆ ಅಗ್ಗವಾಗಿರುವುದರಿಂದ ಉದ್ದಿಮೆ ಸಂಸ್ಥೆಗಳ ವರಮಾನ ಹೆಚ್ಚಳವು ನಾಲ್ಕನೆ ತ್ರೈಮಾಸಿಕದಲ್ಲಿ ಶೇ 10.7ಕ್ಕೆ ಕುಸಿದಿದೆ.
ಒಂದೂವರೆ ವರ್ಷದಲ್ಲಿನ ಅತ್ಯಂತ ಕಡಿಮೆ ಮಟ್ಟ ಇದಾಗಿದೆ. ಲಾಭದ ದೃಷ್ಟಿಯಿಂದ ನೋಡಿದರೆ, ಕಾರ್ಯನಿರ್ವಹಣಾ ಲಾಭವು, ಜನವರಿಯಿಂದ ಮಾರ್ಚ್ ಅವಧಿಯಲ್ಲಿ ಶೇ 0.78ರಷ್ಟು ಕಡಿಮೆಯಾಗಿ ಶೇ 16.8ರಷ್ಟಾಗಿದೆ ಎಂದು ರೇಟಿಂಗ್ ಸಂಸ್ಥೆ ‘ಇಕ್ರಾ’ (ಐಸಿಆರ್‌ಎ) ತನ್ನ ವರದಿಯಲ್ಲಿ ತಿಳಿಸಿದೆ.
ಷೇರುಪೇಟೆಯಲ್ಲಿ ವಹಿವಾಟು ನಡೆಸುವ 304 ಕಂಪನಿಗಳ ಹಣಕಾಸು ಸಾಧನೆ ಪರಿಗಣಿಸಿ ಈ ನಿರ್ಧಾರಕ್ಕೆ ಬರಲಾಗಿದೆ.
‘ಗ್ರಾಹಕ ಉತ್ಪನ್ನ ತಯಾರಿಸುವ ಕಂಪನಿಗಳ ವರಮಾನ ಶೇ 2.3ರಷ್ಟು ಮತ್ತು ಇಂತಹ ಉತ್ಪನ್ನಗಳ ತಯಾರಿಕೆಗೆ ಸಂಬಂಧಿಸಿದ ಇತರ ಕಂಪನಿಗಳ ವರಮಾನವು ಶೇ 31ರಿಂದ ಶೇ 12.4ಕ್ಕೆ ಇಳಿದಿದೆ. ಪ್ರಯಾಣಿಕ ವಾಹನ ಮತ್ತು ದ್ವಿಚಕ್ರ ವಾಹನಗಳ ಮಾರಾಟ, ರಿಟೇಲ್ ಸರಣಿ ಮಳಿಗೆಗಳಲ್ಲಿನ ವಹಿವಾಟು, ಎಫ್‌ಎಂಸಿಜಿ ಕಂಪನಿಗಳ ಉತ್ಪನ್ನಗಳ ಮಾರಾಟ ಬೆಳವಣಿಗೆಯಲ್ಲಿ ಈ ಕುಸಿತ ಕಂಡು ಬರುತ್ತದೆ. ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಗ್ರಾಹಕರ ಖರೀದಿ ಆಸಕ್ತಿ ಕಡಿಮೆಯಾಗಿದೆ’ ಎಂದು ‘ಇಕ್ರಾ’ದ ಉಪಾಧ್ಯಕ್ಷ ಶಂಷೇರ್ ದೇವನ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.