ADVERTISEMENT

ಭಾರತ ಬಲಿಷ್ಠ ಸಾಧಕ ರಾಷ್ಟ್ರ: ಅಂತರರಾಷ್ಟ್ರೀಯ ಹಣಕಾಸು ನಿಧಿ

ಪಿಟಿಐ
Published 17 ಏಪ್ರಿಲ್ 2024, 14:36 IST
Last Updated 17 ಏಪ್ರಿಲ್ 2024, 14:36 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ವಾಷಿಂಗ್ಟನ್‌: ಇಡೀ ವಿಶ್ವದಲ್ಲಿಯೇ ಭಾರತವು ಬಲಿಷ್ಠ ಸಾಧಕ ರಾಷ್ಟ್ರಗಳ ಪೈಕಿ ಒಂದಾಗಿದ್ದು, 2024ರಲ್ಲಿ ದೇಶದ ಜಿಡಿಪಿ ಬೆಳವಣಿಗೆಯು ಶೇ 6.8ರಷ್ಟು ಪ್ರಗತಿ ಕಾಣಲಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿಯು (ಐಎಂಎಫ್‌) ಅಂದಾಜಿಸಿದೆ.

ಜನವರಿಯಲ್ಲಿ ಪ್ರಕಟಿಸಿದ್ದ ಮುನ್ನೋಟದಲ್ಲಿ ಜಿಡಿಪಿಯು ಶೇ 6.5ರಷ್ಟು ಬೆಳವಣಿಗೆ ಸಾಧಿಸಲಿದೆ ಎಂದು ಹೇಳಿತ್ತು. ಮಂಗಳವಾರ ಬಿಡುಗಡೆ ಮಾಡಿರುವ ವಿಶ್ವ ಆರ್ಥಿಕ ಮುನ್ನೋಟದ ವರದಿಯಲ್ಲಿ ಇದನ್ನು ಪರಿಷ್ಕರಿಸಿದೆ. ಇದೇ ಅವಧಿಯಲ್ಲಿ‌‌ ಚೀನಾದ ಜಿಡಿಪಿಯು ಶೇ 4.6ರಷ್ಟು ಬೆಳವಣಿಗೆ ಸಾಧಿಸಲಿದೆ ಎಂದು ವಿವರಿಸಿದೆ.

ADVERTISEMENT

‘2025ರಲ್ಲಿ ಭಾರತದ ಜಿಡಿಪಿಯು ಶೇ 6.5ರಷ್ಟು ಪ್ರಗತಿ ಕಾಣಲಿದೆ. ದೇಶೀಯ ಬೇಡಿಕೆಯ ದೃಢತೆ ಹಾಗೂ ದುಡಿಯುವ ವಯಸ್ಸಿನ ಜನಸಂಖ್ಯೆ ಹೆಚ್ಚಳವು  ಆರ್ಥಿಕತೆಯ ಬೆಳವಣಿಗೆಗೆ ನೆರವಾಗಲಿದೆ’ ಎಂದು ಹೇಳಿದೆ.

‘ಭಾರತವು ಬಲಿಷ್ಠ ಸಾಧಕ ರಾಷ್ಟ್ರವಾಗಿದೆ. ಹಾಗಾಗಿಯೇ, 2024 ಹಾಗೂ 2025ನೇ ಸಾಲಿನ ಆರ್ಥಿಕತೆ ಬೆಳವಣಿಗೆಯನ್ನು ಪರಿಷ್ಕರಿಸಲಾಗಿದೆ’ ಎಂದು ಐಎಂಎಫ್‌ನ ಮುಖ್ಯ ಅರ್ಥಶಾಸ್ತ್ರಜ್ಞ ಪಿಯರೆ ಒಲಿವಿಯರ್ ಗೌರಿಂಚಸ್ ತಿಳಿಸಿದ್ದಾರೆ.

ಆದರೆ, ಇದೇ ಅವಧಿಯಲ್ಲಿ ಏಷ್ಯಾದ ಬೆಳವಣಿಗೆಯು ಕುಸಿತ ಕಾಣಲಿದೆ ಎಂದು ವರದಿ ಹೇಳಿದೆ. 2023ರಲ್ಲಿ ಶೇ 5.6ರಷ್ಟಿದ್ದ ಜಿಡಿಪಿಯು, 2024ರಲ್ಲಿ ಶೇ 5.2ಕ್ಕೆ ಕುಸಿಯಲಿದೆ. 2025ರಲ್ಲಿಯೂ ಇದೇ ಸ್ಥಿತಿ ಮುಂದುವರಿಸಲಿದ್ದು, ಶೇ 4.9ಕ್ಕೆ ಇಳಿಕೆಯಾಗಲಿದೆ ಎಂದು ಅಂದಾಜಿಸಿದೆ.

2023ರಲ್ಲಿ ಶೇ 5.2ರಷ್ಟಿದ್ದ ಚೀನಾದ ಜಿಡಿಪಿಯು, 2024ರಲ್ಲಿ ಶೇ 4.6ಕ್ಕೆ ಇಳಿಕೆಯಾಗಲಿದೆ. 2025ರಲ್ಲಿ ಶೇ 4.1ರಷ್ಟು ದಾಖಲಾಗಲಿದೆ ಎಂದು ಅಂದಾಜಿಸಿದೆ.

ಯುಎನ್‌ಸಿಟಿಎಡಿ ವರದಿ ಬಿಡುಗಡೆ: ‌2024ರಲ್ಲಿ ಭಾರತದ ಜಿಡಿಪಿಯು ಶೇ 6.5ರಷ್ಟು ಬೆಳವಣಿಗೆ ಸಾಧಿಸಲಿದೆ ಎಂದು ವಿಶ್ವಸಂಸ್ಥೆಯ ವಿಶ್ವ ವಾಣಿಜ್ಯ ಮತ್ತು ಅಭಿವೃದ್ಧಿ ಸಮ್ಮೇಳನದ (ಯುಎನ್‌ಸಿಟಿಎಡಿ) ವರದಿ ತಿಳಿಸಿದೆ.

ಬಹುರಾಷ್ಟ್ರೀಯ ಕಂಪನಿಗಳು ಪೂರೈಕೆ ಸರಪಳಿಯ ವೈವಿಧ್ಯಕ್ಕೆ ಒತ್ತು ನೀಡುತ್ತವೆ. ಇದರಿಂದ ದೇಶದಲ್ಲಿನ ತಯಾರಿಕಾ ವಲಯದ ಪ್ರಕ್ರಿಯೆಯು ವಿಸ್ತರಣೆಯಾಗಲಿದೆ. ಇದು ದೇಶದ ರಫ್ತು ಹೆಚ್ಚಳದ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ ಎಂದು ವರದಿ ತಿಳಿಸಿದೆ.

2023ರಲ್ಲಿ ಭಾರತದ ಜಿಡಿಪಿಯು ಶೇ 6.7ರಷ್ಟು ಪ್ರಗತಿ ದಾಖಲಿಸಲಿದೆ. ಪ್ರಸಕ್ತ ವರ್ಷದಲ್ಲಿಯೂ ಈ ವೇಗವನ್ನು ಕಾಯ್ದುಕೊಳ್ಳಲಿದ್ದು, ಇಡೀ ವಿಶ್ವದಲ್ಲಿಯೇ ಅತಿವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಮುಂದುವರಿಯಲಿದೆ ಎಂದು ಹೇಳಿದೆ.

ಚೀನಾ: ಮೊದಲ ತ್ರೈಮಾಸಿಕದಲ್ಲಿ ಶೇ 5.3ರಷ್ಟು ದಾಖಲು

ಬೀಜಿಂಗ್‌ (ಪಿಟಿಐ): ರಿಯಾಲ್ಟಿ ವಲಯದಲ್ಲಿನ ಕುಸಿತದ ನಡುವೆಯೂ ಪ್ರಸಕ್ತ ವರ್ಷದ ಮೊದಲ ತ್ರೈಮಾಸಿಕದಲ್ಲಿ ಚೀನಾದ ಆರ್ಥಿಕತೆ ಬೆಳವಣಿಗೆಯು ಶೇ 5.3ರಷ್ಟು ಪ್ರಗತಿ  ದಾಖಲಿಸಿದೆ. 

ತ್ರೈಮಾಸಿಕ ಲೆಕ್ಕಾಚಾರದಲ್ಲಿ ಕಳೆದ ಮೂರು ತಿಂಗಳ ಅವಧಿಯಲ್ಲಿ ಆರ್ಥಿಕತೆಯು ಶೇ 1.6ರಷ್ಟು ಹೆಚ್ಚಳವಾಗಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಇಲಾಖೆಯ (ಎನ್‌ಬಿಎಸ್‌)  ವರದಿ ತಿಳಿಸಿದೆ.

‘ಮೊದಲ ತ್ರೈಮಾಸಿಕದಲ್ಲಿ ಚೀನಾದ ಅಭಿವೃದ್ಧಿಯ ಹೊಸ ದಾಖಲೆ ಬರೆದಿದೆ. ದೇಶದ ಆರ್ಥಿಕತೆಯು ಸುಸ್ಥಿರ ಚೇತರಿಕೆಯ ಹಾದಿಗೆ ಮರಳಿದೆ. ಪ್ರಸಕ್ತ ವರ್ಷದಲ್ಲಿ ಉತ್ತಮ ಆರಂಭ ಕಂಡಿದೆ’ ಎಂದು ಎನ್‌ಬಿಎಸ್‌ನ ಉಪ ಮುಖ್ಯಸ್ಥ ಶೆಂಗ್ ಲೈಯುನ್ ತಿಳಿಸಿದ್ದಾರೆ.

ಉತ್ಪಾದನೆಗೆ ಬೇಡಿಕೆ ಹೆಚ್ಚಳದ ಜೊತೆಗೆ ಉದ್ಯೋಗ ಮತ್ತು ಬೆಲೆಯು ಸ್ಥಿರವಾಗಿದೆ. ಹಾಗಾಗಿ ಮಾರುಕಟ್ಟೆ ಬೆಳವಣಿಗೆ ಕಂಡಿದೆ ಎಂದಿದ್ದಾರೆ. 2023ರಲ್ಲಿ ಚೀನಾದ ಜಿಡಿಪಿಯು ಶೇ 5.2ರಷ್ಟು ದಾಖಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.