ADVERTISEMENT

ಸಕ್ಕರೆ ರಫ್ತು ಸಬ್ಸಿಡಿ ಹಿಂದಕ್ಕೆ?

ರಾಯಿಟರ್ಸ್
Published 17 ಆಗಸ್ಟ್ 2021, 15:52 IST
Last Updated 17 ಆಗಸ್ಟ್ 2021, 15:52 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಸಕ್ಕರೆ ರಫ್ತಿಗೆ ನೀಡುತ್ತಿರುವ ಸಬ್ಸಿಡಿಯನ್ನು ಕೇಂದ್ರ ಸರ್ಕಾರವು ಅಕ್ಟೋಬರ್‌ನಿಂದ ಹಿಂಪಡೆಯುವ ಸಾಧ್ಯತೆ ಇದೆ. ‘ಮುಂದಿನ ಹಂಗಾಮಿಗೆ ಸಬ್ಸಿಡಿ ನೀಡುವ ವಿಚಾರವು ಸರ್ಕಾರದ ಮುಂದಿಲ್ಲ’ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ಸರಬರಾಜು ಸಚಿವಾಲಯದ ಹಿರಿಯ ಅಧಿಕಾರಿ ಸುಧಾಂಶು ಪಾಂಡೆ ಹೇಳಿದ್ದಾರೆ.

‘ಈಗಿನ ಪರಿಸ್ಥಿತಿಯಲ್ಲಿ ಸಬ್ಸಿಡಿಯ ಬೆಂಬಲ ನೀಡುವ ಅಗತ್ಯ ಕಾಣಿಸುತ್ತಿಲ್ಲ. ಸಕ್ಕರೆ ರಫ್ತು ಅದರ ಪಾಡಿಗೆ ಅದು ನಡೆಯುತ್ತದೆ ಎಂದಾದರೆ, ಸಬ್ಸಿಡಿಯನ್ನು ನೀಡದೆ ಇರುವುದು ಜಾಗತಿಕ ಮಾರುಕಟ್ಟೆಗೆ ಒಳ್ಳೆಯದು ಕೂಡ’ ಎಂದು ಅವರು ಹೇಳಿದ್ದಾರೆ. ಬ್ರೆಜಿಲ್‌ ನಂತರ ಅತಿಹೆಚ್ಚು ಸಕ್ಕರೆ ಉತ್ಪಾದನೆ ಆಗುವುದು ಭಾರತದಲ್ಲಿ. ಕೇಂದ್ರವು ಮೂರು ವರ್ಷಗಳಿಂದ ಸಕ್ಕರೆ ರಫ್ತಿಗೆ ಸಬ್ಸಿಡಿ ನೀಡುತ್ತಿದೆ.

ಪ್ರತಿಸ್ಪರ್ಧಿ ದೇಶಗಳು ಭಾರತವು ಸಕ್ಕರೆ ರಫ್ತಿಗೆ ಸಬ್ಸಿಡಿ ಕೊಡುವುದನ್ನು ವಿರೋಧಿಸುತ್ತಿವೆ. ಬ್ರೆಜಿಲ್, ಆಸ್ಟ್ರೇಲಿಯಾ, ಗ್ವಾಟೆಮಾಲ ದೇಶಗಳು ದೂರು ಸಲ್ಲಿಸಿದ ನಂತರ, ಭಾರತ ನೀಡುತ್ತಿರುವ ಸಬ್ಸಿಡಿ ಬಗ್ಗೆ ತೀರ್ಮಾನಿಸಲು ಸಮಿತಿಯೊಂದನ್ನು ರಚಿಸುವುದಾಗಿ ವಿಶ್ವ ವ್ಯಾಪಾರ ಸಂಘಟನೆ (ಡಬ್ಲ್ಯುಟಿಒ) 2019ರಲ್ಲಿ ತೀರ್ಮಾನಿಸಿತು. ತಾನು ಸಬ್ಸಿಡಿ ನೀಡುತ್ತಿರುವುದು ಡಬ್ಲ್ಯುಟಿಒ ನಿಯಮಗಳ ಉಲ್ಲಂಘನೆ ಅಲ್ಲ ಎಂಬುದು ಭಾರತದ ನಿಲುವು.

ADVERTISEMENT

‘ಭಾರತದ ಸಕ್ಕರೆಗೆ ಬೇಡಿಕೆ ಹೆಚ್ಚಿರಲಿದೆ. ಹಾಗಾಗಿ ಜಾಗತಿಕ ಮಟ್ಟದಲ್ಲಿ ಬೆಲೆ ಸ್ಥಿರವಾಗಲಿದೆ. ಸಬ್ಸಿಡಿಯ ಅಗತ್ಯ ಎದುರಾಗಲಿಕ್ಕಿಲ್ಲ’ ಎಂದು ಪಾಂಡೆ ಹೇಳಿದರು.

ಸಕ್ಕರೆಯ ಬೆಲೆಯು ಹೆಚ್ಚಾಗುತ್ತಿರುವುದರ ಪ್ರಯೋಜನ ಪಡೆಯಲು, ಭಾರತದ ವರ್ತಕರು ರಫ್ತು ಒಪ್ಪಂದಗಳನ್ನು ಮಾಡಿಕೊಂಡಿದ್ದಾರೆ. ರಫ್ತು ಆಗಬೇಕಿರುವ ಐದು ತಿಂಗಳ ಮೊದಲೇ ಒಪ್ಪಂದಗಳು ಆಗಿವೆ. ಬ್ರೆಜಿಲ್‌ನಲ್ಲಿ ಸಕ್ಕರೆ ಉತ್ಪಾದನೆ ಕಡಿಮೆ ಆಗುವ ಸಾಧ್ಯತೆ ಇರುವ ಕಾರಣ, ಖರೀದಿದಾರರು ಭಾರತದಿಂದ ಸಕ್ಕರೆ ತರಿಸಿಕೊಳ್ಳಲು ಮುಂದಾಗುತ್ತಿದ್ದಾರೆ.

‘ಬ್ರೆಜಿಲ್‌ನಲ್ಲಿ ಉತ್ಪಾದನೆ ಕಡಿಮೆ ಆಗಲಿದೆ ಎನ್ನಲಾಗಿದೆ. ಹಾಗಾಗಿ, ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಕೆಯು ಹೆಚ್ಚಿದೆ. ಮುಂದಿನ ಹಂಗಾಮಿನಲ್ಲಿ ನಾವು 60 ಲಕ್ಷ ಟನ್ ಸಕ್ಕರೆಯನ್ನು ರಫ್ತು ಮಾಡಬಹುದು’ ಎಂದು ಸಹಕಾರಿ ಸಕ್ಕರೆ ಕಾರ್ಖಾನೆಗಳ ರಾಷ್ಟ್ರೀಯ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್ ಎನ್. ಹೇಳಿದರು.

ಸೆಪ್ಟೆಂಬರ್‌ 30ಕ್ಕೆ ಕೊನೆಗೊಳ್ಳಲಿರುವ ಪ್ರಸಕ್ತ ವರ್ಷದಲ್ಲಿ ದೇಶವು ಒಟ್ಟು 71 ಲಕ್ಷ ಟನ್ ಸಕ್ಕರೆಯನ್ನು ರಫ್ತು ಮಾಡುವ ನಿರೀಕ್ಷೆ ಇದೆ. ಇಷ್ಟು ಪ್ರಮಾಣದಲ್ಲಿ ರಫ್ತು ಸಾಧ್ಯವಾಗುವುದಕ್ಕೆ ಸಬ್ಸಿಡಿಯ ಕೊಡುಗೆಯೂ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.