ನವದೆಹಲಿ: ಭೂತಾನ್‌ನಿಂದ ಕನಿಷ್ಠ ಆಮದು ಬೆಲೆಯ (ಎಂಐಪಿ) ಷರತ್ತು ಇಲ್ಲದೆಯೇ 17 ಸಾವಿರ ಟನ್ ಹಸಿ ಅಡಿಕೆ ಆಮದು ಮಾಡಿಕೊಳ್ಳಲು ಕೇಂದ್ರ ಸರ್ಕಾರವು, ಬುಧವಾರ ಅನುಮತಿ ನೀಡಿದೆ.
ಒಡಿಶಾದ ಹತಿಸರ್ ಮತ್ತು ಅಸ್ಸಾಂನ ದರ್ರಂಗದ ಕಸ್ಟಮ್ಸ್ ಕೇಂದ್ರದ ಮೂಲಕ ಈ ಅಡಿಕೆ ಆಮದಿಗೆ ಒಪ್ಪಿಗೆ ನೀಡಲಾಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯದ ಅಧೀನದಲ್ಲಿ ಬರುವ ವಿದೇಶಿ ವ್ಯಾಪಾರದ ಮಹಾ ನಿರ್ದೇಶನಾಲಯ (ಡಿಜಿಎಫ್‌ಟಿ) ತಿಳಿಸಿದೆ.
2022ರ ಸೆಪ್ಟೆಂಬರ್‌ನಲ್ಲಿ ಪ್ರತಿ ವರ್ಷ ಭೂತಾನ್‌ನಿಂದ ಎಂಐಪಿ ಇಲ್ಲದೆ 17 ಸಾವಿರ ಟನ್ ಹಸಿ ಅಡಿಕೆ ಆಮದು ಮಾಡಿಕೊಳ್ಳಲು ಒಪ್ಪಿಗೆ ನೀಡಲಾಗಿತ್ತು.
2017ರಲ್ಲಿ ಕೇಂದ್ರ ಸರ್ಕಾರವು ಪ್ರತಿ ಕೆ.ಜಿ ಅಡಿಕೆಗೆ ₹251 ಕನಿಷ್ಠ ಆಮದು ಬೆಲೆ ನಿಗದಿಪಡಿಸಿದೆ. ಕಳೆದ ವರ್ಷ ಈ ಬೆಲೆಯನ್ನು ಕೆ.ಜಿಗೆ ₹351ಕ್ಕೆ ಹೆಚ್ಚಿಸಿದೆ. ದೇಶದ ಬೆಳೆಗಾರರ ಹಿತಕಾಯುವ ನಿಟ್ಟಿನಲ್ಲಿ ಈ ಕ್ರಮ ಕೈಗೊಂಡಿದೆ.
ಯಾವುದೇ ದೇಶದಿಂದ ಅಡಿಕೆ ಆಮದು ಮಾಡಿಕೊಂಡರೂ ಈ ಬೆಲೆಗಿಂತ ಕಡಿಮೆಗೆ ಆಮದು ಮಾಡಿಕೊಳ್ಳಬಾರದು ಎಂದು ಹೇಳಿದೆ.
ಅಕ್ರಮ ಪ್ರಕರಣ ಹೆಚ್ಚಳ ಸಾಧ್ಯತೆ
ಬೆಂಗಳೂರು: ದೇಶದಲ್ಲಿ ಅಡಿಕೆ ಅಕ್ರಮ ಆಮದು ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಸರ್ಕಾರವು ನೀಡಿರುವ ಈ ಅನುಮತಿಯು ರಾಜ್ಯ ಬೆಳೆಗಾರರನ್ನು ನಿದ್ದೆಗೆಡಿಸಿದೆ. ಈಗಾಗಲೇ ಅಡಿಕೆ ಮರಗಳಿಗೆ ಎಲೆಚುಕ್ಕಿ ಕೊಳೆ ರೋಗ ಕಾಣಿಸಿಕೊಂಡಿದ್ದು ಬೆಳೆಗಾರರು ನಷ್ಟಕ್ಕೆ ಸಿಲುಕಿಸಿದ್ದಾರೆ. ಭಾರತದಲ್ಲಿ ಉತ್ಪಾದನೆಯಾಗುವ ಒಟ್ಟು ಅಡಿಕೆಯ ಪೈಕಿ ಶೇ 2ರಷ್ಟು ಅಡಿಕೆಯನ್ನಷ್ಟೇ ಭೂತಾನ್‌ನಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ವರ್ತಕರು ಸರ್ಕಾರದ ಆದೇಶವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ವರ್ಷದಿಂದ ವರ್ಷಕ್ಕೆ ಅಡಿಕೆ ಅಕ್ರಮ ಆಮದು ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಕೇಂದ್ರ ಸರ್ಕಾರವು ಸಂಸತ್‌ಗೆ ಸಲ್ಲಿಸಿರುವ ಉತ್ತರದಲ್ಲಿ ತಿಳಿಸಿದೆ. ದೇಶದಲ್ಲಿ ಕಳೆದ ಐದು ವರ್ಷದಲ್ಲಿ ಕೇಂದ್ರೀಯ ಪರೋಕ್ಷ ತೆರಿಗೆಗಳು ಹಾಗೂ ಕಸ್ಟಮ್ಸ್ ಮಂಡಳಿಯ ತನಿಖಾ ತಂಡವು 26 ಸಾವಿರ ಟನ್‌ಗೂ ಹೆಚ್ಚು ಅಡಿಕೆಯನ್ನು ವಶಕ್ಕೆ ಪಡೆದಿದೆ.
ವರ್ತಕರ ಮೇಲೆ ನಿಗಾ ಇಡಲು ಒತ್ತಾಯ
ಶಿರಸಿ: ಭೂತಾನ್‌ನಿಂದ ಆಮದು ಮಾಡಿಕೊಳ್ಳುವ ಅಡಿಕೆ ಪ್ರಮಾಣವು ದೇಶೀಯ ಅಡಿಕೆ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ. ಆದರೆ ವ್ಯಾಪಾರಿಗಳು ಇದರ ಲಾಭ ಪಡೆದು ಸ್ಥಳೀಯವಾಗಿ ಬೆಲೆ ಕಡಿಮೆ ಮಾಡಲು ಬಳಸಿಕೊಳ್ಳುತ್ತಾರೆ ಎಂಬುದು ಬೆಳೆಗಾರರ ಆತಂಕವಾಗಿದೆ. ಸರ್ಕಾರ ಮತ್ತು ಅಧಿಕಾರಿಗಳಿಗೆ ಬೆಳೆಗಾರರ ಬಗ್ಗೆ ನಿಜವಾದ ಕಾಳಜಿ ಇದ್ದರೆ ವರ್ತಕರು ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಳ್ಳದಂತೆ ಕ್ರಮ ಕೈಗೊಳ್ಳಬೇಕು. ರೈತರಿಗೆ ನಿಜವಾಗಿಯೂ ಬೇಕಿರುವುದು ಬೆಳೆಗೆ ತಕ್ಕ ನ್ಯಾಯಯುತ ಬೆಲೆ. ಅದನ್ನು ಕೊಡಿಸಲು ಪ್ರಯತ್ನಿಸಬೇಕು ಎಂಬುದು ಮಾರುಕಟ್ಟೆ ತಜ್ಞರ ಒತ್ತಾಯ. ‘ಭೂತಾನ್ ಅಡಿಕೆ ಭಾರತಕ್ಕೆ ಬರುತ್ತಿದ್ದಂತೆ ಅಡಿಕೆ ದರದಲ್ಲಿ ಸ್ವಲ್ಪ ಮಟ್ಟಿನ ಏರುಪೇರು ಶುರುವಾಗುತ್ತದೆ. ಕಳೆದ ವರ್ಷಗಳಲ್ಲಿ ಕ್ವಿಂಟಲ್‌ವೊಂದಕ್ಕೆ ₹4 ಸಾವಿರದವರೆಗೆ ದರ ಇಳಿದಿತ್ತು’ ಎಂದು ಅಡಿಕೆ ವಹಿವಾಟು ನಡೆಸುವ ಸಹಕಾರ ಸಂಘಗಳ ಪ್ರಮುಖರು ಹೇಳುತ್ತಾರೆ. ‘ಹಸಿ ಅಡಿಕೆ ಆಮದಿನ ಮೇಲೂ ಹೆಚ್ಚಿನ ತೆರಿಗೆ ವಿಧಿಸಬೇಕು. ಹಾಗಾದರೆ ಮಾತ್ರ ದೇಶೀಯ ಉತ್ಪನ್ನದ ದರದಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಸಾಧ್ಯ’ ಎಂದು ಟಿಎಸ್‌ಎಸ್ ಪ್ರಮುಖರಾದ ಗೋಪಾಲಕೃಷ್ಣ ವೈದ್ಯ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.