ADVERTISEMENT

‘ಕೈಗೆಟಕುವಂತೆ ಇರಲಿ ತೈಲ ಬೆಲೆ’: ಒಪೆಕ್ ಒಕ್ಕೂಟಕ್ಕೆ ಭಾರತ ಆಗ್ರಹ

ಒಪೆಕ್ ಒಕ್ಕೂಟಕ್ಕೆ ಭಾರತ ಆಗ್ರಹ

ಪಿಟಿಐ
Published 24 ಜೂನ್ 2021, 17:00 IST
Last Updated 24 ಜೂನ್ 2021, 17:00 IST
ಕಚ್ಚಾ ತೈಲ-ಪ್ರಾತಿನಿಧಿಕ ಚಿತ್ರ
ಕಚ್ಚಾ ತೈಲ-ಪ್ರಾತಿನಿಧಿಕ ಚಿತ್ರ   

ನವದೆಹಲಿ: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಕೈಗೆಟಕುವಂತೆ ಇರಬೇಕು ಎಂದು ಭಾರತವು ಪೆಟ್ರೋಲಿಯಂ ಉತ್ಪನ್ನಗಳ ರಫ್ತುದಾರ ದೇಶಗಳ ಒಕ್ಕೂಟವಾದ ‘ಒಪೆಕ್‌’ಗೆ ಒತ್ತಾಯ ಮಾಡಿದೆ. ಅಲ್ಲದೆ, ಒಪೆಕ್ ಸದಸ್ಯ ದೇಶಗಳು ಕಚ್ಚಾ ತೈಲ ಉತ್ಪಾದನೆಯಲ್ಲಿ ಮಾಡಿರುವ ಕಡಿತವನ್ನು ತೆರವು ಮಾಡಬೇಕು ಎಂದೂ ಹೇಳಿದೆ.

ಕೇಂದ್ರ ಇಂಧನ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಒಪೆಕ್‌ ಮಹಾ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಸನುಸಿ ಬರ್ಕಿಂಡೊ ಅವರ ಜೊತೆ ವರ್ಚುವಲ್ ಮಾಧ್ಯಮದ ಮೂಲಕ ಗುರುವಾರ ಮಾತುಕತೆ ನಡೆಸಿದರು. ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರೆಲ್‌ಗೆ 75 ಡಾಲರ್‌ಗಿಂತ ಜಾಸ್ತಿ ಆಗಿರುವುದರ ಬಗ್ಗೆ ಪ್ರಧಾನ್ ಅವರು ಕಳವಳ ವ್ಯಕ್ತಪಡಿಸಿದರು.

‘ಆರ್ಥಿಕ ಹಾಗೂ ಸಾಮಾಜಿಕ ಪ್ರಗತಿಗೆ ತೈಲ ಬೆಲೆಯು ಕೈಗೆಟಕುವ ಮಟ್ಟದಲ್ಲಿ ಇರಬೇಕಾದುದರ ಮಹತ್ವವನ್ನು ಪ್ರಧಾನ್ ಅವರು ಹೇಳಿದ್ದಾರೆ’ ಎಂದು ಸಭೆಯ ನಂತರ ಒಪೆಕ್ ಹೇಳಿಕೆ ನೀಡಿದೆ. ‘ಬೆಲೆ ಹೆಚ್ಚಾಗುತ್ತಿರುವುದರ ಬಗ್ಗೆ ಪ್ರಧಾನ್ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ತೈಲ ಬೆಲೆ ಹೆಚ್ಚಾಗಿರುವುದು ದೇಶದಲ್ಲಿ ಹಣದುಬ್ಬರ ಜಾಸ್ತಿ ಆಗುವಂತೆ ಮಾಡಿದೆ ಎಂಬುದನ್ನು ಅವರು ಒತ್ತಿ ಹೇಳಿದ್ದಾರೆ’ ಎಂದು ಇಂಧನ ಸಚಿವಾಲಯದ ಹೇಳಿಕೆ ವಿವರಿಸಿದೆ.

ADVERTISEMENT

ತೈಲ ಬೆಲೆ ಏರಿಕೆ: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಗುರುವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕ್ರಮವಾಗಿ 26 ಪೈಸೆ ಹಾಗೂ 27 ಪೈಸೆಯಷ್ಟು ಹೆಚ್ಚಿಸಿದ್ದು, ಪೆಟ್ರೋಲ್ ಬೆಲೆಯು ಚೆನ್ನೈನಲ್ಲಿ ₹ 99ರ ಗಡಿ ಸಮೀಪಿಸಿದೆ. ಈಗ ಅಲ್ಲಿ ಪೆಟ್ರೋಲ್ ಬೆಲೆ ₹ 98.88 ಆಗಿದೆ.

ದೆಹಲಿಯಲ್ಲಿ ಪೆಟ್ರೋಲ್ ಬೆಲೆಯು ₹ 97.76, ಡೀಸೆಲ್ ಬೆಲೆಯು ₹ 88.30 ಆಗಿದೆ. ಮೇ 4ರ ನಂತರ ಪೆಟ್ರೋಲ್ ಬೆಲೆಯು ₹ 7.36ರಷ್ಟು, ಡೀಸೆಲ್ ಬೆಲೆಯು ₹ 7.77ರಷ್ಟು ಜಾಸ್ತಿ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.