ನವದೆಹಲಿ: ‘ಕೋವಿಡ್–19 ಸಾಂಕ್ರಾಮಿಕ ನಿಯಂತ್ರಿಸಲು ಹೆಚ್ಚು ವೆಚ್ಚ ಮಾಡಲಾಗಿದೆ. ಹೀಗಾಗಿ ವಿತ್ತೀಯ ಕೊರತೆಯಲ್ಲಿ ಏರಿಕೆ ಆಗಿದೆ. ಈ ಕಾರಣಕ್ಕಾಗಿ ದೇಶದ ರೇಟಿಂಗ್ಸ್ ಒತ್ತಡಕ್ಕೆ ಒಳಗಾಗಬಾರದು’ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ತರುಣ್ ಬಜಾಜ್ ಹೇಳಿದ್ದಾರೆ.
ಬಜೆಟ್‌ನಲ್ಲಿ ಅಂದಾಜು ಮಾಡಿರುವ ಅಂಕಿ–ಅಂಶಗಳ ವಿಶ್ವಾಸಾರ್ಹತೆಯನ್ನು ಗಮನಿಸಿದರೆ, ಜಾಗತಿಕ ರೇಟಿಂಗ್ ಏಜೆನ್ಸಿಗಳು ಭಾರತದ ರೇಟಿಂಗ್ ಅನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳುವ ಭರವಸೆ ಇದೆ ಎಂದೂ ತಿಳಿಸಿದ್ದಾರೆ.
ಸಾಲ ಮರುಪಾವತಿ ಸಾಮರ್ಥ್ಯ, ವಿತ್ತೀಯ ಶಿಸ್ತು ಕಾಯ್ದುಕೊಳ್ಳುವುದರಲ್ಲಿ ದೇಶವು ಯಾವ ಸ್ಥಾನದಲ್ಲಿದೆ ಎನ್ನುವುದಕ್ಕೆ ಮೂಡೀಸ್, ಎಸ್‌ಆ್ಯಂಡ್‌ಪಿ, ಫಿಚ್ ಸೇರಿದಂತೆ ಹಲವು ಸಂಸ್ಥೆಗಳು ರೇಟಿಂಗ್ಸ್ ನೀಡುತ್ತವೆ.
‘ಪ್ರತಿ ದೇಶವೂ ಕೋವಿಡ್–19 ಸಾಂಕ್ರಾಮಿಕದ ಸಮಸ್ಯೆಗಳಿಗೆ ತುತ್ತಾಗಿದೆ. ಬಿಕ್ಕಟ್ಟು ಭಾರತಕ್ಕೆ ಮಾತ್ರವೇ ಸೀಮಿತವಾಗಿಲ್ಲ. ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಸಿದರೆ ನಮ್ಮ ಆರ್ಥಿಕತೆಯ ಚೇತರಿಕೆಯು ವೇಗವಾಗಿದೆ. ಹೀಗಾಗಿ ಭಾರತದ ರೇಟಿಂಗ್ಸ್ ಒತ್ತಡ ಎದುರಿಸಲಿದೆ ಎಂದು ಅನ್ನಿಸುತ್ತಿಲ್ಲ’ ಎಂದು ಅವರು ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
‘ರೇಟಿಂಗ್ಸ್ ಸಂಸ್ಥೆಗಳು ನಮ್ಮ ಬಜೆಟ್ ಮತ್ತು ಸರ್ಕಾರ ತೆಗೆದುಕೊಂಡಿರುವ ಸುಧಾರಣೆಗಳನ್ನು ಗಮನಿಸಬೇಕು. ಆ ಕುರಿತು ಸರ್ಕಾರವು ವಿವರಣೆ ಮತ್ತು ಅಂಕಿ–ಅಂಶ ನೀಡಲಿದೆ. ರೇಟಿಂಗ್ಸ್ ಅನ್ನು ಯಥಾಸ್ಥಿತಿಯಲ್ಲಿ ಕಾಯ್ದುಕೊಳ್ಳಲಿವೆ ಎಂದು ನಾವು ಆಶಿಸುತ್ತೇವೆ’ ಎಂದಿದ್ದಾರೆ.
ಕೋವಿಡ್‌ನಿಂದಾಗಿ ತೆರಿಗೆ ಸಂಗ್ರಹದಲ್ಲಿ ಇಳಿಕೆ ಕಂಡುಬಂದಿದ್ದು, ಸರ್ಕಾರದ ವೆಚ್ಚದಲ್ಲಿ ಏರಿಕೆಯಾಗಿದೆ. ಇದರಿಂದಾಗಿ ಸರ್ಕಾರವು ಮಾರುಕಟ್ಟೆಯಿಂದ ₹12.8 ಲಕ್ಷ ಕೋಟಿಗಳಷ್ಟು ಗರಿಷ್ಠ ಸಾಲ ಪಡೆಯುವಂತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.