ನವದೆಹಲಿ: ದೇಶದ ಜಿಡಿಪಿಯು ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ (ಏಪ್ರಿಲ್–ಜೂನ್) ಶೇ 13.5ರಷ್ಟು ಬೆಳವಣಿಗೆ ಕಂಡಿದೆ. ಕಳೆದ ನಾಲ್ಕು ತ್ರೈಮಾಸಿಕಗಳಲ್ಲಿಯೇ ಅತ್ಯಂತ ವೇಗದ ಬೆಳವಣಿಗೆ ಇದಾಗಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿಯು ತಿಳಿಸಿದೆ.
ಕೃಷಿ ಮತ್ತು ಸೇವಾ ವಲಯಗಳ ಚಟುವಟಿಕೆ ಹೆಚ್ಚಾಗಿರುವುದರಿಂದ ಜಿಡಿಪಿಯು ಈ ಪ್ರಮಾಣದ ಬೆಳವಣಿಗೆ ಕಂಡಿದೆ ಎಂದು ಅದು ಹೇಳಿದೆ.
ಚೀನಾದ ಜಿಡಿಪಿಯು 2022ರ ಏಪ್ರಿಲ್–ಜೂನ್ ತ್ರೈಮಾಸಿಕದಲ್ಲಿ ಶೇ 0.4ರಷ್ಟು ಬೆಳವಣಿಗೆ ಕಂಡಿದೆ. ಹೀಗಾಗಿ ಭಾರತವು ಅತ್ಯಂತ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ ಎಂದು ವರದಿಯಲ್ಲಿ ತಿಳಿಸಿದೆ.
2021–22ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿಯು ಶೇ 20.1ರಷ್ಟು ಬೆಳವಣಿಗೆ ಕಂಡಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿಯ ಬೆಳವಣಿಗೆ ಪ್ರಮಾಣದಲ್ಲಿ ಇಳಿಕೆ ಆಗಿದೆ.
ಬಡ್ಡಿದರ ಹೆಚ್ಚಳ ಹಾಗೂ ಜಗತ್ತಿನ ಪ್ರಮುಖ ದೇಶಗಳು ಆರ್ಥಿಕ ಹಿಂಜರಿತಕ್ಕೆ ಒಳಗಾಗುವ ಆತಂಕದಿಂದಾಗಿ ಮುಂಬರುವ ತ್ರೈಮಾಸಿಕಗಳಲ್ಲಿ ದೇಶದ ಜಿಡಿಪಿ ಬೆಳವಣಿಗೆಯು ಕಡಿಮೆ ಆಗುವ ಸಾಧ್ಯತೆ ಇದೆ ಎಂದು ಅದು ತಿಳಿಸಿದೆ.
ತಯಾರಿಕಾ ವಲಯದ ಬೆಳವಣಿಗೆಯು ಶೇ 4.8ರಷ್ಟು ಇರುವುದು ಆತಂಕಕ್ಕೆ ಕಾರಣವಾಗಿದೆ. ಅಲ್ಲದೆ, ರಫ್ತು ಮೌಲ್ಯಕ್ಕಿಂತಲೂ ಆಮದು ಮೌಲ್ಯವು ಹೆಚ್ಚಿಗೆ ಇರುವುದು ಸಹ ಕಳವಳಕಾರಿ ಆಗಿದೆ ಎಂದು ಹೇಳಿದೆ.
ಮುಂಗಾರು ಎಲ್ಲೆಡೆಯೂ ಸಮನಾಗಿ ಬೀಳದೇ ಇರುವುದರಿಂದ ಕೃಷಿ ಬೆಳವಣಿಗೆಯ ಮೇಲೆ ಪರಿಣಾಮ ಉಂಟುಮಾಡುವ ಸಾಧ್ಯತೆ ಇದ್ದು, ಇದರಿಂದಾಗಿ ಗ್ರಾಮೀಣ ಭಾಗದ ಬೇಡಿಕೆಯು ಕಡಿಮೆ ಆಗಬಹುದು ಎಂದು ತಿಳಿಸಿದೆ. ಆಹಾರ ಮತ್ತು ಇಂಧನದ ದರ ಏರಿಕೆಯಿಂದ ದೇಶದ ಆರ್ಥಿಕ ಚಟುವಟಿಕೆಯಲ್ಲಿ ಶೇ 55ರಷ್ಟು ಪಾಲು ಹೊಂದಿರುವ ಗ್ರಾಹಕರ ಖರೀದಿ ಸಾಮರ್ಥ್ಯ ಕುಗ್ಗಿದೆ.
ಜಿಡಿಪಿ ಬೆಳವಣಿಗೆಯು ಕೋವಿಡ್‌ಗೂ ಮುಂಚಿನ ಮಟ್ಟಕ್ಕಿಂತಲೂ ಶೇ 4ಕ್ಕಿಂತಲೂ ಹೆಚ್ಚಿಗೆ ಇದೆ ಎಂದು ಹಣಕಾಸು ಕಾರ್ಯದರ್ಶಿ ಟಿ.ವಿ. ಸೋಮನಾಥನ್ ಹೇಳಿದ್ದಾರೆ.
ಪ್ರಸಕ್ತ ಹಣಕಾಸು ವರ್ಷಕ್ಕೆ ವಿತ್ತೀಯ ಕೊರತೆಯನ್ನು ಶೇ 6.4ರಲ್ಲಿ ನಿಯಂತ್ರಿಸ ಬೇಕು ಎನ್ನುವ ಗುರಿಯನ್ನು ತಲುಪುವ ಹಾದಿಯಲ್ಲಿ ಸರ್ಕಾರ ಇದೆ ಎಂದು ಅವರು ತಿಳಿಸಿದ್ದಾರೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಡಿಪಿ ಶೇ 7ಕ್ಕಿಂತಲೂ ಹೆಚ್ಚಿನ ಬೆಳವಣಿಗೆ ಕಾಣಲಿದೆ ಎಂದೂ ಅವರು ಹೇಳಿದ್ದಾರೆ.
ಜಗತ್ತಿನ ಪ್ರಮುಖ ದೇಶಗಳ ಜಿಡಿಪಿ ಬೆಳವಣಿಗೆ ಇಳಿಕೆ ಕಾಣುತ್ತಿದೆ. ಇಂತಹ ಸಂದರ್ಭದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಕಾಣುತ್ತಿದೆ. ಇದು ಜಾಗತಿಕ ಹೂಡಿಕೆದಾರರ ವಿಶ್ವಾಸವನ್ನು ಹೆಚ್ಚಿಸಲಿದ್ದು, ದೇಶಕ್ಕೆ ಹೂಡಿಕೆಯನ್ನು ಆಕರ್ಷಿಸಲಿದೆ ಎಂದು ಡೆಲಾಯ್ಟ್ ಇಂಡಿಯಾದ ಅರ್ಥಶಾಸ್ತ್ರಜ್ಞೆ ಹೇಳಿದ್ದಾರೆ.
ಜಿಡಿಪಿ ಅಂದಾಜು ತಗ್ಗಿಸಿದ ಮೂಡಿಸ್: ಬಡ್ಡಿದರ ಏರಿಕೆ, ಜಾಗತಿಕ ಮಂದಗತಿಯ ಆರ್ಥಿಕ ಬೆಳವಣಿಗೆಯ ಕಾರಣಗಳಿಂದಾಗಿ ಮೂಡಿಸ್ ಇನ್‌ವೆಸ್ಟರ್ಸ್ ಸರ್ವೀಸ್ ಸಂಸ್ಥೆಯು ಭಾರತದ ಬೆಳವಣಿಗೆಯ ಅಂದಾಜು ದರವನ್ನು ತಗ್ಗಿಸಿದೆ.
2022ರಲ್ಲಿ ಭಾರತದ ಜಿಡಿಪಿ ಶೇ 7.7ರಷ್ಟು ಬೆಳವಣಿಗೆ ಕಾಣಲಿದೆ ಎಂದು ಅದು ಪರಿಷ್ಕೃತ ಅಂದಾಜಿನಲ್ಲಿ ಹೇಳಿದೆ. ಶೇ 8.8ರಷ್ಟು ಬೆಳವಣಿಗೆ ಕಾಣಲಿದೆ ಎಂದು ಈ ಮೊದಲು ಅದು ಅಂದಾಜು ಮಾಡಿತ್ತು.
ಎಸ್‌ಬಿಐ ಸಹ ಜಿಡಿಪಿ ಬೆಳವಣಿಗೆ ಅಂದಾಜನ್ನು ಶೇ 7.5 ರಿಂದ ಶೇ 6.8ಕ್ಕೆ ಇಳಿಕೆ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.