ADVERTISEMENT

ಭಾರತವು ವಿಶ್ವದ ಅತಿದೊಡ್ಡ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ: ಐಎಂಎಫ್

ಪಿಟಿಐ
Published 23 ಅಕ್ಟೋಬರ್ 2024, 7:11 IST
Last Updated 23 ಅಕ್ಟೋಬರ್ 2024, 7:11 IST
ಐಎಂಎಫ್ ಮತ ಹೆಚ್ಚುಪಾಲು ರೂ 59 ಸಾವಿರ ಕೋಟಿ ಪಾವತಿ?
ಐಎಂಎಫ್ ಮತ ಹೆಚ್ಚುಪಾಲು ರೂ 59 ಸಾವಿರ ಕೋಟಿ ಪಾವತಿ?   

ವಾಷಿಂಗ್ಟನ್: ಭಾರತವು ವಿಶ್ವದ ಅತಿದೊಡ್ಡ ಬೆಳೆಯುತ್ತಿರುವ ಆರ್ಥಿಕತೆಯಾಗಿಯೇ ಉಳಿದಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿಯ(ಐಎಂಎಫ್‌) ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೇಶದ ಸ್ಥೂಲ ಆರ್ಥಿಕತೆಯ ಮೂಲಭೂತ ಅಂಶಗಳು ಉತ್ತಮವಾಗಿವೆ ಎಂದಿದ್ದಾರೆ.

‘ಭಾರತವು ವಿಶ್ವದ ಅತಿದೊಡ್ಡ ಬೆಳೆಯುತ್ತಿರುವ ಆರ್ಥಿಕತೆಯಾಗಿಯೇ ಉಳಿದಿದೆ. 2024–25ರ ಆರ್ಥಿಕ ವರ್ಷದಲ್ಲಿ ದೇಶದ ಬೆಳವಣಿಗೆ ದರ ಶೇ 7ರಷ್ಟು ಇರುತ್ತದೆ ಎಂದು ನಾವು ಅಂದಾಜಿಸಿದ್ದೇವೆ. ಗ್ರಾಮೀಣ ಅನುಭೋಗಿತನದ ಸುಧಾರಣೆ ಇದಕ್ಕೆ ಸಹಕಾರಿಯಾಗಿದೆ. ದೇಶದಲ್ಲಿ ಉತ್ತಮ ಬೆಳೆ ಆಗುತ್ತಿದೆ. ಆಹಾರೋತ್ಪನ್ನಗಳ ಉತ್ಪಾದನೆ ಉತ್ತಮವಾಗಿದ್ದು, ಕೆಲ ಅನಿಶ್ಚಿತತೆ ಹೊರತಾಗಿಯೂ ಹಣದುಬ್ಬರ ಶೇ 4.4ಕ್ಕೆ ಇಳಿಯುವ ಸಾಧ್ಯತೆ ಇದೆ’ಎಂದು ಐಎಂಎಫ್‌ನ ಏಷ್ಯಾ ಪೆಸಿಫಿಕ್ ವಿಭಾಗದ ನಿರ್ದೇಶಕ ಕೃಷ್ಣ ಶ್ರೀನಿವಾಸನ್ ಹೇಳಿದ್ದಾರೆ.

ADVERTISEMENT

ಚುನಾವಣೆ ನಂತರ ದೇಶದ ಸುಧಾರಣಾ ಆದ್ಯತೆಗಳು ಈ ಮೂರು ವಿಷಯಗಳಲ್ಲಿ ಇರಬೇಕು ಎಂದು ಅವರು ಹೇಳಿದ್ದಾರೆ.

‘ಮೊದಲನೇಯದಾಗಿ, ಭಾರತದಲ್ಲಿ ಉದ್ಯೋಗಗಳನ್ನು ಸೃಷ್ಟಿಸುವುದರಲ್ಲಿ ಸಮಸ್ಯೆ ಇದೆ. ಆ ಸಂದರ್ಭದಲ್ಲಿ, 2019-2020ರಲ್ಲಿ ಅನುಮೋದಿಸಲಾದ ಕಾರ್ಮಿಕ ಸಂಹಿತೆಗಳನ್ನು ಕಾರ್ಯಗತಗೊಳಿಸುವುದು ಮುಖ್ಯ. ಏಕೆಂದರೆ, ಅವುಗಳು ಕಾರ್ಮಿಕರಿಗೆ ರಕ್ಷಣೆ ಒದಗಿಸುತ್ತವೆ’ಎಂದರು.

‘ಇನ್ನೊಂದು ವಿಷಯವೆಂದರೆ, ದೇಶ ಸ್ಪರ್ಧಾತ್ಮಕವಾಗಿರಲು ಬಯಸಿದರೆ, ಈಗ ಇರುವ ಕೆಲವು ವ್ಯಾಪಾರ ನಿರ್ಬಂಧಗಳನ್ನು ಸಹ ತೆಗೆದುಹಾಕಬೇಕು. ಏಕೆಂದರೆ, ಭಾರತದಲ್ಲಿ ಏನಾಗುತ್ತಿದೆ ಎಂಬುದು ನಿಮಗೆ ತಿಳಿದಿದೆ, ನೀವು ವ್ಯಾಪಾರವನ್ನು ಉದಾರೀಕರಣಗೊಳಿಸಿದಾಗ ಉತ್ಪಾದಕ ಸಂಸ್ಥೆಗಳು ಬದುಕುಳಿಯಲು ಸಾಧ್ಯವಾಗುತ್ತದೆ. ಅತ್ಯಂತ ಸ್ಪರ್ಧಾತ್ಮಕತೆ ಇದ್ದಾಗ ಉದ್ಯೋಗಗಳು ಸೃಷ್ಟಿಯಾಗುತ್ತವೆ. ಅದಕ್ಕಾಗಿ, ವ್ಯಾಪಾರ ನಿರ್ಬಂಧಗಳನ್ನು ತೆಗೆದುಹಾಕುವುದು ಮುಖ್ಯ’ಎಂದು ಶ್ರೀನಿವಾಸನ್ ಹೇಳಿದ್ದಾರೆ.

‘ಮೂರನೇಯದಾಗಿ, ಭೌತಿಕ ಅಥವಾ ಡಿಜಿಟಲ್ ಸೇರಿದಂತೆ ಯಾವುದೇ ಮೂಲಸೌಕರ್ಯ ಸುಧಾರಿಸುತ್ತಿರುವುದು ಬಹಳ ಮುಖ್ಯ. ಕೃಷಿ ಮತ್ತು ಭೂಸುಧಾರಣೆಯತ್ತ ಗಮನ ಹರಿಸಬೇಕಿದೆ. ಶಿಕ್ಷಣ ಮತ್ತು ಕೌಶಲವೃದ್ಧಿಯತ್ತ ಹೆಚ್ಚು ಚಿಂತಿಸಬೇಕಿದೆ’ಎಂದೂ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.