ಮುಂಬೈ: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ದಾಖಲಿಸಿರುವುದಾಗಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಘೋಷಿಸುತ್ತಿದ್ದಂತೆ, ಭಾರತದ ರೂಪಾಯಿ ಸೇರಿದಂತೆ ವಿವಿಧ ರಾಷ್ಟ್ರಗಳ ಕರೆನ್ಸಿಗಳು ದಾಖಲೆಯ ಕುಸಿತ ಕಂಡಿವೆ.
ಹಿಂದಿನ ದರಕ್ಕಿಂತ ಶೇ 0.2ರಷ್ಟು ಕುಸಿತ ದಾಖಲಿಸಿರುವ ರೂಪಾಯಿ, ಬುಧವಾರ ಪ್ರತಿ ಡಾಲರ್‌ಗೆ ₹84.28ರಷ್ಟು ದಾಖಲಿಸಿದೆ. ಇದರಿಂದ ರೂಪಾಯಿ ಮೌಲ್ಯವು ಕಳೆದ ನಾಲ್ಕು ತಿಂಗಳ ಕನಿಷ್ಠಕ್ಕೆ ಕುಸಿದಂತಾಗಿದೆ.
‘2024ರ ಅಮೆರಿಕದ ಚುನಾವಣೆಯಲ್ಲಿ ಡೆಮಾಕ್ರೆಟಿಕ್ ಪಕ್ಷದ ಕಮಲಾ ಹ್ಯಾರಿಸ್ ವಿರುದ್ಧ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ವಿಜಯ ಸಾಧಿಸಿದ್ದಾರೆ ಎಂದು ಫಾಕ್ಸ್ ನ್ಯೂಸ್ ಈಗಾಗಲೇ ಘೋಷಿಸಿದೆ. ಆದರೆ ಉಳಿದ ಮಾಧ್ಯಮಗಳು ಇನ್ನಷ್ಟೇ ಫಲಿತಾಂಶ ಪ್ರಕಟಿಸಬೇಕಿದೆ. ಇದರ ಬೆನ್ನಲ್ಲೇ ಡಾಲರ್ ತನ್ನ ಮೌಲ್ಯ ಹೆಚ್ಚಿಸಿಕೊಂಡಿದೆ. ಆದರೆ ರೂಪಾಯಿ ಇನ್ನೆಷ್ಟು ದುರ್ಬಲವಾಗಲಿದೆ ಎಂಬುದನ್ನು ಆಧರಿಸಿ ಅಪಾಯವನ್ನು ಅಂದಾಜಿಸಬಹುದು’ ಎಂದು ಫೊರೆಕ್ಸ್ ಆರ್ಥಿಕ ತಜ್ಞ ಧೀರಜ್ ನಿಮ್ ತಿಳಿಸಿದ್ದಾರೆ.
‘ಈ ಎಲ್ಲಾ ಬೆಳವಣಿಗೆಯ ಹಿನ್ನೆಲೆಯಲ್ಲಿ ಡಾಲರ್ ಮೌಲ್ಯವು ಶೇ 1.5ರಷ್ಟು ಹೆಚ್ಚಳವಾಗಿದೆ. ಮತ್ತೊಂದೆಡೆ ಚೀನಾದ ಯಾನ್ ಶೇ 1.1ರಷ್ಟು ಕುಸಿದಿದೆ. ಒಂದೊಮ್ಮೆ ಯಾನ್ ತ್ವರಿತವಾಗಿ ಪ್ರತಿಕ್ರಿಯಿಸಿದರೆ, ಆರ್‌ಬಿಐ ದುತ್ತನೆ ಎದುರಾಗಿರುವ ಪರಿಸ್ಥಿತಿಯನ್ನು ನಿಭಾಯಿಸಲು ಪ್ರಯತ್ನಿಸಲಿದೆ. ಆದರೆ ಸದ್ಯಕ್ಕೆ ರೂಪಾಯಿ ದುರ್ಬಲವಾಗಲು ಕೇಂದ್ರೀಯ ಬ್ಯಾಂಕ್ ಬಿಡುವ ಸಾಧ್ಯತೆಯೇ ಹೆಚ್ಚು’ ಎಂದಿದ್ದಾರೆ.
ಎಲ್ಲಾ ಆಮದು ವಸ್ತುಗಳ ಮೇಲೆ ಶೇ 10ರಷ್ಟು ಹಾಗೂ ಚೀನಾದ ವಸ್ತುಗಳ ಮೇಲೆ ಶೇ 60ರಷ್ಟು ಆಮದು ಶುಲ್ಕ ವಿಧಿಸಲಾಗುವುದು ಎಂದು ಡೊನಾಲ್ಡ್ ಟ್ರಂಪ್ ತಮ್ಮ ಚುನಾವಣಾ ಪ್ರಚಾರದಲ್ಲಿ ಹೇಳಿದ್ದರು. ಟ್ರಂಪ್ ಅವರ ಮಾತಿನಂತೆಯೇ ವಲಸೆ ನೀತಿ, ತೆರಿಗೆ ಪದ್ಧತಿ ಹಾಗೂ ಸುಂಕ ಬದಲಾವಣೆ ನೀತಿ ಜಾರಿಗೆ ಬಂದಿದ್ದೇ ಆದಲ್ಲಿ, ಅಮೆರಿಕದಲ್ಲಿ ಹಣದುಬ್ಬರ ಪ್ರಮಾಣ ಏರಿಕೆಯಾಗಲಿದೆ ಎಂದೂ ತಜ್ಞರು ಅಂದಾಜಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.