ADVERTISEMENT

ಉಪಗ್ರಹ ತರಂಗಾಂತರ ಹಂಚಿಕೆ: ಅಂಬಾನಿ ಲಾಬಿ ಕುರಿತು ಮಸ್ಕ್‌ ಆರೋಪ; ಹರಾಜು ರದ್ದು

ರಾಯಿಟರ್ಸ್
Published 16 ಅಕ್ಟೋಬರ್ 2024, 11:43 IST
Last Updated 16 ಅಕ್ಟೋಬರ್ 2024, 11:43 IST
<div class="paragraphs"><p>ಎಲಾನ್ ಮಸ್ಕ್, ಮುಕೇಶ್ ಅಂಬಾನಿ</p></div>

ಎಲಾನ್ ಮಸ್ಕ್, ಮುಕೇಶ್ ಅಂಬಾನಿ

   

ನವದೆಹಲಿ: ಉಪಗ್ರಹ ತರಂಗಾಂತರದ ಹರಾಜು ಪ್ರಕ್ರಿಯೆಯಲ್ಲಿ ಉದ್ಯಮಿ ಮುಕೇಶ್ ಅಂಬಾನಿ ಅವರು ಸರ್ಕಾರದ ಮಟ್ಟದಲ್ಲಿ ಲಾಬಿ ನಡೆಸಿದ್ದಾರೆ ಎಂಬ ಅಮೆರಿಕದ ಟೆಸ್ಲಾ ಮಾಲೀಕ ಎಲಾನ್ ಮಸ್ಕ್ ಆರೋಪದ ಬೆನ್ನಲ್ಲೇ, ಹರಾಜು ಪ್ರಕ್ರಿಯೆಯನ್ನು ಭಾರತ ಕೈಬಿಟ್ಟಿದೆ.

ವಾರ್ಷಿಕ ಶೇ 36ರ ವೃದ್ಧಿ ದರದಲ್ಲಿ ಬೆಳೆಯುತ್ತಿರುವ ಉಪಗ್ರಹ ಸೇವೆಯು 2030ರ ಹೊತ್ತಿಗೆ ₹16 ಸಾವಿರ ಕೋಟಿ ವಹಿವಾಟು ನಡೆಸುವ ಉದ್ಯಮವಾಗುವ ಸಾಧ್ಯತೆ ಇದ್ದು, ಇದನ್ನು ಪಡೆಯಲು ಜಗತ್ತಿನ ಇಬ್ಬರು ಶತಕೋಟಿ ಒಡೆಯರ ನಡುವೆ ಪೈಪೋಟಿ ನಡೆದಿದೆ ಎಂದೇ ಅಂದಾಜಿಸಲಾಗಿದೆ.

ADVERTISEMENT

ಆಡಳಿತಾತ್ಮಕ ಪರವಾನಗಿ ಹಂಚಿಕೆಯು ಸದ್ಯ ಜಾಗತಿಕ ಮಟ್ಟದಲ್ಲಿರುವ ಪದ್ಧತಿ ಎಂದು ಸ್ಟಾರ್‌ಲಿಂಕ್‌ ಎಂಬ ಬಾಹ್ಯಾಕಾಶ ಅನ್ವೇಷಣೆಯ ಉದ್ದಿಮೆ ಹೊಂದಿರುವ ಮಸ್ಕ್‌ ಹೇಳಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಅಂಬಾನಿ, ‘ಉಪಗ್ರಹದ ತರಂಗಾಂತರವನ್ನು ಒಬ್ಬರಿಗೆ ಹಂಚಿಕೆ ಮಾಡಲು ಭಾರತದ ಕಾನೂನಿನಲ್ಲಿ ಅವಕಾಶವಿಲ್ಲ. ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರಿಗೂ ಸ್ಪರ್ಧೆಗೆ ಸಮನಾದ ವೇದಿಕೆ ಸಿಗಲಿದೆ’ ಎಂದು ಪ್ರತಿಪಾದಿಸಿದ್ದಾರೆ.

ದೂರಸಂಪರ್ಕ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ನವದೆಹಲಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿ, ‘ದೂರಸಂಪರ್ಕ ಪ್ರಾಧಿಕಾರವು ನಿಗದಿಪಡಿಸಿದ ಬೆಲೆಗೆ ತರಂಗಾಂತರವನ್ನು ಈ ನೆಲದ ಕಾನೂನಿನನ್ವಯವೇ ಹಂಚಿಕೆ ಮಾಡಲಾಗುವುದು. ಆದರೆ ಅದು ಹರಾಜು ಪ್ರಕ್ರಿಯೆ ಮೂಲಕವೇ ನಡೆಯಬೇಕು ಎಂದು ನೀವು ನಿರ್ಧರಿಸಿದ್ದರೆ, ಅದು ಜಗತ್ತಿನಲ್ಲಿರುವ ಕಾನೂನಿಗಿಂತ ಭಿನ್ನವಾದದ್ದನ್ನು ನೀವು ಬಯಸುತ್ತಿದ್ದೀರಿ ಎಂದರ್ಥ’ ಎಂದಿದ್ದರು.

ಸ್ವದೇಶಿ ಬ್ರಾಡ್‌ಬ್ಯಾಂಡ್‌ ತರಂಗಾಂತರ ಹಂಚಿಕೆಯನ್ನು ಹರಾಜು ನಡೆಸದೇ, ಹಂಚಿಕೆ ಮಾಡುವ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ ಕ್ರಮಕ್ಕೆ ರಿಲಯನ್ಸ್‌ ಭಾನುವಾರ ಆಕ್ಷೇಪ ವ್ಯಕ್ತಪಡಿಸಿತ್ತು.

ಇದಕ್ಕೆ ಪ್ರತಿಕ್ರಿಯಿಸಿದ್ದ ಮಸ್ಕ್‌, ‘ಭಾರತವು ಅಂತರರಾಷ್ಟ್ರೀಯ ದೂರಸಂಪರ್ಕ ಒಕ್ಕೂಟ ಹಾಗೂ ಡಿಜಿಟಲ್ ತಂತ್ರಜ್ಞಾನ ಸಂಬಂಧಿತ ವಿಶ್ವಸಂಸ್ಥೆಯ ಏಜೆನ್ಸಿಯ ಸದಸ್ಯ ರಾಷ್ಟ್ರವಾಗಿದೆ. ಅಲ್ಲಿನ ನಿಯಮದಂತೆ ತರಂಗಾಂತರವನ್ನು ಹಂಚಿಕೆ ಮಾಡಬೇಕು. ತರ್ಕಬದ್ಧವಾಗಿ, ಪರಿಣಾಮಕಾರಿ ಹಾಗೂ ಆರ್ಥಿಕವಾಗಿ ಅದುವೇ ಸರಿಯಾದ ಮಾರ್ಗ’ ಎಂದಿದ್ದರು.

ಹರಾಜು ಪ್ರಕ್ರಿಯೆಗೆ ಭಾರ್ತಿ ಏರ್‌ಟೆಲ್‌ನ ಸುನಿಲ್ ಮಿತ್ತಲ್‌ ಬೆಂಬಲ ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.