ನವದೆಹಲಿ: ಕಚ್ಚಾ ತೈಲ ದರ ಏರಿಕೆಯು ಭಾರತದ ಆರ್ಥಿಕತೆಯ ಪಾಲಿಗೆ ಕಳವಳಕಾರಿ ವಿಷಯ ಆಗಿದೆ. ಆದರೆ, ಸೆಪ್ಟೆಂಬರ್‌ನಲ್ಲಿ ನಿರೀಕ್ಷೆಗಿಂತಲೂ ಉತ್ತಮವಾಗಿ ಮಳೆ ಆಗಿರುವುದು ಹಾಗೂ ಕೆಲವು ಆಹಾರ ವಸ್ತುಗಳ ಬೆಲೆ ಇಳಿಕೆ ಕಂಡಿರುವುದರಿಂದಾಗಿ ಆರ್ಥಿಕ ಬೆಳವಣಿಗೆಯ ಮುನ್ನೋಟವು ಉತ್ತಮವಾಗಿರಲಿದೆ ಎಂದು ಹಣಕಾಸು ಸಚಿವಾಲಯವು ತನ್ನ ಆಗಸ್ಟ್ ತಿಂಗಳ ಆರ್ಥಿಕ ಪರಿಶೀಲನಾ ವರದಿಯಲ್ಲಿ ಹೇಳಿದೆ.
ಈ ವಾರದ ಆರಂಭದಲ್ಲಿ ಕಚ್ಚಾ ತೈಲ ದರವು 10 ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡು, ಆ ಬಳಿಕ ತುಸು ಇಳಿಕೆ ಕಂಡಿದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಸಚಿವಾಲಯ ಈ ಪ್ರತಿಕ್ರಿಯೆ ನೀಡಿದೆ. ಈಚಿನ ದಿನಗಳಲ್ಲಿ ಕಚ್ಚಾ ತೈಲ ದರದಲ್ಲಿ ಆಗಿರುವ ಏರಿಕೆಯು ಕಳವಳಕಾರಿ ಆಗಿದೆ. ಆದರೆ, ಅಪಾಯದ ಸೂಚನೆ ಸದ್ಯಕ್ಕಿಲ್ಲ ಎಂದು ವರದಿಯಲ್ಲಿ ತಿಳಿಸಿದೆ.
ಭಾರತವು ತನ್ನ ದೇಶಿ ಬೇಡಿಕೆಯು ಶೇ 80ಕ್ಕೂ ಅಧಿಕ ಪ್ರಮಾಣದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ.
ಕೆಲವು ಆಹಾರ ವಸ್ತುಗಳ ಬೆಲೆ ಏರಿಕೆ ಕಂಡಿದ್ದರಿಂದ ಜುಲೈನಲ್ಲಿ ಚಿಲ್ಲರೆ ಹಣದುಬ್ಬರವು ಶೇ 7ಕ್ಕೂ ಹೆಚ್ಚು ಏರಿಕೆ ಕಂಡಿತ್ತು. ಆ ನಂತರ ಆಗಸ್ಟ್‌ನಲ್ಲಿ ತುಸು ಇಳಿಕೆ ಕಂಡಿದೆ. ತರಕಾರಿಗಳ ಬೆಲೆ ಕಡಿಮೆ ಆಗುತ್ತಿರುವುದು ಹಾಗೂ ಸರ್ಕಾರ ಮತ್ತು ಆರ್‌ಬಿಐ ಕೈಗೊಳ್ಳುತ್ತಿರುವ ಕ್ರಮಗಳಿಂದಾಗಿ ಮುಂಬರುವ ತಿಂಗಳುಗಳಲ್ಲಿ ಹಣದುಬ್ಬರವು ಇಳಿಮುಖ ಹಾದಿಗೆ ಬರುವ ನಿರೀಕ್ಷೆ ಮಾಡಲಾಗಿದೆ ಎಂದು ವರದಿಯು ಹೇಳಿದೆ.
ಆರ್‌ಬಿಐ ಸದ್ಯದ ಮಟ್ಟಿಗೆ ಬಡ್ಡಿದರ ಹೆಚ್ಚಳ ಮಾಡುವುದಿಲ್ಲ. ಬದಲಾಗಿ 2024ರ ಎರಡನೇ ತ್ರೈಮಾಸಿಕದಲ್ಲಿ ಬಡ್ಡಿದರ ಕಡಿತ ಮಾಡಲು ಆರಂಭಿಸಲಿದೆ. ಕಳೆದೊಂದು ವರ್ಷದಿಂದ ಆಹಾರ ವಸ್ತುಗಳ ದರ ಏರಿಕೆ ಆಗುತ್ತಿರುವುದು ನೀತಿ ನಿರೂಪಕರಲ್ಲಿ ಕಳವಳಕ್ಕೆ ಕಾರಣವಾಗಿದೆ ಎಂದು ತಿಳಿಸಿದೆ.
‘ಜಿಡಿಪಿ ಶೇ 6.5ರಷ್ಟು ಆಗಲಿದೆ’
ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕತೆಯು ಶೇ 6.5ರಷ್ಟು ಬೆಳವಣಿಗೆ ಸಾಧಿಸುವ ವಿಶ್ವಾಸ ಹೊಂದಿರುವುದಾಗಿ ಹಣಕಾಸು ಸಚಿವಾಲಯ ಹೇಳಿದೆ. ಕಚ್ಚಾ ತೈಲ ದರ ಏರಿಕೆ ಮತ್ತು ಮುಂಗಾರು ಕೊರತೆಯ ನಡುವೆಯೂ ಕಾರ್ಪೊರೇಟ್ ಲಾಭ ಹೆಚ್ಚಾಗಿರುವುದು ಬ್ಯಾಂಕ್ ಸಾಲ ನೀಡಿಕೆಯಲ್ಲಿ ವೃದ್ಧಿ ಮತ್ತು ನಿರ್ಮಾಣ ವಲಯದ ಚಟುವಟಿಕೆ ಹೆಚ್ಚಾಗಿರುವ ಕಾರಣಗಳಿಂದಾಗಿ ಅಂದಾಜು ಮಾಡಿರುವಂತೆ ಶೇ 6.5ರಷ್ಟು ಆರ್ಥಿಕ ಬೆಳವಣಿಗೆ ಸಾಧ್ಯವಾಗಲಿದೆ ಎಂದು ವರದಿಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.