ನವದೆಹಲಿ: ದೇಶದಲ್ಲಿ 2023–24ನೇ ಹಣಕಾಸು ವರ್ಷದಲ್ಲಿ 1.85 ಲಕ್ಷಕ್ಕೂ ಹೆಚ್ಚು ಕಂಪನಿಗಳು ನೋಂದಣಿಯಾಗಿದ್ದು, ಈ ಪೈಕಿ ಮಾರ್ಚ್‌ನಲ್ಲಿ 16,600 ಕಂಪನಿಗಳು ಕಾರ್ಯಾರಂಭ ಮಾಡಿವೆ ಎಂದು ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
2022–23ನೇ ಹಣಕಾಸು ವರ್ಷದಲ್ಲಿ 1.59 ಲಕ್ಷಕ್ಕೂ ಹೆಚ್ಚು ಕಂಪನಿಗಳು ನೋಂದಣಿ ಆಗಿದ್ದು, ಷೇರುಗಳ ವಿನಿಮಯದ ಮೂಲಕ ಷೇರುದಾರರಿಂದ ಒಟ್ಟು ₹18,132 ಕೋಟಿ ಬಂಡವಾಳ ಸಂಗ್ರಹಿಸಿವೆ ಎಂದು ಹೇಳಿದೆ.
ಪ್ರಸಕ್ತ ವರ್ಷದ ಮಾರ್ಚ್ ಅಂತ್ಯದ ವೇಳೆಗೆ ದೇಶದಲ್ಲಿ ಒಟ್ಟು 26.63 ಲಕ್ಷ ಕಂಪನಿಗಳಿವೆ. ಈ ಪೈಕಿ 16.91 ಲಕ್ಷ ಕಂಪನಿಗಳು (ಶೇ 64ರಷ್ಟು) ಸಕ್ರಿಯವಾಗಿವೆ. 9.31 ಲಕ್ಷ ನೋಂದಾಯಿತ ಕಂಪನಿಗಳು ಸ್ಥಗಿತಗೊಂಡಿವೆ. 2,470 ಕಂಪನಿಗಳು ಸಕ್ರಿಯವಾಗಿಲ್ಲ. 10,385 ಕಂಪನಿಗಳು ದಿವಾಳಿ ಅಂಚಿನಲ್ಲಿವೆ ಎಂದು ವಿವರಿಸಿದೆ.
27,022 ಕಂಪನಿಗಳು ಅಧಿಕೃತ ದಾಖಲೆ ಹೊಂದಿಲ್ಲ. ಹಾಗಾಗಿ, ಅವುಗಳನ್ನು ನೋಂದಣಿ ಪಟ್ಟಿಯಿಂದ ಕೈಬಿಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಿದೆ.
2023–24ರ ಹಣಕಾಸು ವರ್ಷದಲ್ಲಿ ನೋಂದಾಯಿತವಾಗಿರುವ ಕಂಪನಿಗಳು ಷೇರುದಾರರಿಂದ ₹30,927 ಕೋಟಿ ಬಂಡವಾಳ ಸಂಗ್ರಹಿಸಿವೆ. ಈ ಪೈಕಿ ಶೇ 71ರಷ್ಟು ಸೇವಾ ವಲಯದ ಕಂಪನಿಗಳಾಗಿವೆ. ಉಳಿದಂತೆ ಕೈಗಾರಿಕೆ ಶೇ 23ರಷ್ಟು ಹಾಗೂ ಕೃಷಿ ವಲಯಕ್ಕೆ ಸೇರಿದ ಶೇ 6ರಷ್ಟು ಕಂಪನಿಗಳಿವೆ ಎಂದು ವಿವರಿಸಿದೆ.
5,164 ವಿದೇಶಿ ಕಂಪನಿಗಳು ನೋಂದಣಿಯಾಗಿದ್ದು, ಈ ಪೈಕಿ 3,288 ಕಂಪನಿಗಳು (ಶೇ 64) ಸಕ್ರಿಯವಾಗಿವೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.