ನವದೆಹಲಿ: ಕಚ್ಚಾ ತೈಲದ ಬೆಲೆ ಏರಿಕೆಯನ್ನು ನಿಯಂತ್ರಿಸಲು ಸಂಗ್ರಹಾಗಾರದಿಂದ ತೈಲವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಕ್ರಮವನ್ನು ತಾನು ಬೆಂಬಲಿಸುವುದಾಗಿ ಕೇಂದ್ರ ಸರ್ಕಾರ ಹೇಳಿದೆ.
ಸಂಗ್ರಹಾಗಾರದಲ್ಲಿ ಇರುವ 18 ಕೋಟಿ ಬ್ಯಾರೆಲ್ ತೈಲವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಬಗ್ಗೆ ಅಮೆರಿಕ ಚಿಂತನೆ ನಡೆಸಿದೆ ಎಂಬ ವರದಿಗಳು ಪ್ರಕಟವಾದ ನಂತರದಲ್ಲಿ ಕೇಂದ್ರ ಈ ಮಾತು ಹೇಳಿದೆ. ಅಮೆರಿಕದ ಆಲೋಚನೆ ಕುರಿತ ವರದಿ ಪ್ರಕಟವಾದ ನಂತರ ಕಚ್ಚಾ ತೈಲ ಬೆಲೆ ತುಸು ಇಳಿಕೆ ಕಂಡಿದೆ.
‘ಜಾಗತಿಕ ಇಂಧನ ಮಾರುಕಟ್ಟೆಯಲ್ಲಿನ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರವು ಸೂಕ್ಷ್ಮವಾಗಿ ಅವಲೋಕಿಸುತ್ತಿದೆ’ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವ ರಾಮೇಶ್ವರ ತೆಲಿ ಲೋಕಸಭೆಗೆ ತಿಳಿಸಿದ್ದಾರೆ.
‘ಕಚ್ಚಾ ತೈಲ ಬೆಲೆ ತಗ್ಗಿಸಲು, ಮಾರುಕಟ್ಟೆಯಲ್ಲಿನ ಅಸ್ಥಿರತೆಯನ್ನು ನಿವಾರಿಸಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಕೇಂದ್ರ ಸರ್ಕಾರ ಸಿದ್ಧವಿದೆ’ ಎಂದು ಅವರು ಹೇಳಿದ್ದಾರೆ. 2021ರ ನವೆಂಬರ್‌ನಲ್ಲಿ ಭಾರತವು ತನ್ನ ಸಂಗ್ರಹಾಗಾರದಲ್ಲಿನ 50 ಲಕ್ಷ ಬ್ಯಾರೆಲ್ ತೈಲವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಒಪ್ಪಿತ್ತು.
ಭಾರತವು 53.3 ಲಕ್ಷ ಟನ್ ತೈಲವನ್ನು ತನ್ನ ಸಂಗ್ರಹಾಗಾರಗಳಲ್ಲಿ ಇರಿಸಿಕೊಂಡಿದೆ. ಇದು ದೇಶದ ಒಂಭತ್ತೂವರೆ ದಿನಗಳ ಬೇಡಿಕೆ ಪೂರೈಸಲು ಸಾಕು ಎಂದು ಎಂದು ತೆಲಿ ಹೇಳಿದ್ದಾರೆ. ಇದರ ಜೊತೆಗೆ ತೈಲ ಮಾರಾಟ ಕಂಪನಿಗಳು ಒಟ್ಟು 64.5 ದಿನಗಳಿಗೆ ಆಗುವಷ್ಟು ತೈಲ ಸಂಗ್ರಹವನ್ನು ಹೊಂದಿವೆ. ಹೀಗಾಗಿ, ದೇಶಕ್ಕೆ 74 ದಿನಗಳಿಗೆ ಅಗತ್ಯವಿರುವ ತೈಲ ಸಂಗ್ರಹ ಇದೆ ಎಂದು ಅವರು ತಿಳಿಸಿದ್ದಾರೆ.
‘ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ನಿಯಂತ್ರಿಸುವ ಕೆಲಸವನ್ನು ಸರ್ಕಾರವು ಮಾಡುತ್ತದೆ. ಅಂತರರಾಷ್ಟ್ರೀಯ ಮಟ್ಟದಲ್ಲಿನ ಬೆಲೆ ಏರಿಕೆಯಿಂದ ಜನಸಾಮಾನ್ಯರನ್ನು ರಕ್ಷಿಸುವ ಉದ್ದೇಶದಿಂದ ಹೀಗೆ ಮಾಡಲಾಗುತ್ತದೆ’ ಎಂದು ಅವರು ಹೇಳಿದ್ದಾರೆ. ಆದರೆ, ಇದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿವರ ನೀಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.