ನವದೆಹಲಿ: ‘ದೇಶದ ಜಿಡಿಪಿ ಗಾತ್ರವು 2027–28ನೇ ಹಣಕಾಸು ವರ್ಷಕ್ಕೆ ₹415 ಲಕ್ಷ ಕೋಟಿಗೆ (5 ಟ್ರಿಲಿಯನ್ ಡಾಲರ್) ತಲುಪಲಿದ್ದು, ಭಾರತವು ಜಾಗತಿಕವಾಗಿ ಚೀನಾ, ಅಮೆರಿಕದ ಬಳಿಕ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಗುಜರಾತ್‌ನ ಗಾಂಧಿನಗರದಲ್ಲಿ ಬುಧವಾರ ಆರಂಭವಾದ ವೈಬ್ರಂಟ್ ಗುಜರಾತ್ ಜಾಗತಿಕ ಸಮಾವೇಶದಲ್ಲಿ ಅವರು ಮಾತನಾಡಿದರು.
‘2047ಕ್ಕೆ ಭಾರತವು ಸ್ವಾತಂತ್ರ್ಯಗೊಂಡು ನೂರು ವಸಂತಗಳು ತುಂಬಲಿವೆ. ಆ ವೇಳೆಗೆ ದೇಶದ ಆರ್ಥಿಕತೆಯ ಗಾತ್ರವು ₹2,490 ಲಕ್ಷ ಕೋಟಿಗೆ (30 ಟ್ರಿಲಿಯನ್ ಡಾಲರ್) ತಲುಪುವ ನಿರೀಕ್ಷೆಯಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ವಸಾಹತುಶಾಹಿ ಮನಸ್ಥಿತಿಯನ್ನು ತೊಡೆದು ಹಾಕುವುದೇ ವಿಕಸಿತ ಭಾರತದ ಗುರಿಯಾಗಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರ ಸರ್ಕಾರವು ಈ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ’ ಎಂದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 2024–25ನೇ ಹಣಕಾಸು ವರ್ಷಕ್ಕೆ ಭಾರತದ ಜಿಡಿಪಿ ಗಾತ್ರವನ್ನು 5 ಟ್ರಿಲಿಯನ್ ಡಾಲರ್‌ಗೆ ಹೆಚ್ಚಿಸಲು 2018ರಲ್ಲಿಯೇ ಗುರಿ ನಿಗದಿಪಡಿಸಿತ್ತು. ಕೃಷಿ ಮತ್ತು ಕೈಗಾರಿಕಾ ವಲಯದ ಗಾತ್ರವನ್ನು ತಲಾ ಒಂದು ಟ್ರಿಲಿಯನ್ ಡಾಲರ್ (₹83 ಲಕ್ಷ ಕೋಟಿ) ಹಾಗೂ ತಯಾರಿಕಾ ವಲಯದಲ್ಲಿ 3 ಟ್ರಿಲಿಯನ್ ಡಾಲರ್ (₹250 ಲಕ್ಷ ಕೋಟಿ ) ಗುರಿ ಮುಟ್ಟಲಾಗುವುದು ಎಂದು ಘೋಷಿಸಿತ್ತು.
2023–24ನೇ ಸಾಲಿನಡಿ ದೇಶದ ಜಿಡಿಪಿ ಗಾತ್ರವು ₹296.58 ಲಕ್ಷ ಕೋಟಿಗೆ ತಲುಪಲಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ಅಂದಾಜಿಸಿದೆ. ಸದ್ಯ ಭಾರತವು ಜಾಗತಿಕಮಟ್ಟದಲ್ಲಿ ಅಮೆರಿಕ, ಚೀನಾ, ಜಪಾನ್ ಮತ್ತು ಜರ್ಮನಿ ಬಳಿಕ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.