ಬೆಂಗಳೂರು: ಭಾರತದ ಆರ್ಥಿಕ ಬೆಳವಣಿಗೆ ಪ್ರಮಾಣವು ಜುಲೈ–ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಇಳಿಕೆ ಆಗಿರುವ ಸಾಧ್ಯತೆ ಇದೆ. ಹೀಗಿದ್ದರೂ ವಿಶ್ವದ ಪ್ರಮುಖ ಅರ್ಥ ವ್ಯವಸ್ಥೆಗಳಲ್ಲಿ ಅತ್ಯಂತ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಆರ್ಥಿಕತೆಯಾಗಿಯೇ ಭಾರತ ಇರಲಿದೆ ಎಂದು ರಾಯಿಟರ್ಸ್ ಸಂಸ್ಥೆಯು ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ.
ಕೇಂದ್ರ ಸರ್ಕಾರವು ಜಿಡಿಪಿಗೆ ಸಂಬಂಧಿಸಿದ ಜುಲೈ–ಸೆಪ್ಟೆಂಬರ್ ತ್ರೈಮಾಸಿಕದ ಅಂಕಿ–ಅಶಗಳನ್ನು ಗುರುವಾರ ಬಿಡುಗಡೆ ಮಾಡುವ ನಿರೀಕ್ಷೆ ಇದೆ.
ಏಪ್ರಿಲ್–ಜೂನ್ ತ್ರೈಮಾಸಿಕದಲ್ಲಿ ಜಿಡಿಪಿಯು ಶೇ 7.8ರಷ್ಟು ಬೆಳವಣಿಗೆ ಕಂಡಿದೆ. ಆದರೆ, ಜುಲೈ–ಸೆಪ್ಟೆಂಬರ್ ಅವಧಿಯಲ್ಲಿ ಶೇ 6.8ಕ್ಕೆ ಇಳಿಕೆ ಕಂಡಿದೆ ಎನ್ನುವ ಅಂದಾಜನ್ನು ಸಮೀಕ್ಷೆಯಲ್ಲಿ ಭಾಗವಹಿಸಿದ್ದ 55 ತಜ್ಞರು ಅಂದಾಜು ಮಾಡಿದ್ದಾರೆ. ಜಾಗತಿಕ ಮಂದಗತಿಯ ಆರ್ಥಿಕ ಬೆಳವಣಿಗೆಯು ರಫ್ತು ವಹಿವಾಟಿನ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಆದರೆ, ಸೇವಾ ಚಟುವಟಿಕೆಗಳು ಹೆಚ್ಚಾಗಿರುವುದು ಮತ್ತು ನಗರ ಪ್ರದೇಶದಲ್ಲಿ ಬೇಡಿಕೆ ಏರಿಕೆ ಕಾಣುತ್ತಿರುವುದು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆಗೆ ಬಲ ತುಂಬಿರುವ ನಿರೀಕ್ಷೆ ಇದೆ ಎಂದು ಆರ್ಥಿಕ ತಜ್ಞರು ಸಮೀಕ್ಷೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನವೆಂಬರ್ 17 ರಿಂದ 27ರ ಅವಧಿಯಲ್ಲಿ ಸಮೀಕ್ಷೆ ನಡೆಸಲಾಗಿದೆ. ಸರ್ಕಾರದ ವೆಚ್ಚವು ಆರ್ಥಿಕ ಬೆಳವಣಿಗೆಗೆ ಪ್ರಮುಖ ಚಾಲಕ ಶಕ್ತಿ ಎಂದು 14 ತಜ್ಞರು ಹೇಳಿದ್ದರೆ, ಖರೀದಿ ಸಾಮರ್ಥ್ಯ ಮುಖ್ಯ ಎನ್ನುವುದು 13 ತಜ್ಞರ ಅಭಿಪ್ರಾಯ. ಆರ್ಥಿಕ ಬೆಳವಣಿಗೆಗೆ ಹೂಡಿಕೆಯೇ ಮುಖ್ಯ ಎಂದು 5 ತಜ್ಞರು ಹೇಳಿದ್ದಾರೆ.
ಗ್ರಾಹಕ ಬೇಡಿಕೆಯು ಜಗತ್ತಿನ ಪ್ರಮುಖ ದೇಶಗಳಲ್ಲಿ ಏಕರೂಪವಾಗಿಲ್ಲ. ಇದು ಭಾರತದ ಬೆಳವಣಿಗೆ ಮೇಲೆ ಪರಿಣಾಮ ಬೀರಬಹುದಾಗಿದೆ. ದೇಶದಲ್ಲಿ ಅಗತ್ಯ ವಸ್ತುಗಳ ದರ ಏರಿಕೆ ಆಗಿದ್ದರಿಂದ ಗ್ರಾಮೀಣ ಭಾಗದ ಬೇಡಿಕೆಯು ಜುಲೈ–ಸೆಪ್ಟೆಂಬರ್ ಅವಧಿಯಲ್ಲಿ ಕುಗ್ಗಿದೆ. ಆದರೆ, ನಗರ ಪ್ರದೇಶದಲ್ಲಿ ಬೇಡಿಕೆ ಉತ್ತಮವಾಗಿದೆ. ಗ್ರಾಮೀಣ ಭಾಗದ ಬೇಡಿಕೆಯ ದುರ್ಬಲ ಸ್ಥಿತಿಯು ಅಲ್ಪಾವಧಿಗಷ್ಟೇ ಇರುವ ಅಂದಾಜು ಮಾಡಲಾಗಿದೆ ಎಂದು ಸಮೀಕ್ಷೆಯು ಹೇಳಿದೆ.
ನಗರ ಮತ್ತು ಗ್ರಾಮೀಣ ಭಾಗದ ಮಧ್ಯೆ ಖರೀದಿ ಸಾಮರ್ಥ್ಯದಲ್ಲಿ ಇರುವ ಅಂತರವು 2–3 ವರ್ಷಗಳಲ್ಲಿ ಕಡಿಮೆ ಆಗಲಿದೆ ಎಂದು ಶೇ 69ರಷ್ಟು ಆರ್ಥಿಕ ತಜ್ಞರು ಹೇಳಿದ್ದಾರೆ.
ಸೇವೆಗಳು ಮತ್ತು ನಿರ್ಮಾಣ ವಲಯಗಳ ಬೆಳವಣಿಗೆ ಪ್ರಮಾಣ ಹೆಚ್ಚಿಗೆ ಇರಲಿರುವುದು ಆರ್ಥಿಕ ಬೆಳವಣಿಗೆ ಮೇಲೆ ಪ್ರಭಾವ ಬೀರಲಿದೆ. ಬಾಹ್ಯ ಬೇಡಿಕೆಯು ದುರ್ಬಲವಾಗಿಯೇ ಇರುವುದರಿಂದ ದೇಶಿ ಬೇಡಿಕೆಯು ಆರ್ಥಿಕ ಚಟುವಟಿಕೆಗಳಿಗೆ ಮುಖ್ಯವಾಗಲಿವೆ ಎಂದು ಬರ್ಕ್‌ಲೇಸ್‌ನ ಆರ್ಥಿಕ ತಜ್ಞ ರಾಹುಲ್ ಬಜೋರಿಯಾ ತಿಳಿಸಿದ್ದಾರೆ.
Cut-off box - ಜಿಡಿಪಿ ಅಂದಾಜು ಹೆಚ್ಚಿಸಿದ ಎಸ್ ಆ್ಯಂಡ್ ಪಿ ನವದೆಹಲಿ (ಪಿಟಿಐ): ಭಾರತದ ಆರ್ಥಿಕ ಬೆಳವಣಿಗೆಯ ಅಂದಾಜನ್ನು ಎಸ್ ಆ್ಯಂಡ್ ಪಿ ಸಂಸ್ಥೆಯು ಪರಿಷ್ಕರಣೆ ಮಾಡಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಆರ್ಥಿಕತೆಯು ಶೇ 6.4ರಷ್ಟು ಬೆಳವಣಿಗೆ ಕಾಣುವ ನಿರೀಕ್ಷೆ ಇದೆ ಎಂದು ಹೇಳಿದೆ. ಶೇ 6ರಷ್ಟು ಬೆಳವಣಿಗೆ ಕಾಣಲಿದೆ ಎನ್ನುವ ಅಂದಾಜನ್ನು ಈ ಮೊದಲು ಸಂಸ್ಥೆಯು ಮಾಡಿತ್ತು. ಆದರೆ ದೇಶಿ ಬೇಡಿಕೆ ಹೆಚ್ಚಾಗಿರುವುದರಿಂದ ಆಹಾರ ಹಣದುಬ್ಬರ ಮತ್ತು ರಫ್ತು ಇಳಿಕೆಯಂತಹ ಅಡೆತಡೆಗಳನ್ನು ಮೀರಿ ಬೆಳವಣಿಗೆ ಕಾಣಲಿದೆ ಎಂದು ಅದು ತಿಳಿಸಿದೆ. 2024–25ನೇ ಹಣಕಾಸು ವರ್ಷಕ್ಕೆ ಜಿಡಿಪಿ ಬೆಳವಣಿಗೆಯ ಅಂದಾಜನ್ನು ಶೇ 6.9ಕ್ಕೆ ಬದಲಾಗಿ ಶೇ 6.4ಕ್ಕೆ ತಗ್ಗಿಸಿದೆ. ಪ್ರಸಕ್ತ ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ಬೇಡಿಕೆ ಕಡಿಮೆ ಆಗಲಿರುವುದರಿಂದ ಈ ಪರಿಷ್ಕರಣೆ ಮಾಡಿರುವುದಾಗಿ ಹೇಳಿದೆ.
Graphic text / Statistics - ಬಂಡವಾಳ ವೆಚ್ಚ (ಲಕ್ಷ ಕೋಟಿಗಳಲ್ಲಿ) ₹4.89 2023–24ರ ಮೊದಲಾರ್ಧ ₹3.43 2022–23ರ ಮೊದಲಾರ್ಧ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.