ನವದೆಹಲಿ: ಭಾರತ ಐದು ತಿಂಗಳ ನಂತರ ಇದೇ ಮೊದಲ ಬಾರಿಗೆ ಉಕ್ರೇನ್‌ನಿಂದ ಸೂರ್ಯಕಾಂತಿ ಎಣ್ಣೆಯನ್ನು ಆಮದು ಮಾಡಿಕೊಳ್ಳುತ್ತಿದೆ ಎಂದು ಮುಂಬೈ ಮೂಲದ ಬ್ರೋಕರ್ ಮತ್ತು ಟ್ರೇಡರ್ ಸಂಸ್ಥೆ ‘ಸನ್‌ವಿನ್ ಗ್ರೂಪ್’ ತಿಳಿಸಿದೆ.
ವಿಶ್ವದ ಅತಿ ದೊಡ್ಡ ಖಾದ್ಯ ತೈಲ ಆಮದು ರಾಷ್ಟ್ರ ಎನಿಸಿಕೊಂಡಿರುವ ಭಾರತವು ಸೆಪ್ಟೆಂಬರ್‌ನಿಂದ ಆಮದು ಪ್ರಕ್ರಿಯೆ ಆರಂಭಿಸಲಿದೆ.
ಕೃಷಿ ಉತ್ಪನ್ನಗಳ ರಫ್ತಿಗಾಗಿ ಉಕ್ರೇನ್ ಕಪ್ಪು ಸಮುದ್ರದ ಕೆಲ ಕಾರಿಡಾರ್‌ಗಳನ್ನು ತೆರೆಯಲು ಸಜ್ಜಾಗಿದೆ. ಹೀಗಾಗಿ ಸುಮಾರು 50,000 ರಿಂದ 60,000 ಟನ್ ಎಣ್ಣೆ ಲಭ್ಯವಾಗಬಹುದು ಎಂದು ಸನ್‌ವಿನ್ ಗ್ರೂಪ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಂದೀಪ್ ಬಜೋರಿಯಾ ಹೇಳಿದ್ದಾರೆ. ಒಡೆಸಾ ಮತ್ತು ಚೋರ್ನೊಮೊರ್ಸ್ಕ್ ಬಂದರುಗಳಲ್ಲಿ ಸರಕುಗಳನ್ನು ಹಡಗಿಗೆ ತುಂಬುವ ಸಾಧ್ಯತೆಯಿದೆ ಎಂದು ಅವರು ಹೇಳಿದರು.
‘ನಾವು ಆಗಸ್ಟ್‌ನಿಂದಲೇ ದಾಸ್ತಾನು ಪಡೆಯಲು ಪ್ರಾರಂಭಿಸುತ್ತೇವೆ. ಆದರೆ ಇದು ಹಡಗುಗಳ ಲಭ್ಯತೆಯ ಮೇಲೆ ಅವಲಂಬಿತವಾಗಿರುತ್ತದೆ’ ಎಂದು ಬಜೋರಿಯಾ ಹೇಳಿದರು. ‘ಅರೆಯಬಲ್ಲ ಎಣ್ಣೆಬೀಜಗಳ ಸಾಕಷ್ಟು ದಾಸ್ತಾನು ಉಕ್ರೇನ್‌ನಲ್ಲಿ ಇದೆ’ ಎಂದು ಅವರು ಹೇಳಿದ್ದಾರೆ.
ಸೂರ್ಯಕಾಂತಿ ಎಣ್ಣೆಯ ಆಮದು ಏಪ್ರಿಲ್‌ನಿಂದ ಸ್ಥಗಿತಗೊಂಡಿತ್ತು. ರಷ್ಯಾದ ಆಕ್ರಮಣವು ವ್ಯಾಪಾರಕ್ಕೆ ಅಡ್ಡಿಪಡಿಸಿತ್ತು. ವಿಶ್ವದ ಅತಿದೊಡ್ಡ ಗೋಧಿ, ಜೋಳ ಮತ್ತು ಸಸ್ಯಜನ್ಯ ಎಣ್ಣೆ ರಫ್ತುದಾರ ದೇಶಗಳಲ್ಲಿ ಒಂದಾದ ಉಕ್ರೇನ್‌ನಿಂದ ಕೃಷಿ ರಫ್ತು ಆರಂಭಿಸಲು ರಷ್ಯಾ ಮತ್ತು ಉಕ್ರೇನ್ ಕಳೆದ ವಾರ ಒಪ್ಪಂದ ಮಾಡಿಕೊಂಡಿವೆ.
ಈ ಹಣಕಾಸು ವರ್ಷ ಮತ್ತು ಮುಂದಿನ ವರ್ಷ ವಾರ್ಷಿಕವಾಗಿ 20 ಲಕ್ಷ ಟನ್ ಸೂರ್ಯಕಾಂತಿ ಎಣ್ಣೆಯನ್ನು ಸುಂಕ ರಹಿತವಾಗಿ ಆಮದು ಮಾಡಿಕೊಳ್ಳಲು ಅವಕಾಶ ನೀಡಿರುವ ಭಾರತ ಸರ್ಕಾರದ ಕ್ರಮವು ಬೇಡಿಕೆಯನ್ನು ಹೆಚ್ಚಿಸಿದೆ. ಅಕ್ಟೋಬರ್ ಹೊತ್ತಿಗೆ ಭಾರತವು 1.89 ಮಿಲಿಯನ್ ಟನ್‌ಗಳಷ್ಟು ಕಚ್ಚಾ ಸೂರ್ಯಕಾಂತಿ ಎಣ್ಣೆಯನ್ನು ಖರೀದಿಸಿತ್ತು. ಉಕ್ರೇನ್ ಶೇ 74 ಮತ್ತು ಅರ್ಜೆಂಟೀನಾ ಮತ್ತು ರಷ್ಯಾ ತಲಾ ಶೇ 12 ರಷ್ಟು ಎಣ್ಣೆಯನ್ನು ಪೂರೈಸಿದ್ದವು.
ಜಾಗತಿಕ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆ ಬೆಲೆ ಇಳಿಕೆ ಆಗಿರುವ ಕಾರಣ, ಆಮದು ಮಾಡಿಕೊಳ್ಳುವ ಅಡುಗೆ ಎಣ್ಣೆಗಳ ಗರಿಷ್ಠ ಮಾರಾಟ ಬೆಲೆಯನ್ನು (ಎಂ ಆರ್‌ಪಿ) ಲೀಟರ್‌ಗೆ ₹ 10ರವರೆಗೆ ಕಡಿತ ಮಾಡಬೇಕು ಎಂದು ಕೇಂದ್ರ ಸರ್ಕಾ ರವು ಕಂಪನಿಗಳಿಗೆ ಇತ್ತೀಚೆಗೆ ನಿರ್ದೇಶನ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.