ಮುಂಬೈ: ಆರು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರವು ಸಕ್ಕರೆ ರಫ್ತಿನ ಮೇಲೆ ಮಿತಿ ಹೇರಲು ಆಲೋಚನೆ ನಡೆಸಿದೆ. ದೇಶಿ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆಯು ದುಬಾರಿ ಆಗದಂತೆ ನೋಡಿಕೊಳ್ಳಲು ಈ ಕ್ರಮ ಎಂದು ಮೂಲಗಳು ಹೇಳಿವೆ.
ಪ್ರಸಕ್ತ ಹಂಗಾಮಿನಲ್ಲಿ ಸಕ್ಕರೆ ರಫ್ತಿಗೆ 80 ಲಕ್ಷ ಟನ್ ಮಿತಿ ವಿಧಿಸಬಹುದು ಎಂದು ಕೇಂದ್ರ ಸರ್ಕಾರ ಹಾಗೂ ಸಕ್ಕರೆ ಉದ್ಯಮದ ಮೂಲಗಳು ಹೇಳಿವೆ. ಈ ವಿಚಾರವಾಗಿ ಕೇಂದ್ರವು ಮುಂದಿನ ತಿಂಗಳ ಆರಂಭದಲ್ಲಿ ಪ್ರಕಟಣೆ ಹೊರಡಿಸಬಹುದು ಎನ್ನಲಾಗಿದೆ.
ಶುಕ್ರವಾರ ಈ ಸುದ್ದಿ ಹೊರಬಂದ ನಂತರದಲ್ಲಿ ಕೆಲವು ಸಕ್ಕರೆ ಕಾರ್ಖಾನೆಗಳ ಷೇರು ಮೌಲ್ಯವು ಕುಸಿದಿದೆ. ‘ಈ ಬಾರಿ ಸಕ್ಕರೆ ಉತ್ಪಾದನೆ ದಾಖಲೆ ಮಟ್ಟ ತಲುಪಲಿದೆ. ಆದರೆ, ರಫ್ತು ಕಾರಣದಿಂದಾಗಿ ದೇಶದಲ್ಲಿ ಸಕ್ಕರೆ ದಾಸ್ತಾನು ಕಡಿಮೆ ಆಗುತ್ತಿದೆ. ರಫ್ತಿನ ಮೇಲೆ ನಿಯಂತ್ರಣ ಇಲ್ಲದಿದ್ದರೆ ದೇಶದಲ್ಲಿ ಸಕ್ಕರೆ ಅಭಾವ ಉಂಟಾಗಬಹುದು, ಹಬ್ಬಗಳ ಸಂದರ್ಭದಲ್ಲಿ ದೇಶಿ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಾಗಬಹುದು’ ಎಂದು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಹೆಸರು ಬಹಿರಂಗಪಡಿಸಬಾರದು ಎಂಬ ಷರತ್ತಿನೊಂದಿಗೆ ತಿಳಿಸಿದರು.
ರಫ್ತು ನಿರುತ್ತೇಜಿಸಲು ತೆರಿಗೆ ವಿಧಿಸುವ ಆಯ್ಕೆಯನ್ನೂ ಸರ್ಕಾರ ಪರಿಶೀಲಿಸುತ್ತಿದೆ ಎಂದು ಗೊತ್ತಾಗಿದೆ. ಈ ಕುರಿತು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಪ್ರತಿಕ್ರಿಯೆ ಲಭ್ಯವಾಗಿಲ್ಲ.
ಸಕ್ಕರೆ ಕಾರ್ಖಾನೆಗಳು ಈಗಾಗಲೇ 70 ಲಕ್ಷ ಟನ್ ಸಕ್ಕರೆ ರಫ್ತಿಗೆ ಒಪ್ಪಂದ ಮಾಡಿಕೊಂಡಿವೆ. ಹೀಗಿರುವಾಗ, ಸೆಪ್ಟೆಂಬರ್‌ಗೆ ಕೊನೆಯಾಗುವ ಮಾರುಕಟ್ಟೆ ವರ್ಷದಲ್ಲಿ ರಫ್ತು 80 ಲಕ್ಷ ಟನ್ ಮೀರುವಂತಿಲ್ಲ ಎಂಬ ಮಿತಿ ಜಾರಿಗೆ ಬಂದರೆ, ಮೇ ತಿಂಗಳಿನಿಂದ ರಫ್ತು ಸಂಪೂರ್ಣವಾಗಿ ನಿಲುಗಡೆ ಆಗುತ್ತದೆ ಎಂದು ಮೂಲಗಳು ವಿವರಿಸಿವೆ. ಜಾಗತಿಕ ಮಟ್ಟದಲ್ಲಿ ಸಕ್ಕರೆ ಬೆಲೆಯು ಗುರುವಾರ ಐದು ವರ್ಷಗಳ ಗರಿಷ್ಠ ಮಟ್ಟವನ್ನು ತಲುಪಿದೆ.
‘ಹೊಸ ಮಾರುಕಟ್ಟೆ ಹಂಗಾಮು (ಅಕ್ಟೋಬರ್‌ನಿಂದ ಆರಂಭವಾಗುವ ಅವಧಿ) ಶುರುವಾಗುವ ಹೊತ್ತಿನಲ್ಲಿ ದೇಶದಲ್ಲಿ ಒಟ್ಟು 60 ಲಕ್ಷದಿಂದ 70 ಲಕ್ಷ ಟನ್ ಸಕ್ಕರೆ ದಾಸ್ತಾನು ಇರಬೇಕು ಎಂಬುದು ಸರ್ಕಾರದ ಬಯಕೆ. ಆಗ ಡಿಸೆಂಬರ್ ತ್ರೈಮಾಸಿಕದ ಸಕ್ಕರೆ ಬೇಡಿಕೆ ಪೂರೈಸಲು ಸಾಧ್ಯವಾಗುತ್ತದೆ’ ಎಂದು ಅಧಿಕಾರಿಯೊಬ್ಬರು ವಿವರಿಸಿದರು. ದೀಪಾವಳಿ, ದಸರಾ ಹಬ್ಬ, ಮದುವೆಗಳ ಕಾರಣದಿಂದಾಗಿ ಡಿಸೆಂಬರ್ ತ್ರೈಮಾಸಿಕದಲ್ಲಿ ದೇಶದಲ್ಲಿ ಸಕ್ಕರೆ ಬೇಡಿಕೆಯು ಹೆಚ್ಚಾಗುತ್ತದೆ.
ಸ್ಥಳೀಯ ಬೇಡಿಕೆ ಪೂರೈಸಲು ಅಗತ್ಯವಿರುವಷ್ಟು ಸಕ್ಕರೆ ಉತ್ಪಾದನೆ ಆಗಬೇಕು. ಹೆಚ್ಚುವರಿ ಕಬ್ಬಿನಿಂದ ಸಾಧ್ಯವಾದಷ್ಟು ಹೆಚ್ಚು ಎಥೆನಾಲ್ ಉತ್ಪಾದನೆ ಆಗಬೇಕು. ದೇಶದಲ್ಲಿ ಸಕ್ಕರೆ ಬೆಲೆಯು ಜಾಗತಿಕ ಮಾರುಕಟ್ಟೆಯ ಬೆಲೆಯನ್ನು ನೆಚ್ಚಿಕೊಂಡು ಇರಬಾರದು. ಇದು ಕೇಂದ್ರದ ನೀತಿ ಎಂದು ಅಧಿಕಾರಿಯೊಬ್ಬರು ಹೇಳಿದರು.
ರಫ್ತು ಶೇ 7ರಷ್ಟು ಹೆಚ್ಚಳ ನಿರೀಕ್ಷೆ
ನವದೆಹಲಿ (ಪಿಟಿಐ): ಸೆಪ್ಟೆಂಬರ್‌ಗೆ ಕೊನೆಗೊಳ್ಳುವ ಪ್ರಸಕ್ತ ಮಾರುಕಟ್ಟೆ ವರ್ಷದಲ್ಲಿ ದೇಶದ ಸಕ್ಕರೆ ರಫ್ತು ಪ್ರಮಾಣವು ಶೇಕಡ 7ರಷ್ಟು ಹೆಚ್ಚಳ ಕಂಡು, 75 ಲಕ್ಷ ಟನ್‌ಗೆ ತಲುಪುವ ನಿರೀಕ್ಷೆ ಇದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ವ್ಯವಹಾರಗಳ ರಾಜ್ಯ ಸಚಿವೆ ಸಾಧ್ವಿ ನಿರಂಜನಜ್ಯೋತಿ ರಾಜ್ಯಸಭೆಗೆ ತಿಳಿಸಿದ್ದಾರೆ. ಹಿಂದಿನ ಮಾರುಕಟ್ಟೆ ವರ್ಷದಲ್ಲಿ ದೇಶದಿಂದ 70 ಲಕ್ಷ ಟನ್ ಸಕ್ಕರೆ ರಫ್ತು ಆಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.