ನವದೆಹಲಿ (ಪಿಟಿಐ): ಭಾರತದ ಆರ್ಥಿಕತೆಯ ಗಾತ್ರವು 2030ರ ವೇಳೆಗೆ ₹606 ಲಕ್ಷ ಕೋಟಿಯಷ್ಟು ಆಗಲಿದೆ. ಆ ಮೂಲಕ ಜಪಾನ್ ದೇಶವನ್ನು ಹಿಂದಿಕ್ಕಿ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಭಾರತ ಹೊರಹೊಮ್ಮಲಿದೆ ಎಂದು ಎಸ್ ಆ್ಯಂಡ್ ಪಿ ಗ್ಲೋಬಲ್ ಮಾರ್ಕೆಟ್ ಇಂಟಲಿಜೆನ್ಸ್ ಸಂಸ್ಥೆಯು ಹೇಳಿದೆ.
ಸದ್ಯ ಭಾರತವು ಐದನೇ ಅತಿದೊಡ್ಡ ಆರ್ಥಿಕತೆ ಆಗಿದ್ದು, ವಿಶ್ವದ ಪ್ರಮುಖ ಅರ್ಥ ವ್ಯವಸ್ಥೆಗಳಲ್ಲಿ ಅತ್ಯಂತ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಅರ್ಥಿಕತೆಯಾಗಿದೆ. 2021 ಮತ್ತು 2022ರಲ್ಲಿ ಆರ್ಥ ವ್ಯವಸ್ಥೆಯು ಉತ್ತಮ ಬೆಳವಣಿಗೆ ಕಂಡಿದ್ದು, 2023ನೇ ಕ್ಯಾಲೆಂಡರ್ ವರ್ಷದಲ್ಲಿಯೂ ಸ್ಥಿರವಾದ ಬೆಳವಣಿಗೆ ಪ್ರಮಾಣವನ್ನು ಮುಂದುವರಿಸಲಿದೆ ಎಂದು ಈಚಿನ ಪಿಎಂಐ ವರದಿಯಲ್ಲಿ ಅದು ತಿಳಿಸಿದೆ.
2024ರ ಮಾರ್ಚ್‌ಗೆ ಕೊನೆಗೊಳ್ಳಲಿರುವ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿಯು ಶೇ 6.2 ರಿಂದ ಶೇ 6.3ರವರೆಗೆ ಬೆಳೆವಣಿಗೆ ಕಾಣುವ ನಿರೀಕ್ಷೆ ಇದೆ ಎಂದು ಹೇಳಿದೆ. ಅಲ್ಪಾವಧಿಯ ಮುನ್ನೋಟದ ಪ್ರಕಾರ, 2023ರ ಉಳಿದ ಅವಧಿಯಲ್ಲಿ ಮತ್ತು 2024ನೇ ಕ್ಯಾಲೆಂಡರ್ ವರ್ಷದಲ್ಲಿ ಭಾರತದ ಆರ್ಥಿಕತೆಯು ವೇಗವಾಗಿ ಬೆಳವಣಿಗೆ ಕಾಣಲಿದೆ. ದೇಶಿ ಬೇಡಿಕೆಯು ಉತ್ತಮವಾಗಿ ಇರುವುದು ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡುತ್ತಿದೆ ಎಂದು ಅದು ಹೇಳಿದೆ.
ಭಾರತದ ಆರ್ಥಿಕ ಬೆಳವಣಿಗೆಗೆ ಅನುಕೂಲಕರವಾದ ವಾತಾವರಣ ಇರಲಿದೆ ಎನ್ನುವುದನ್ನು ಕಳೆದ ದಶಕದಲ್ಲಿ ಆಗಿರುವ ವಿದೇಶಿ ನೇರ ಬಂಡವಾಳ (ಎಫ್‌ಡಿಐ) ಹೂಡಿಕೆಯೇ ಸೂಚಿಸುತ್ತಿದೆ. ಯುವ ಪೀಳಿಗೆ ಮತ್ತು ನಗರ ಪ್ರದೇಶಗಳಲ್ಲಿ ಕುಟುಂಬದ ಆದಾಯ ಹೆಚ್ಚಾಗುತ್ತಿರುವುದು ಸಹ ಆರ್ಥಿಕ ಬೆಳವಣಿಗೆಗೆ ನೆರವಾಗುತ್ತಿದೆ.
2022ರಲ್ಲಿ ₹297 ಲಕ್ಷ ಕೋಟಿಯಷ್ಟು ಇದ್ದ ಭಾರತದ ಆರ್ಥಿಕತೆಯು 2030ರ ವೇಳೆಗೆ ₹606 ಲಕ್ಷ ಕೋಟಿಗೆ ಏರಿಕೆ ಕಾಣುವ ಅಂದಾಜು ಮಾಡಲಾಗಿದೆ. ಈ ಪ್ರಮಾಣದ ಬೆಳವಣಿಗೆಯ ಮೂಲಕ ಎಷ್ಯಾ–ಪೆಸಿಫಿಕ್ ಪ್ರದೇಶದಲ್ಲಿ ಭಾರತವು ಜಪಾನ್ ದೇಶವನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೆ ಏರಲಿದೆ ಎಂದು ತಿಳಿಸಿದೆ.
ಭಾರತದ ಆರ್ಥಿಕತೆಯು ಗಾತ್ರದಲ್ಲಿ ಈಗಾಗಲೇ ಬ್ರಿಟನ್ ಮತ್ತು ಫ್ರಾನ್ಸ್ ಅನ್ನು ಹಿಂದಿಕ್ಕಿದೆ. 2023ರ ವೇಳೆಗೆ ಜರ್ಮನಿಯನ್ನೂ ಹಿಂದಿಕ್ಕಲಿದೆ ಎಂದು ಸಂಸ್ಥೆಯು ಹೇಳಿದೆ.
‘ವೇಗದ ಬೆಳವಣಿಗೆ ಮುಂದುವರಿಯಲಿದೆ’
2023–24ನೇ ಹಣಕಾಸು ವರ್ಷದಲ್ಲಿಯೂ ಭಾರತವು ವಿಶ್ವದ ಪ್ರಮುಖ ಅರ್ಥ ವ್ಯವಸ್ಥೆಗಳಲ್ಲಿ ಅತ್ಯಂತ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಅರ್ಥಿಕತೆಯಾಗಿ ಮುಂದುವರಿಯಲಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯದ ವರದಿ ತಿಳಿಸಿದೆ. ಹಲವು ದೇಶಗಳಲ್ಲಿ ಉದ್ಭವಿಸಿರುವ ರಾಜಕೀಯ ಬಿಕ್ಕಟ್ಟುಗಳು ಜಾಗತಿಕ ಆರ್ಥಿಕತೆಯ ಮೇಲೆ ಪರಿಣಾಮ ಬೀರಬಹುದು. ಅದರಿಂದಾಗಿ ಭಾರತವನ್ನೂ ಒಳಗೊಂಡು ಹಲವು ದೇಶಗಳ ಆರ್ಥಿಕ ಚಟುವಟಿಕೆಗಳನ್ನು ಕಡಿಮೆ ಮಾಡುವ ಸಾಧ್ಯತೆ ಇದೆ. ಆದರೆ ಭಾರತದ ಆರ್ಥಿಕ ತಳಹದಿ ಬಲಿಷ್ಠವಾಗಿ ಇರುವುದರಿಂದ 2023–24ರಲ್ಲಿ ಆರ್ಥಿಕ ಬೆಳವಣಿಗೆ ಮುನ್ನೋಟ ಉತ್ತಮವಾಗಿರುವ ನಿರೀಕ್ಷೆ ಮಾಡಲಾಗಿದೆ ಎಂದೂ ಸಚಿವಾಲಯ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.