ನವದೆಹಲಿ: ಭಾರತದಲ್ಲಿ ಹಣದುಬ್ಬರವು ಸಹಿಸಿಕೊಳ್ಳಬಹುದಾದ ಮಟ್ಟಕ್ಕಿಂತ ತುಸು ಹೆಚ್ಚಿಗೆ ಇದ್ದು, ಅದನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಹೇಳಿದ್ದಾರೆ.
ಸೂಕ್ತವಾದ ಕ್ರಮಗಳನ್ನು ತೆಗೆದುಕೊಂಡಿರುವುದರಿಂದಲೇ ಸದ್ಯ ಹಣದುಬ್ಬರವು ಗರಿಷ್ಠ ಮಟ್ಟಕ್ಕಿಂತಲೂ ತುಸುವೇ ಹೆಚ್ಚಿಗೆ ಇದೆ. ಅದನ್ನು ಸಹ ಕಡಿಮೆ ಮಾಡಲು ನಿರಂತರವಾಗಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಚಿಲ್ಲರೆ ಹಣದುಬ್ಬರವನ್ನು ಶೇ 4 ರಿಂದ ಗರಿಷ್ಠ ಶೇ 6ರ ಮಟ್ಟದಲ್ಲಿ ನಿಯಂತ್ರಿಸುವ ಗುರಿಯನ್ನು ಕೇಂದ್ರ ಸರ್ಕಾರವು ಭಾರತೀಯ ರಿಸರ್ವ್ ಬ್ಯಾಂಕ್‌ಗೆ (ಆರ್‌ಬಿಐ) ನೀಡಿದೆ. ಜನವರಿ ಮತ್ತು ಫೆಬ್ರುವರಿಯಲ್ಲಿ ಹಣದುಬ್ಬರವು ಶೇ 6ರ ಗರಿಷ್ಠ ಮಟ್ಟವನ್ನು ಮೀರಿತ್ತು. ಆದರೆ ಮಾರ್ಚ್‌ನಲ್ಲಿ ಶೇ 5.66ರಷ್ಟು ದಾಖಲಾಗುವ ಮೂಲಕ 15 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆ ಕಂಡಿದೆ. ಆಹಾರ ವಸ್ತುಗಳ ದರ ಇಳಿಕೆ ಆಗಿರುವುದರಿಂದ ಮಾರ್ಚ್‌ನಲ್ಲಿ ಚಿಲ್ಲರೆ ಹಣದುಬ್ಬರ ಇಳಿಕೆ ಕಾಣಲು ಕಾರಣ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.