ನವದೆಹಲಿ: ಭಾರತ–ಚೀನಾ ಗಡಿ ಭಾಗದ ಬಿಕ್ಕಟ್ಟು ಗಮನದಲ್ಲಿ ಇಟ್ಟುಕೊಂಡುಚೀನಾದ ಮೇಲಿನ ಅವಲಂಬನೆ ತಗ್ಗಿಸಲು ಭಾರತೀಯ ವಾಹನ ಬಿಡಿಭಾಗಗಳ ತಯಾರಿಕಾ ಉದ್ಯಮ ಮುಂದಾಗಿದೆ.
ಭಾರತಕ್ಕೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಚೀನಾದಿಂದ ವಾಹನಗಳ ಬಿಡಿಭಾಗಗಳು ಆಮದಾಗುತ್ತಿವೆ. ಕೋವಿಡ್ ಬಿಕ್ಕಟ್ಟಿನಿಂದಾಗಿ ದೇಶದ ವಾಹನ ಉದ್ಯಮವು ಬಿಡಿಭಾಗಗಳ ಪೂರೈಕೆಯ ಕೊರತೆ ಎದುರಿಸುತ್ತಿದೆ. ಹೀಗಾಗಿ ಚೀನಾದ ಆಮದು ಅವಲಂಬನೆ ಕಡಿಮೆ ಮಾಡಬೇಕು ಎಂದು ವಾಹನ ತಯಾರಿಕಾ ಕಂಪನಿಗಳು ಚಿಂತನೆ ನಡೆಸಿವೆ.
‘ಗಡಿ ಬಿಕ್ಕಟ್ಟು ಮತ್ತು ಲಾಕ್‌ಡೌನ್‌ನಿಂದ ಪೂರೈಕೆಯಲ್ಲಿ ಆಗಿರುವ ಕೊರತೆಯಿಂದಾಗಿ ದೇಶಿ ತಯಾರಿಕೆಗೆ ಆದ್ಯತೆ ನೀಡುವ ಮೂಲಕ ಆಮದು ತಗ್ಗಿಸುವ ಕಡೆಗೆ ಹೆಚ್ಚಿನ ಗಮನ ನೀಡಬೇಕಾಗಿದೆ’ ಎಂದು ಭಾರತೀಯ ವಾಹನ ಬಿಡಿಭಾಗಗಳ ತಯಾರಕರ ಒಕ್ಕೂಟದ (ಎಸಿಎಂಎ) ಪ್ರಧಾನ ನಿರ್ದೇಶಕ ವಿನಿ ಮೆಹ್ತಾ ಹೇಳಿದ್ದಾರೆ.
‘ದೇಶಿ ವಾಹನ ಉದ್ಯಮವು ಸ್ಥಳೀಯವಾಗಿ ತಯಾರಿಕೆಗೆ ಹೆಚ್ಚಿನ ಗಮನ ನೀಡುತ್ತಿದೆ. ಇತ್ತೀಚಿನ ಭಾರತ–ಚೀನಾ ಗಡಿ ಸಂಘರ್ಷದಿಂದಾಗಿ ಆ ಪ್ರಕ್ರಿಯೆಗೆ ವೇಗ ದೊರೆತಿದೆಯಷ್ಟೆ.
‘ಉದ್ಯಮವು ಸ್ವಾವಲಂಬನೆ ಸಾಧಿಸಲು ಸರ್ಕಾರ ಮತ್ತು ಕಂಪನಿಗಳು ಒಟ್ಟಾಗಿ ಒಂದು ರೂಪುರೇಷೆ ನಿರ್ಮಿಸಿ ಅದಕ್ಕೆ ಅನುಗುಣವಾಗಿ ನಡೆಯಬೇಕಿದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಚೀನಾ ಸರಕು ಬಹಿಷ್ಕಾರ, ಉದ್ಯಮಿಗಳ ಸಹಕಾರ ಕೋರಿದ ಸಿಎಐಟಿ: ಚೀನಾದ ಸರಕುಗಳ ಬಹಿಷ್ಕಾರ ಆಂದೋಲನಕ್ಕೆ ಸಹಕಾರ ನೀಡುವಂತೆ ಮುಕೇಶ್ ಅಂಬಾನಿ ಒಳಗೊಂಡು ಪ್ರಮುಖ 50 ಉದ್ಯಮಿಗಳಿಗೆಅಖಿಲ ಭಾರತ ವರ್ತಕರ ಒಕ್ಕೂಟ (ಸಿಎಐಟಿ) ಮನವಿ ಮಾಡಿದೆ.
ರತನ್ ಟಾಟಾ, ಅಜೀಂ ಪ್ರೇಮ್‌ಜಿ, ಗೌತಮ್ ಅದಾನಿ, ಆನಂದ್ ಮಹೀಂದ್ರಾ, ಸುನಿಲ್ ಭಾರ್ತಿ ಮಿತ್ತಲ್, ರಾಹುಲ್ ಬಜಾಜ್, ಶಿವ ನಾಡರ್, ಪಲ್ಲೋಂಜಿ ಮಿಸ್ತ್ರಿ ಸೇರಿದಂತೆ ಪ್ರಮುಖ ಉದ್ಯಮಿಗಳಿಗೆ ಮನವಿ ಮಾಡಿಕೊಂಡಿದೆ.
₹ 4.27 ಲಕ್ಷ ಕೋಟಿ
ದೇಶಿ ವಾಹನ ಬಿಡಿಭಾಗ ಉದ್ಯಮದ ವಹಿವಾಟು
800
ಒಕ್ಕೂಟದಲ್ಲಿರುವ ತಯಾರಕರು
85%
ಸಂಘಟಿತ ವಲಯದಲ್ಲಿ ವಾಹನ ಬಿಡಿಭಾಗ ಉದ್ಯಮದ ವಹಿವಾಟು
***
ಆಮದು
₹ 1.32 ಲಕ್ಷ ಕೋಟಿ
2018–19ರಲ್ಲಿ ವಾಹನ ಬಿಡಿಭಾಗಗಳ ಆಮದು ಮೌಲ್ಯ
₹ 35,625 ಕೋಟಿ
2018–19ರ ಒಟ್ಟಾರೆ ಆಮದಿನಲ್ಲಿ ಚೀನಾದ ಪಾಲು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.