ADVERTISEMENT

ಅತ್ಯಂತ ವೇಗವಾಗಿ ಬೆಳೆದ ಕಂಪನಿಗಳ ಮಾರುಕಟ್ಟೆ ಬಂಡವಾಳ

‘ಈಕ್ವಿಟಿ’ಯತ್ತ ಸಣ್ಣ ಹೂಡಿಕೆದಾರರ ಆಸಕ್ತಿ್: ಎಸ್‌ಬಿಐ ಅರ್ಥಶಾಸ್ತ್ರಜ್ಞರ ವರದಿ

ಪಿಟಿಐ
Published 22 ಜೂನ್ 2021, 17:26 IST
Last Updated 22 ಜೂನ್ 2021, 17:26 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ವಿಶ್ವದ ಪ್ರಮುಖ ಅರ್ಥ ವ್ಯವಸ್ಥೆಗಳಲ್ಲಿನ ಕಂಪನಿಗಳ ಪೈಕಿ ಭಾರತದ ಅರ್ಥ ವ್ಯವಸ್ಥೆಯಲ್ಲಿನ ಕಂಪನಿಗಳ ಮಾರುಕಟ್ಟೆ ಬಂಡವಾಳದ ಮೌಲ್ಯವು ಕಳೆದ ವರ್ಷದಲ್ಲಿ ಅತಿಹೆಚ್ಚಿನ ವೇಗದಲ್ಲಿ ಬೆಳವಣಿಗೆ ಕಂಡಿದೆ ಎಂದು ಭಾರತೀಯ ಸ್ಟೇಟ್‌ ಬ್ಯಾಂಕ್‌ನ (ಎಸ್‌ಬಿಐ) ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ.

ದೇಶದ ಒಟ್ಟು ಆಂತರಿಕ ಉತ್ಪಾದನೆಯು (ಜಿಡಿಪಿ) ಕುಸಿತ ಕಂಡಿದ್ದರೂ, ಕಂಪನಿಗಳ ಮಾರುಕಟ್ಟೆ ಮೌಲ್ಯದಲ್ಲಿ ಈ ಬಗೆಯ ಬೆಳವಣಿಗೆ ಕಂಡುಬಂದಿದೆ ಎಂದು ಅವರು ಹೇಳಿದ್ದಾರೆ.

ಮಾರ್ಚ್‌ 31ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ಸಣ್ಣ ಹೂಡಿಕೆದಾರರು ಷೇರು ಮಾರುಕಟ್ಟೆ ಹೂಡಿಕೆಗಳಲ್ಲಿ ಹೆಚ್ಚಿನ ಆಸಕ್ತಿ ತೋರಿಸಿದ್ದಾರೆ. ಒಂದು ವರ್ಷದ ಅವಧಿಯಲ್ಲಿ ಸಣ್ಣ ಹೂಡಿಕೆದಾರರ ಸಂಖ್ಯೆಯಲ್ಲಿ 1.42 ಕೋಟಿಯಷ್ಟು ಹೆಚ್ಚಳ ಆಗಿದೆ. ಹಾಲಿ ಆರ್ಥಿಕ ವರ್ಷದ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಸಣ್ಣ ಹೂಡಿಕೆದಾರರ ಸಂಖ್ಯೆಯು 44 ಲಕ್ಷದಷ್ಟು ಏರಿಕೆ ಆಗಿದೆ. ಆದರೆ, ಸಣ್ಣ ಹೂಡಿಕೆದಾರರಲ್ಲಿ ಮಾರುಕಟ್ಟೆಗಳ ಬಗ್ಗೆ ಮೂಡಿರುವ ಆಕರ್ಷಣೆಯು ಬಹುಕಾಲ ಉಳಿದುಕೊಳ್ಳುವುದೇ ಎಂಬ ಪ್ರಶ್ನೆಯನ್ನೂ ಅವರು ತಮ್ಮ ವರದಿಯಲ್ಲಿ ಎತ್ತಿದ್ದಾರೆ.

ADVERTISEMENT

ಇತರ ಹಣಕಾಸು ಉತ್ಪನ್ನಗಳಿಂದ ಬರುವ ಲಾಭವು ಕಡಿಮೆ ಆಗಿದ್ದು, ಜಾಗತಿಕ ಮಾರುಕಟ್ಟೆಗಳಲ್ಲಿ ಹಣದ ಹರಿವು ಹೆಚ್ಚಾಗಿದ್ದು, ಜನ ಮನೆಯಲ್ಲೇ ಹೆಚ್ಚು ಕಾಲ ಕಳೆಯುತ್ತಿರುವುದರಿಂದ ಹೂಡಿಕೆ ಹಾಗೂ ಷೇರು ಮಾರಾಟಗಳಲ್ಲಿ ಆಸಕ್ತಿ ಮೂಡಿರುವುದು ಈಕ್ವಿಟಿ ಮಾರುಕಟ್ಟೆಯ ಬೆಳವಣಿಗೆಗೆ ಒಂದು ಕಾರಣ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

2020ರ ಏಪ್ರಿಲ್‌ನ ಆರಂಭದಲ್ಲಿ 28 ಸಾವಿರಕ್ಕೆ ಕುಸಿದಿದ್ದ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಈಗ 52 ಸಾವಿರದ ಗಡಿಯನ್ನು ದಾಟಿದೆ. ‘ನೈಜ ಅರ್ಥ ವ್ಯವಸ್ಥೆಯಲ್ಲಿ ಗಮನಾರ್ಹವಾದ ಬೆಳವಣಿಗೆ ಆಗದೆ ಇದ್ದರೂ ಷೇರು ಮಾರುಕಟ್ಟೆಯು ಏರಿಕೆಯ ಹಾದಿಯಲ್ಲಿ ಇರುವುದು ಹಣಕಾಸಿನ ಸ್ಥಿರತೆ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಬಹುದು’ ಎಂದು ವರದಿ ಹೇಳಿದೆ.

ಷೇರು ಮಾರುಕಟ್ಟೆಗಳಲ್ಲಿ ಕಂಡುಬರುತ್ತಿರುವ ಏರಿಕೆಯ ಗತಿಯನ್ನು ಕಂಡು ಭಾರತೀಯ ರಿಸರ್ವ್‌ ಬ್ಯಾಂಕ್‌ ಕೂಡ ಹಣಕಾಸಿನ ಸ್ಥಿರತೆಯ ಪ್ರಶ್ನೆಗಳನ್ನು ಈ ಹಿಂದೆ ಎತ್ತಿತ್ತು. ಸಣ್ಣ ಹೂಡಿಕೆದಾರರು ಈಕ್ವಿಟಿ ಮಾರುಕಟ್ಟೆಗಳಲ್ಲಿ ಹಣ ತೊಡಗಿಸುವುದು ಹೆಚ್ಚಾದರೆ ಭಾರತದ ಮೂಲಸೌಕರ್ಯ ಯೋಜನೆಗಳಿಗೆ ಹೆಚ್ಚಿನ ಸಂಪನ್ಮೂಲ ದೊರೆತಂತೆ ಆಗುತ್ತದೆ ಎಂದು ವರದಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.