ADVERTISEMENT

ಕೋವಿಡ್‌ನಿಂದ ಆಗಿರುವ ನಷ್ಟದಿಂದ ಹೊರಬರಲು 12 ವರ್ಷ ಬೇಕು: ಆರ್‌ಬಿಐ ವರದಿ

ಪಿಟಿಐ
Published 30 ಏಪ್ರಿಲ್ 2022, 10:49 IST
Last Updated 30 ಏಪ್ರಿಲ್ 2022, 10:49 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಕೋವಿಡ್‌–19 ಸಾಂಕ್ರಾಮಿಕದಿಂದ ಆಗಿರುವ ನಷ್ಟದಿಂದ ಹೊರಬರಲು ಭಾರತದ ಆರ್ಥಿಕತೆಗೆ 12 ವರ್ಷಗಳು ಬೇಕಾಗಲಿವೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ವರದಿ ಹೇಳಿದೆ.

ಸಾಂಕ್ರಾಮಿಕದ ಅವಧಿಯಲ್ಲಿ ಭಾರತದ ಆರ್ಥಿಕತೆಯು ₹ 52 ಲಕ್ಷ ಕೋಟಿಗಳಷ್ಟು ಉತ್ಪಾದನಾ ನಷ್ಟ ಅನುಭವಿಸಿದೆ. 2034–35ರ ವೇಳೆಗೆ ಈ ನಷ್ಟದಿಂದ ಹೊರಬರುವ ನಿರೀಕ್ಷೆ ಮಾಡಲಾಗಿದೆ ಎಂದು 2021–22ರ ‘ಕರೆನ್ಸಿ ಆ್ಯಂಡ್‌ ಫೈನಾನ್ಸ್‌ (ಆರ್‌ಸಿಎಫ್‌)’ ವರದಿಯಲ್ಲಿ ಅಂದಾಜು ಮಾಡಲಾಗಿದೆ.

2020–21ರ ಮೊದಲ ತ್ರೈಮಾಸಿಕದಲ್ಲಿ ಭಾರಿ ಕುಸಿತ ಕಂಡ ಆರ್ಥಿಕ ಬೆಳವಣಿಗೆಯು ನಂತರದಲ್ಲಿ ತುಸು ಚೇತರಿಕೆ ಮರಳಿತ್ತು. ಆದರೆ 2021–22ರ ಏಪ್ರಿಲ್‌–ಜೂನ್‌ ಅವಧಿಯಲ್ಲಿ ಕೋವಿಡ್‌ನ ಎರಡನೇ ಅಲೆಯಿಂದಾಗಿ ಮತ್ತೆ ಇಳಿಕೆ ಹಾದಿ ಹಿಡಿಯಿತು. 2022ರ ಜನವರಿಯಲ್ಲಿ ಮೂರನೇ ಅಲೆಯು ಬರುವ ಸಾಧ್ಯತೆಯಿಂದಾಗಿ ಆರ್ಥಿಕ ಚೇತರಿಕೆಗೆ ಮತ್ತಷ್ಟು ಹಿನ್ನಡೆ ಆಯಿತು ಎಂದು ಹೇಳಿದೆ.

ADVERTISEMENT

ಸದ್ಯದ ರಷ್ಯಾ–ಉಕ್ರೇನ್‌ ಸಂಘರ್ಷದಿಂದಾಗಿ ಸರಕುಗಳ ಬೆಲೆ ಹೆಚ್ಚಾಗುತ್ತಿದ್ದು, ಜಾಗತಿಕ ಪೂರೈಕೆ ವ್ಯವಸ್ಥೆಯ ಮೇಲೆಯೂ ತೀವ್ರ ಪರಿಣಾಮ ಉಂಟಾಗುತ್ತಿದೆ. ಇದರಿಂದಾಗಿ ಜಾಗತಿಕ ಮತ್ತು ದೇಶಿ ಮಟ್ಟದಲ್ಲಿ ಆರ್ಥಿಕ ಬೆಳವಣಿಗೆಗೆ ಹಿನ್ನಡೆಯಾಗುತ್ತಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ನಷ್ಟದ ಅಂದಾಜು (ಲಕ್ಷ ಕೋಟಿಗಳಲ್ಲಿ)

ವರ್ಷ;ನಷ್ಟ

2020–21;19.1

2021–22;17.1

2022–23;₹ 16.4

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.