ವಿಶ್ವಸಂಸ್ಥೆ: 2024ರಲ್ಲಿ ಭಾರತದ ಆರ್ಥಿಕತೆಯ ಬೆಳವಣಿಗೆಯ ದರ ಶೇ 6.2ರಷ್ಟಿರಲಿದೆ ಎಂದು ವಿಶ್ವಸಂಸ್ಥೆ ಅಂದಾಜಿಸಿದೆ. ದೇಶೀಯ ಬೇಡಿಕೆ ಹೆಚ್ಚಳ ಮತ್ತು ಉತ್ಪಾದನೆ ಹಾಗೂ ಸೇವಾ ವಲಯದ ಬೆಳವಣಿಗೆಯಿಂದ ಇಷ್ಟು ಪ್ರಗತಿ ದಾಖಲಾಗಲಿದೆ ಎಂದು ವಿಶ್ವಸಂಸ್ಥೆ ಹೇಳಿದೆ.
ಗುರುವಾರ ಇಲ್ಲಿ ಬಿಡುಗಡೆಯಾದ ‘ವಿಶ್ವ ಆರ್ಥಿಕ ಪರಿಸ್ಥಿತಿ ಮತ್ತು ಭವಿಷ್ಯ ವರದಿ’ಯಲ್ಲಿ ಭಾರತದ ಈ ಪ್ರಗತಿಯನ್ನು ಅಂದಾಜಿಸಲಾಗಿದೆ.
ಭಾರತ ಅಭಿವೃದ್ಧಿಯ ವೇಗದಿಂದ 2024ರಲ್ಲಿ ದಕ್ಷಿಣ ಏಷ್ಯಾದ ಜಿಡಿಪಿ ಬೆಳವಣಿಗೆ ದರ ಶೇ 5.2ರಷ್ಟು ಇರಲಿದೆ ಎಂದು ವರದಿ ಹೇಳಿದೆ. ಅಲ್ಲದೇ ಭಾರತವು ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಮುಂದುವರಿಯಲಿದೆ ಎಂದಿದೆ.
‘2024ರಲ್ಲಿ ಭಾರತದ ಆರ್ಥಿಕ ಅಭಿವೃದ್ಧಿ ಶೇ 6.2ರ ವೇಗದಲ್ಲಿ ಬೆಳವಣಿಗೆ ಕಾಣಲಿದ್ದು, 2023ಕ್ಕೆ ಹೋಲಿಕೆ ಮಾಡಿದರೆ ಸ್ವಲ್ಪ ಕಡಿಮೆ. 2023ರಲ್ಲಿ ಭಾರತದ ಜಿಡಿಪಿ ಶೇ 6.3ರ ವೇಗದಲ್ಲಿ ಬೆಳವಣಿಗೆ ಕಂಡಿತ್ತು’ ಎಂದು ವರದಿ ತಿಳಿಸಿದೆ.
‘2025ರಲ್ಲಿ ಭಾರತ ಜಿಡಿಪಿ ಶೇ 6.6 ವೇಗದಲ್ಲಿ ಬೆಳವಣಿಗೆ ಕಾಣಲಿದೆ. ಖಾಸಗಿ ವಲಯದ ಚೇತರಿಕೆ ಹಾಗೂ ಹೆಚ್ಚಿನ ಸಾರ್ವಜನಿಕ ಹೂಡಿಕೆಯಿಂದಾಗಿ ಭಾರತದ ಈ ವರ್ಷದ ಬೆಳವಣಿಗೆ ಶೇ 6.2ರಲ್ಲಿ ಗಟ್ಟಿಯಾಗಿರಲಿದೆ. ಉತ್ಪಾದನೆ ಹಾಗೂ ಸೇವಾ ವಲಯವು ಆರ್ಥಿಕತೆಯನ್ನು ಇನ್ನಷ್ಟು ಬಲಗೊಳಿಸಲಿದ್ದು, ಅನಿಯಮಿತ ಮಳೆಯಿಂದಾಗಿ ಕೃಷಿ ಉತ್ಪಾದನೆಯಲ್ಲಿ ಕುಂಠಿತವಾಗುವ ಸಾಧ್ಯತೆ ಇದೆ’ ಎಂದು ವರದಿಯಲ್ಲಿ ಹೇಳಲಾಗಿದೆ.
‘ಭಾರತದ ಆರ್ಥಿಕತೆಯು ಈ ವರ್ಷ ಮಾತ್ರವಲ್ಲದೆ ಕಳೆದ ಕೆಲವು ವರ್ಷಗಳಲ್ಲಿ ತನ್ನ ಸಮಾನ ದೇಶಗಳನ್ನು ಮೀರಿಸಿದೆ. ಭಾರತದ ಆರ್ಥಿಕ ಬೆಳವಣಿಗೆಯು ಸತತವಾಗಿ ಶೇ 6ಕ್ಕಿಂತ ಹೆಚ್ಚು ದಾಖಲಾಗಿದೆ. ಇದು 2024 ಮತ್ತು 2025ರಲ್ಲಿಯೂ ಮುಂದುವರಿಯಲಿದೆ ಎಂದು ನಾವು ನಂಬುತ್ತೇವೆ‘ ಎಂದು ವಿಶ್ವಸಂಸ್ಥೆಯ ಆರ್ಥಿಕ ವಿಶ್ಲೇಷಣೆ ಮತ್ತು ನೀತಿ ವಿಭಾಗದ ಜಾಗತಿಕ ಆರ್ಥಿಕ ವಿಭಾಗ ಪರಿವೀಕ್ಷಣೆ ಶಾಖೆಯ ಮುಖ್ಯಸ್ಥ ಹಾಮಿದ್ ರಶೀದ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.