ಮುಂಬೈ: ‘ಡಿಸೆಂಬರ್‌ನಲ್ಲಿ ನಡೆಯಲಿರುವ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯು ರೆಪೊ ದರ ಕಡಿತದ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಿದೆ’ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ನ ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದ್ದಾರೆ.
ಖಾಸಗಿ ವಾಹಿನಿಯೊಂದು ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಚಿವ ಪೀಯೂಷ್ ಗೋಯಲ್ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.
ಅಕ್ಟೋಬರ್‌ನಲ್ಲಿ ಚಿಲ್ಲರೆ ಹಣದುಬ್ಬರವು 14 ತಿಂಗಳ ಗರಿಷ್ಠ ಮಟ್ಟಕ್ಕೆ ದಾಖಲಾಗಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ‘ಕೆಲವು ಅಡೆತಡೆ ಹೊರತಾಗಿಯೂ ಹಣದುಬ್ಬರವು ಇಳಿಕೆಯ ಹಾದಿಗೆ ಮರಳಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ಅಮೆರಿಕದಲ್ಲಿ ಬಾಂಡ್‌ಗಳ ಮೇಲಿನ ಗಳಿಕೆ ಏರಿಕೆಯಾಗುತ್ತಿದೆ. ಸರಕುಗಳ ಬೆಲೆಯಲ್ಲಿ ಏರಿಳಿತವಾಗಿದೆ. ಜಾಗತಿಕ ಬಿಕ್ಕಟ್ಟಿನ ನಡುವೆಯೂ ಭಾರತದ ಆರ್ಥಿಕತೆ ಬೆಳವಣಿಗೆಯು ಸರಾಗವಾಗಿ ಚಲಿಸುತ್ತಿದೆ’ ಎಂದರು.
ರೂಪಾಯಿ ಮೌಲ್ಯ ಕುಸಿತದ ಬಗ್ಗೆ ಮಾತನಾಡಿದ ಅವರು, ‘ದೇಶದ ಚಾಲ್ತಿ ಖಾತೆ ಕೊರತೆಯು ನಿರ್ವಹಿಸಬಹುದಾದ ಮಟ್ಟದಲ್ಲಿದೆ. ರಫ್ತು ಪ್ರಮಾಣ ಏರಿಕೆಯಾಗುತ್ತಿದೆ. ಸೇವಾ ವಲಯದ ರಫ್ತು ಕೂಡ ಸದೃಢವಾಗಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.