ADVERTISEMENT

ಚೇತರಿಕೆಯತ್ತ ಭಾರತೀಯ ಅರ್ಥ ವ್ಯವಸ್ಥೆ: ಹಣದ ಚಲಾವಣೆ ಹೆಚ್ಚಳ

ಫೆಬ್ರುವರಿ ಬಳಿಕ ಇದೇ ಮೊದಲಿಗೆ ₹1 ಲಕ್ಷ ಕೋಟಿ ದಾಟಿದ ಜಿಎಸ್‌ಟಿ ಸಂಗ್ರಹ

ವಿಜಯ ಜೋಷಿ
Published 1 ನವೆಂಬರ್ 2020, 19:50 IST
Last Updated 1 ನವೆಂಬರ್ 2020, 19:50 IST
ಪ್ರಾತಿನಿಧಿಕ ಚಿತ್ರ  (Getty images)
ಪ್ರಾತಿನಿಧಿಕ ಚಿತ್ರ (Getty images)   
""
""
""

ಬೆಂಗಳೂರು: ಅಕ್ಟೋಬರ್‌ ತಿಂಗಳ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹವು ₹ 1.05 ಲಕ್ಷ ಕೋಟಿ. ಫೆಬ್ರುವರಿ ನಂತರ ಆಗಿರುವ ಅತಿ ಹೆಚ್ಚಿನ ಜಿಎಸ್‌ಟಿ ಸಂಗ್ರಹ ಇದು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಪರೋಕ್ಷ ತೆರಿಗೆ ಸಂಗ್ರಹವು ₹ 1 ಲಕ್ಷ ಕೋಟಿಯ ಗಡಿಯನ್ನು ತಿಂಗಳೊಂದರಲ್ಲಿ ದಾಟಿರು ವುದು ದೇಶದ ಅರ್ಥ ವ್ಯವಸ್ಥೆಯ ಪಾಲಿನ ಕಡುಕಷ್ಟದ ದಿನಗಳು ಮುಗಿದಿರಬಹುದು ಎಂಬ ಸಂತಸವನ್ನು ಹೊತ್ತು ತಂದಿದೆ.

ಕೊರೊನಾ ವೈರಾಣು ಹರಡುವುದನ್ನು ತಡೆಯುವ ಉದ್ದೇಶದಿಂದ ಮಾರ್ಚ್ ಕೊನೆಯ ವಾರದಲ್ಲಿ ದೇಶದಲ್ಲಿ ಲಾಕ್‌ಡೌನ್‌ ಜಾರಿಗೊಳಿಸಲಾಯಿತು. ಮಾರುಕಟ್ಟೆಯಲ್ಲಿ ಅಗತ್ಯ ಸೇವೆಗಳು, ಅಗತ್ಯ ವಸ್ತುಗಳನ್ನು ಬಿಟ್ಟುಬೇರೇನೂ ಸಿಗುತ್ತಿರಲಿಲ್ಲ. ಮಾರುಕಟ್ಟೆಯೇ ಬಹುತೇಕ ಸ್ಥಗಿತಗೊಂಡಾಗ ಪರೋಕ್ಷ ತೆರಿಗೆ ಸಂಗ್ರಹ ಎಲ್ಲಿಂದ ಆಗಬೇಕು? ಖರೀದಿ ಮಾಡಬೇಕಿದ್ದ ಜನ ಮನೆಯಿಂದ ಹೊರಗಡೆ ಬರುವಂತಿರಲಿಲ್ಲ, ಮಾರಾಟದ ಮನಸ್ಸಿದ್ದರೂ ಮಾರುಕಟ್ಟೆ ಬಾಗಿಲು ತೆರೆಯುವಂತಿರಲಿಲ್ಲ. ಲಾಕ್‌ಡೌನ್‌ ಪರಿಣಾಮವಾಗಿ, ಏಪ್ರಿಲ್‌ ತಿಂಗಳ ಜಿಎಸ್‌ಟಿ ಸಂಗ್ರಹವು ₹ 32,294 ಕೋಟಿಗೆ ಕುಸಿಯಿತು.

ಏಪ್ರಿಲ್‌ ತಿಂಗಳ ನಂತರ ಲಾಕ್‌ಡೌನ್‌ ನಿಯಮಗಳನ್ನು ಹಂತ ಹಂತವಾಗಿ ಸಡಿಲಗೊಳಿಸಲಾಯಿತು. ಇದರ ಪರಿಣಾಮವು ಜಿಎಸ್‌ಟಿ ಸಂಗ್ರಹದಲ್ಲಿ ಗೋಚರಿಸಿತ್ತು. ಜಿಎಸ್‌ಟಿ ಸಂಗ್ರಹವು ₹ 1 ಲಕ್ಷ ಕೋಟಿಯ ಗಡಿಯನ್ನು ದಾಟಿರುವುದು ಫೆಬ್ರುವರಿ ನಂತರ ಅಕ್ಟೋಬರ್‌ನಲ್ಲಿಯೇ. ಇದರ ಸರಳ ಅರ್ಥ ಮತ್ತೇನೂ ಅಲ್ಲ; ಜನ ಮನೆಯಿಂದ ಹೊರಗೆ ಬಂದು ವಸ್ತುಗಳನ್ನು ಖರೀದಿಸುತ್ತಿದ್ದಾರೆ.ಸೇವೆಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಅಷ್ಟರಮಟ್ಟಿಗೆ ಸೇವಾ ವಲಯಕ್ಕೆ ಹಾಗೂ ತಯಾರಿಕಾ ವಲಯಕ್ಕೆ ಹಣ ಹರಿದುಬರುತ್ತಿದೆ. ವ್ಯವಸ್ಥೆಯಲ್ಲಿ ಹಣದ ಚಲಾವಣೆಯು ಹೆಚ್ಚಾಗಿದೆ. ಅರ್ಥ ವ್ಯವಸ್ಥೆಯಲ್ಲಿ ಚೇತರಿಕೆ ಕಾಣಿಸುತ್ತಿದೆ.

ADVERTISEMENT

ವ್ಯವಸ್ಥೆಯಲ್ಲಿ ಹಣದ ಚಲಾವಣೆ ಹೆಚ್ಚಾಗುತ್ತಿದೆ ಎಂದಾದರೆ, ನಿರುದ್ಯೋಗದ ಪ್ರಮಾಣ ತುಸುವಾದರೂ ಇಳಿಕೆ ಆಗಬಹುದಲ್ಲ? ನಿರುದ್ಯೋಗ ಕಡಿಮೆ ಆಗುತ್ತಿರುವುದರ ಸೂಚನೆಯೂ ಇದೆ. ಲಾಕ್‌ಡೌನ್‌ ನಿಯಮಗಳು ತೀರಾ ಕಠಿಣವಾಗಿದ್ದ ಏಪ್ರಿಲ್‌ ತಿಂಗಳಿನಲ್ಲಿ ಶೇಕಡ 23.52ರಷ್ಟಿದ್ದ ನಿರುದ್ಯೋಗದ ಪ್ರಮಾಣವು ಅಕ್ಟೋಬರ್‌ನಲ್ಲಿ ಶೇಕಡ 6.98ರಷ್ಟಕ್ಕೆ ಇಳಿದಿದೆ ಎಂಬುದನ್ನು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ) ಸಂಸ್ಥೆ ಕಲೆಹಾಕಿರುವ ಅಂಕಿ–ಅಂಶಗಳು ಹೇಳುತ್ತಿವೆ.

ಸೆಪ್ಟೆಂಬರ್‌ನಲ್ಲಿ ಶೇಕಡ 6.67ರಷ್ಟು ಇದ್ದ ನಿರುದ್ಯೋಗದ ಪ್ರಮಾಣಕ್ಕೆ ಹೋಲಿಸಿದರೆ, ಅಕ್ಟೋಬರ್‌ನಲ್ಲಿ ದಾಖಲಾಗಿರುವ ಪ್ರಮಾಣ ತುಸು ಹೆಚ್ಚಿನದು. ಹೀಗಿದ್ದರೂ, ಏಪ್ರಿಲ್‌ನಿಂದ ಆಗಸ್ಟ್‌ವರೆಗಿನ ಪ್ರಮಾಣದ ಜೊತೆ ಹೋಲಿಕೆ ಮಾಡಿದರೆ, ಅಕ್ಟೋಬರ್‌ನಲ್ಲಿ ನಿರುದ್ಯೋಗ ಪ್ರಮಾಣವು ತಗ್ಗಿರುವುದು ಗೊತ್ತಾಗುತ್ತದೆ.ವಾಣಿಜ್ಯೋದ್ಯಮಗಳ ವಿಶ್ವಾಸದ ಮಟ್ಟವು ಹೆಚ್ಚಿರುವುದನ್ನು ಭಾರತೀಯ ಕೈಗಾರಿಕೆಗಳ ಒಕ್ಕೂಟ (ಸಿಐಐ) ಸೆಪ್ಟೆಂಬರ್‌ನಲ್ಲಿ ನೀಡಿದ್ದ ಪ್ರಕಟಣೆಯು ಹೇಳಿತ್ತು. ಹಾಲಿ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ (ಏಪ್ರಿಲ್‌–ಜೂನ್‌) 41ಕ್ಕೆ ಇಳಿದಿದ್ದ ವಾಣಿಜ್ಯೋದ್ಯಮಗಳಲ್ಲಿನ ವಿಶ್ವಾಸದ ಮಟ್ಟವು, ಎರಡನೆಯ ತ್ರೈಮಾಸಿಕದಲ್ಲಿ (ಜುಲೈ–ಸೆಪ್ಟೆಂಬರ್‌) 50.3ಕ್ಕೆ ಹೆಚ್ಚಳ ಕಂಡಿದೆ.

ಎಲ್ಲ ಬಗೆಯ ಸೇವೆಗಳನ್ನು ಬಳಸಬೇಕಿರುವ ಹಾಗೂ ಉತ್ಪನ್ನಗಳನ್ನು ಖರೀದಿಸಬೇಕಿರುವ ಗ್ರಾಹಕರಲ್ಲಿನ ವಿಶ್ವಾಸ ಹೇಗಿದೆ ಎಂಬುದನ್ನು ಭಾರತೀಯ ರಿಸರ್ವ್‌ ಬ್ಯಾಂಕ್ (ಆರ್‌ಬಿಐ) ನಡೆಸಿದ ‘ಗ್ರಾಹಕರ ವಿಶ್ವಾಸದ ಸಮೀಕ್ಷೆ’ಯಲ್ಲಿ ಕಂಡುಬಂದ ಅಂಕಿ–ಅಂಶಗಳು ವಿವರಿಸುತ್ತವೆ. ಆರ್‌ಬಿಐ ಈ ಸಮೀಕ್ಷೆಯ ವಿವರಗಳನ್ನು ಅಕ್ಟೋಬರ್‌ನಲ್ಲಿ ಬಿಡುಗಡೆ ಮಾಡಿದೆ.

ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ ಎಂದು ಶೇಕಡ 9ರಷ್ಟು ಜನ ಹೇಳಿದ್ದರು. ಅದು ಇನ್ನಷ್ಟು ಬಿಗಡಾಯಿಸಿದೆ ಎಂದು ಶೇಕಡ 79.6ರಷ್ಟು ಮಂದಿ ಹೇಳಿದ್ದರು. ಆದರೆ, ಮುಂದಿನ ಒಂದು ವರ್ಷದಲ್ಲಿ ಪರಿಸ್ಥಿತಿ ಸುಧಾರಿಸಲಿದೆ ಎಂಬ ವಿಶ್ವಾಸವನ್ನು ಶೇಕಡ 50.1ರಷ್ಟು ಮಂದಿ ವ್ಯಕ್ತಪಡಿಸಿದ್ದರು. ಪರಿಸ್ಥಿತಿ ಇನ್ನಷ್ಟು ಕೆಡಲಿದೆ ಎಂದು ಹೇಳಿದ್ದವರ ಪ್ರಮಾಣ ಶೇಕಡ 34.8ರಷ್ಟು ಇತ್ತು. ‘ಮುಂದೆ ಒಳ್ಳೆಯದಾಗುತ್ತದೆ’ ಎಂದು ಹೇಳಿದವರ ಪ್ರಮಾಣ ಹೆಚ್ಚಿತ್ತು ಎಂಬುದನ್ನು ಈ ಅಂಕಿ–ಅಂಶಗಳೇ ಹೇಳುತ್ತವೆ.\

‘ಅರ್ಥ ವ್ಯವಸ್ಥೆಗೆ ಎದುರಾಗಿದ್ದ ಕೆಟ್ಟ ದಿನಗಳು ಮುಗಿದಿವೆ, ಮುಂದೆ ಒಳ್ಳೆಯದಾಗುತ್ತದೆ’ ಎಂಬ ಸೂಚನೆಗಳು ದೇಶದ ಷೇರು ಮಾರುಕಟ್ಟೆಗಳಿಂದಲೂ ಬರುತ್ತಿವೆ. ಲಾಕ್‌ಡೌನ್‌ ಜಾರಿಗೊಂಡ ಸಂದರ್ಭದಲ್ಲಿ 25 ಸಾವಿರಕ್ಕೆ ಇಳಿದಿದ್ದ ಬಿಎಸ್‌ಇ ಸೆನ್ಸೆಕ್ಸ್‌, ಈಗ 39,600 ಅಂಶಗಳ ಆಸುಪಾಸಿನಲ್ಲಿ ಇದೆ. ಸೆನ್ಸೆಕ್ಸ್ ಈಗ ಕೋವಿಡ್–19 ಪೂರ್ವದ ಸ್ಥಿತಿಗೆ ಸನಿಹದಲ್ಲಿ ಇದೆ. ‘ಅರ್ಥ ವ್ಯವಸ್ಥೆಯ ಪಾಲಿಗೆ ಮುಂದೆ ಒಳ್ಳೆಯ ದಿನಗಳು ಕಾದಿವೆ ಎಂಬ ಭರವಸೆಯಿಂದ ಹೂಡಿಕೆದಾರರು ಕಂಪನಿಗಳಲ್ಲಿ ಹಣ ಹೂಡಿಕೆ ಮಾಡುತ್ತಿದ್ದಾರೆ’ ಎಂದು ಸೆನ್ಸೆಕ್ಸ್‌ ಏರಿಕೆ ದಾಖಲಿಸಿದ್ದನ್ನು ವಿಶ್ಲೇಷಿಸುತ್ತಾರೆ ಸಾರ್ವಜನಿಕ ನೀತಿ ಸಂಶೋಧಕ ಪವನ್ ಶ್ರೀನಾಥ್.

‘ಜಿಎಸ್‌ಟಿ ಸಂಗ್ರಹ ಹೆಚ್ಚಿಗೆ ಆಗಿರುವುದು, ನಿರುದ್ಯೋಗ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿರುವುದು, ಕಾರುಗಳ ಮಾರಾಟ ಹೆಚ್ಚಾಗಿರುವುದು–ಇವೆಲ್ಲವನ್ನೂ ಒಟ್ಟಾಗಿ ಇರಿಸಿಕೊಂಡು ನೋಡಿದಾಗ ನಾವು ಆರ್ಥಿಕ ಬೆಳವಣಿಗೆಯ ಸ್ಥಿತಿಯನ್ನು ತಲುಪಿದೆವು ಎಂದು ಸಾರಾಸಗಟಾಗಿ ಹೇಳಲು ಆಗುವುದಿಲ್ಲ. ಆದರೆ, ಅರ್ಥ ವ್ಯವಸ್ಥೆಯು ಸಹಜ ಸ್ಥಿತಿಯತ್ತ ಹೋಗುತ್ತ ಇರಬಹುದು ಎಂಬುದರ ಸೂಚನೆಯನ್ನು ಇವು ನೀಡುತ್ತಿವೆ’ ಎಂದು ಪವನ್ ಅಭಿಪ್ರಾಯ ವ್ಯಕ್ತಪಡಿಸಿದರು. ‘ದೇಶದಲ್ಲಿ ಅನ್‌ಲಾಕ್‌ಪ್ರಕ್ರಿಯೆ ಜಾರಿಯಲ್ಲಿದೆ. ಆದರೆ, ಕೋವಿಡ್–19 ಇನ್ನೂ ಇದೆ. ಇನ್ನು ಮುಂದೆ ಎಲ್ಲವೂ ಚೆನ್ನಾಗಿಯೇ ಆಗುತ್ತದೆ ಎಂದು ಖಚಿತವಾಗಿ ಹೇಳುವ ಸ್ಥಿತಿಯಲ್ಲಿ ನಾವಿಲ್ಲ. ಆದರೆ, ಇದುವರೆಗೆ ನಾವು ಸುಧಾರಿಸಿಕೊಂಡ ರೀತಿ ಚೆನ್ನಾಗಿಯೇ ಇದೆ. ನಾವು ಈಗ ತಲುಪಿರುವ ಹಂತಕ್ಕೆ ಬರಲು ಇನ್ನೂ ಮೂರು ತಿಂಗಳು ಬೇಕಾಗಬಹುದಿತ್ತೇನೋ. ಆದರೆ, ನವೆಂಬರ್‌ನಲ್ಲೇ ಈ ಸ್ಥಿತಿಗೆ ಬಂದಿರುವುದು ಒಳ್ಳೆಯ ಲಕ್ಷಣ’ ಎನ್ನುತ್ತಾರೆ ಪವನ್.

‘ಜಿಎಸ್‌ಟಿ ಸಂಗ್ರಹದಲ್ಲಿ ಏರಿಕೆ ಆಗಿರುವುದು ಅರ್ಥ ವ್ಯವಸ್ಥೆಯ ಪುನಶ್ಚೇತನದ ಸೂಚನೆ ಎಂದು ಈಗಲೇ ಹೇಳಲಾರೆ. ವ್ಯವಸ್ಥೆಯು ಸಹಜ ಸ್ಥಿತಿಗೆ ಬರುವ ದಿಸೆಯಲ್ಲಿ ಒಂದಿಷ್ಟು ಬೆಳವಣಿಗೆಗಳು ಆಗಿವೆ ಎಂದು ಈಗ ಹೇಳಬಹುದು. ಇದು ಒಂದು ಬಗೆಯಲ್ಲಿ ನಮ್ಮ ಆರ್ಥಿಕ ಕಷ್ಟಗಳು ಕಡಿಮೆ ಆಗುತ್ತಿರುವುದರ ಸೂಚನೆ’ ಎಂದು ಆರ್ಥಿಕ ವಿಶ್ಲೇಷಕ ಡಾ.ಜಿ.ವಿ. ಜೋಶಿ ಅನಿಸಿಕೆ ವ್ಯಕ್ತಪಡಿಸಿದರು. ‘ಜಿಎಸ್‌ಟಿ ಸಂಗ್ರಹವು ಇನ್ನೂ ಐದರಿಂದ ಆರು ತಿಂಗಳುಗಳ ಕಾಲ ಮೇಲ್ಮಟ್ಟದಲ್ಲೇ ಇದ್ದರೆ, ವ್ಯವಸ್ಥೆ ಸುಧಾರಿಸಿದೆ ಎನ್ನಬಹುದು’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.