ನವದೆಹಲಿ: ಭಾರತದ ತಂತ್ರಜ್ಞಾನ ನವೋದ್ಯಮಗಳಲ್ಲಿ 2020ನೆ ಕ್ಯಾಲೆಂಡರ್ ವರ್ಷದ ಮೊದಲ ತ್ರೈಮಾಸಿಕದಲ್ಲಿ ₹ 18,750 ಕೋಟಿ ಮೊತ್ತದ ಬಂಡವಾಳ ಹೂಡಿಕೆಯಾಗಿದೆ.
ಹಿಂದಿನ ವರ್ಷದ ಇದೇ ಅವಧಿಯಲ್ಲಿನ ಹೂಡಿಕೆಗೆ ಹೋಲಿಸಿದರೆ ಈ ಬಾರಿ ಶೇ 14ರಷ್ಟು ಹೆಚ್ಚಳ ಕಂಡು ಬಂದಿದೆ ಎಂದು ಸಂಶೋಧನಾ ಮತ್ತು ಸಲಹಾ ಸಂಸ್ಥೆ ಹೆಕ್ಸ್‌ಜನ್ ತಿಳಿಸಿದೆ.
ಜಾಗತಿಕ ಮಟ್ಟದಲ್ಲಿ ನವೋದ್ಯಮಗಳಲ್ಲಿನ ಹೂಡಿಕೆ ಪ್ರಮಾಣವು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ 15ರಷ್ಟು (₹ 4.50 ಲಕ್ಷ ಕೋಟಿ) ಕಡಿಮೆಯಾಗಿದೆ.ಸ್ಟಾರ್ಟ್‌ಅಪ್ ಒಪ್ಪಂದಗಳ ಸಂಖ್ಯೆಯೂ ಶೇ 56ರಷ್ಟು ಕಡಿಮೆಯಾಗಿ 4,100ಕ್ಕೆ ಇಳಿದಿದೆ. ಕೊರೊನಾ ಪಿಡುಗಿನ ಕಾರಣಕ್ಕೆ ಬಂಡವಾಳ ಹೂಡಿಕೆಯ ವಿವರಗಳನ್ನು ಇನ್ನೂ ಕೆಲ ಕಂಪನಿಗಳು ಪ್ರಕಟಿಸಬೇಕಾಗಿದೆ. ಹೀಗಾಗಿ ಹೂಡಿಕೆ ವಿವರ ಬದಲಾಗಬಹುದು.
ಮೊದಲ ತ್ರೈಮಾಸಿಕವು ಜಾಗತಿಕ ನವೋದ್ಯಮ ಸಮುದಾಯಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಅಮೆರಿಕದಲ್ಲಿಯೂ ಸ್ಟಾರ್ಟ್‌ಅಪ್ ನೆರವಿನ ಪ್ರಮಾಣವು ಶೇ 10ರಷ್ಟು ಕಡಿಮೆಯಾಗಿ ₹ 2.85 ಲಕ್ಷ ಕೋಟಿಗೆ ಇಳಿದಿದೆ. ಚೀನಾದಲ್ಲಿಯೂ ಶೇ 45ರಷ್ಟು ಕಡಿಮೆಯಾಗಿದೆ.
ಹೂಡಿಕೆ ಉತ್ತೇಜನಕಾರಿ: ಜಾಗತಿಕ ವಿದ್ಯಮಾನಕ್ಕೆ ಹೋಲಿಸಿದರೆ ಭಾರತದಲ್ಲಿನ ಸ್ಟಾರ್ಟ್‌ಅಪ್‌ಗಳ ಬಂಡವಾಳ ಆಕರ್ಷಣೆಯು ಉತ್ತೇಜನಕಾರಿಯಾಗಿದೆ. ಬೌನ್ಸ್, ಸ್ವಿಗ್ಗಿ, ಕ್ಯೂರ್‌ಫಿಟ್, ಜೊಮಾಟೊ, ಫಸ್ಟ್‌ಕ್ರಾಯ್ ತಲಾ ₹ 750 ಕೋಟಿ ಬಂಡವಾಳ ಆಕರ್ಷಿಸಿವೆ.
’ಕೋವಿಡ್–19’ ಪಿಡುಗು ಕೊನೆಗೊಂಡ ನಂತರ ಆರ್ಥಿಕ ಚಟುವಟಿಕೆಗಳು ಸಹಜ ಸ್ಥಿತಿಗೆ ಮರಳಿದ ನಂತರ ದೇಶಿ ನವೋದ್ಯಮಗಳು ಬಂಡವಾಳ ಆಕರ್ಷಿಸುವ ಸಾಧ್ಯತೆ ಹೆಚ್ಚಿದೆ.
ಜಿಯೊದಲ್ಲಿ ಫೇಸ್‌ಬುಕ್ ₹ 42,750 ಕೋಟಿ ಮೊತ್ತದ ಬಂಡವಾಳ ತೊಡಗಿಸಿರುವುದನ್ನು ನೋಡಿದರೆ, ಬಂಡವಾಳ ಆಕರ್ಷಿಸುವಲ್ಲಿ ಭಾರತ ಮುಂಚೂಣಿಯಲ್ಲಿ ಇರಲಿದೆ. ಭಾರತದ ನವೋದ್ಯಮದ ಹೊಸ ಪೀಳಿಗೆಯ ಕಾರ್ಯ ಕ್ಷಮತೆಯು ವಿದೇಶಿ ಹೂಡಿಕೆದಾರರ ಗಮನ ಸೆಳೆಯುತ್ತಿದೆ.
ಭಾರತ ಸರ್ಕಾರದ ಬೆಂಬಲ ಮತ್ತು ಸ್ಥಳೀಯವಾಗಿ ಲಭ್ಯ ಇರುವ ಬಂಡವಾಳದ ನೆರವಿನಿಂದಲೂ ನವೋದ್ಯಮಗಳಿಗೆ ಭಾರಿ ಉತ್ತೇಜನ ದೊರೆಯಲಿದೆ ಎಂದು ಹೆಕ್ಸ್‌ಜನ್ ವರದಿಯಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.