ನವದೆಹಲಿ: ಸಕ್ಕರೆ ಕಾರ್ಖಾನೆಗಳಿಂದ ಕಬ್ಬು ಅರೆಯುವಿಕೆ ಪ್ರಕ್ರಿಯೆ ವಿಳಂಬವಾಗಿದೆ. ಹಾಗಾಗಿ, 2024–25ನೇ ಮಾರುಕಟ್ಟೆ ಋತುವಿನ (ಅಕ್ಟೋಬರ್–ಸೆಪ್ಟೆಂಬರ್) ಮೊದಲ ಆರು ವಾರದಲ್ಲಿ ಸಕ್ಕರೆ ಉತ್ಪಾದನೆಯು ಶೇ 44ರಷ್ಟು ಇಳಿಕೆಯಾಗಲಿದೆ ಎಂದು ಸಹಕಾರ ಸಕ್ಕರೆ ಕಾರ್ಖಾನೆಗಳ ರಾಷ್ಟ್ರೀಯ ಒಕ್ಕೂಟ (ಎನ್‌ಎಫ್‌ಸಿಎಸ್‌ಎಫ್‌ಎಲ್) ತಿಳಿಸಿದೆ.
ಕಳೆದ ವರ್ಷದ ಈ ಅವಧಿಯಲ್ಲಿ 12.70 ಲಕ್ಷ ಟನ್ ಸಕ್ಕರೆ ಉತ್ಪಾದನೆಯಾಗಿತ್ತು. ಈ ಬಾರಿ 7.10 ಲಕ್ಷ ಟನ್ ಉತ್ಪಾದನೆಯಾಗುವ ನಿರೀಕ್ಷೆಯಿದೆ ಎಂದು ಹೇಳಿದೆ.
ದೇಶದಲ್ಲಿ ಶುಕ್ರವಾರದವರೆಗೆ 144 ಕಾರ್ಖಾನೆಗಳು ಕಬ್ಬು ಅರೆಯುವಿಕೆ ಆರಂಭಿಸಿವೆ. ಕಳೆದ ಋತುವಿನಲ್ಲಿ ಇದೇ ಅವಧಿಯಲ್ಲಿ 264 ಕಾರ್ಖಾನೆಗಳಿಂದ ಕಬ್ಬು ಅರೆಯುವಿಕೆ ಆರಂಭಗೊಂಡಿತ್ತು ಎಂದು ಹೇಳಿದೆ.
ಹಿಂದಿನ ವರ್ಷದ ಇದೇ ಅವಧಿಯಲ್ಲಿ ಮಹಾರಾಷ್ಟ್ರದಲ್ಲಿ 103 ಕಾರ್ಖಾನೆಗಳು ಕಬ್ಬು ಅರೆಯುವಿಕೆ ಆರಂಭಿಸಿದ್ದವು. ಈ ಬಾರಿ ಅಲ್ಲಿ ಇನ್ನೂ ಅರೆಯುವಿಕೆ ಪ್ರಕ್ರಿಯೆಗೆ ಚಾಲನೆ ಸಿಕ್ಕಿಲ್ಲ ಎಂದು ತಿಳಿಸಿದೆ.
ಈ ಬಾರಿ ಕಬ್ಬಿನ ರಿಕವರಿ ಪ್ರಮಾಣವು (ಕಬ್ಬಿನಲ್ಲಿರುವ ಸಕ್ಕರೆ ಅಂಶ) ಶೇ 7.82ರಷ್ಟು ಇರಲಿದೆ ಎಂದು ಹೇಳಿದೆ.
ಕಳೆದ ಮಾರುಕಟ್ಟೆ ಋತುವಿನಲ್ಲಿ 319 ಲಕ್ಷ ಟನ್‌ನಷ್ಟು ಸಕ್ಕರೆ ಉತ್ಪಾದನೆಯಾಗಿತ್ತು. ಈ ವರ್ಷ 280 ಲಕ್ಷ ಟನ್ ಉತ್ಪಾದನೆಯಾಗುವ ನಿರೀಕ್ಷೆಯಿದೆ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.